
ಬೆಂಗಳೂರು(ಡಿ.21): ಒಂದು ಸಂದರ್ಭದಲ್ಲಿ ಕೇವಲ 8-10 ದಿನಗಳಲ್ಲಿ ಕೊರೋನಾದಿಂದ ಸಾವಿಗೀಡಾಗುವವರ ಸಂಖ್ಯೆ ಸಾವಿರ ದಾಟುತ್ತಿದ್ದ ರಾಜ್ಯದಲ್ಲಿ ಈಗ ಸಾವಿನ ಆರ್ಭಟ ಕಡಿಮೆಯಾಗುತ್ತಿದ್ದು, ಪ್ರಸ್ತುತ ಸಾವಿನ ಸಂಖ್ಯೆ ಸಾವಿರ ತಲುಪಲು 52 ದಿನವನ್ನು ಮಹಾಮಾರಿ ಕೊರೋನಾ ತೆಗೆದುಕೊಂಡಿದೆ.
ಈ ತಿಂಗಳ ಆರಂಭದಿಂದ ಡಿ.19ರವರೆಗೆ ಒಟ್ಟು 217 ಸಾವು ವರದಿಯಾಗಿದೆ. ಈ ತಿಂಗಳ ದೈನಂದಿನ ಸಾವಿನ ಸರಾಸರಿ 10.85 ರಷ್ಟಿದೆ. ಡಿ.14 ರಿಂದ 20ರವರೆಗೆ ಸಾವಿನ ದೈನಂದಿನ ಸರಾಸರಿ 7.85ಕ್ಕೆ ಕುಸಿದಿದ್ದು, ಇದು ಕೂಡ ಕೊರೋನಾ ತಾರಕಕ್ಕೆ ಏರಿದ ಬಳಿಕ (ಜುಲೈ ತಿಂಗಳಿನಿಂದ) ವಾರದ ಅತ್ಯಂತ ಕಡಿಮೆ ಸರಾಸರಿ ಆಗಿದೆ.
ರಾಜ್ಯದಲ್ಲಿ ಮಾಚ್ 11ರಂದು ಕೊರೋನಾ ಸೋಂಕಿನಿಂದ ಮೊದಲ ಸಾವು ಸಂಭವಿಸಿತ್ತು. ಆದಾದ ನಂತರ ಸಾವಿನ ಸಂಖ್ಯೆ ಸಾವಿರ ತಲುಪಲು (ಜೂ. 16ಕ್ಕೆ ) 127 ದಿನಗಳನ್ನು ತೆಗೆದುಕೊಂಡಿತ್ತು ಅಲ್ಲಿಂದ ಕೊರೋನಾ ಸೋಂಕಿನದ್ದು ಮಿಂಚಿನ ಓಟ. ಅಲ್ಲಿಂದ ಕೇವಲ 12 ದಿನದಲ್ಲೇ ಸಾವಿನ ಸಂಖ್ಯೆ ಎರಡು ಸಾವಿರ ಮುಟ್ಟಿತ್ತು. ಆನಂತರ ಎಂಟು, ಒಂಬತ್ತು ದಿನದಲ್ಲೇ ಸಾವಿರ, ಸಾವಿರ ಸಾವು ದಾಖಲಾಗುತ್ತ ಹೋಗಿತ್ತು. ಕೇವಲ ಆಗಸ್ಟ್, ಸೆಪ್ಟೆಂಬರ್ ಎರಡು ತಿಂಗಳಿನಲ್ಲಿಯೇ ಆರು ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.
ಸಾವಿನ ಸಂಖ್ಯೆ ಎಂಟು ಸಾವಿರದಿಂದ ಒಂಬತ್ತು ಸಾವಿರ ತಲುಪಲು ಹದಿಮೂರು ದಿನ ತೆಗೆದುಕೊಂಡರೆ, ಒಂಬತ್ತು ಸಾವಿರದಿಂದ ಹತ್ತು ಸಾವಿರ ಸಾವು ಕೇವಲ ಹತ್ತು ದಿನದಲ್ಲಿ ವರದಿಯಾಗಿತ್ತು. ಅಲ್ಲಿಂದ ಹನ್ನೊಂದು ಸಾವಿರ ಸಾವು ಹದಿನಾರು ದಿನಗಳಲ್ಲಿ ವರದಿಯಾಗಿತ್ತು. ಅಕ್ಟೋಬರ್ 28 ರಂದು ಸಾವಿನ ಸಂಖ್ಯೆ ಹನ್ನೊಂದು ಸಾವಿರ ದಾಟಿತ್ತು. ಹನ್ನೆರಡು ಸಾವಿರ ಸಾವು ದಾಖಲಾಗಲು 52 ದಿನಗಳನ್ನು ತೆಗೆದುಕೊಂಡಿದೆ.
ಡಿಸೆಂಬರ್ ತಿಂಗಳಲ್ಲಿನ ಈವರೆಗಿನ ದೈನಂದಿನ ಸರಾಸರಿ ಸಾವಿನ ಪ್ರಮಾಣ 11.15 ರಷ್ಟಿದೆ. ನವೆಂಬರ್ ಕೊನೆಯ ವಾರ ಈ ಪ್ರಮಾಣ 14.28 ಆಗಿತ್ತು. ನವೆಂಬರ್ ಹದಿನೈದರಿಂದ ನವೆಂಬರ್ 30ರ ವರೆಗಿನ ಅವಧಿಯಲ್ಲಿ ಪ್ರತಿದಿನ ಸರಾಸರಿ 16.6ರಷ್ಟುಸಾವು ವರದಿಯಾಗುತ್ತಿತ್ತು. ನವೆಂಬರ್ ಉತ್ತರಾರ್ಧಕ್ಕೆ ಹೋಲಿಸಿದರೆ ಡಿಸೆಂಬರ್ ನಲ್ಲಿ ಸಾವಿನ ಪ್ರಮಾಣ ಅರ್ಧಕ್ಕರ್ಧ ಕಡಿಮೆ ಆಗಿದೆ.
ರಾಜರಾಜೇಶ್ವರಿ, ಶಿರಾ ಕ್ಷೇತ್ರಗಳ ಉಪಚುನಾವಣೆ, ಗ್ರಾಮ ಪಂಚಾಯತ್ ಚುನಾವಣೆಯ ಅಬ್ಬರದ ಪ್ರಚಾರ, ಕರ್ನಾಟಕ ರಾಜ್ಯೋತ್ಸವ, ದೀಪಾವಳಿ, ಈದ್ ಮಿಲಾದ್ ಹಬ್ಬ, ಕಾಲೇಜ್ ಪುನರಾರಂಭ ಮತ್ತು ಚಳಿಗಾಲದಲ್ಲಿ ವೈರಸ್ ಹಬ್ಬುವ ಸಾಧ್ಯತೆ ಹೆಚ್ಚಿದ್ದರೂ ಸಾವಿನ ಪ್ರಮಾಣ ಕಡಿಮೆಯಾಗಿರುವುದು ನೆಮ್ಮದಿಯ ಸಂಗತಿಯಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ