ಕಾರವಾರದಲ್ಲಿ ಚೀನಾ ಜಿಪಿಎಸ್ ಟ್ರ್ಯಾಕರ್ ಹೊಂದಿದ ಸೀಗಲ್ ಹಕ್ಕಿ: ಎಲೆಕ್ಟ್ರಾನಿಕ್ ಡಿವೈಸ್ ಸತ್ಯ ಬಿಚ್ಚಿಟ್ಟ ಎಸ್‌ಪಿ!

Published : Dec 18, 2025, 03:45 PM IST
Karwar beach Seagull Bird China GPS

ಸಾರಾಂಶ

ಕಾರವಾರದ ಕಡಲತೀರದಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ಗಾಯಗೊಂಡ ಸೀಗಲ್ ಹಕ್ಕಿಯೊಂದು ಪತ್ತೆಯಾಗಿದೆ. ಪೊಲೀಸರು ಮತ್ತು ಅರಣ್ಯ ಇಲಾಖೆ ತನಿಖೆ ನಡೆಸುತ್ತಿದ್ದು, ಇದು ವೈಜ್ಞಾನಿಕ ಅಧ್ಯಯನದ ಭಾಗವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಭದ್ರತಾ ದೃಷ್ಟಿಯಿಂದಲೂ ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ.

ಕಾರವಾರ (ಡಿ.18): ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡಲತೀರದಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ಅಪರೂಪದ ಹಕ್ಕಿಯೊಂದು ಪತ್ತೆಯಾಗಿದ್ದು, ಜಿಲ್ಲಾ ಪೊಲೀಸ್ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದೆ. ಈ ಹಕ್ಕಿಯ ಕಾಲಿನಲ್ಲಿರುವ ರಿಂಗ್ ಮತ್ತು ಬೆನ್ನ ಮೇಲಿರುವ ಎಲೆಕ್ಟ್ರಾನಿಕ್ ಡಿವೈಸ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅದನ್ನು ಫಾರೆನ್ಸಿಕ್ ವಿಭಾಗಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ. ಎನ್. ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಡಿಸೆಂಬರ್ 16 ರಂದು ಕಾರವಾರದ ಕಡಲತೀರದಲ್ಲಿ ಗಾಯಗೊಂಡ ಸ್ಥಿತಿಯಲ್ಲಿದ್ದ 'ಸೀಗಲ್' (Seagull) ಹಕ್ಕಿಯೊಂದು ಸ್ಥಳೀಯರಿಗೆ ಕಂಡುಬಂದಿತ್ತು. ಅದರ ದೇಹದ ಮೇಲೆ ವಿಚಿತ್ರವಾದ ಜಿಪಿಎಸ್ ಟ್ರ್ಯಾಕರ್ ಮತ್ತು ಕಾಲಿಗೆ ರಿಂಗ್ ಅಳವಡಿಸಿರುವುದು ಕುತೂಹಲಕ್ಕೆ ಕಾರಣವಾಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹಕ್ಕಿಯನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಮತ್ತು ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಹಕ್ಕಿಯನ್ನು ಹೆಚ್ಚಿನ ನಿಗಾ ಮತ್ತು ಚಿಕಿತ್ಸೆಗಾಗಿ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಕ್ಕೆ ರವಾನಿಸಲಾಗಿದೆ.

ಸೈಬೀರಿಯನ್ ಕನೆಕ್ಷನ್ ಮತ್ತು ವೈಜ್ಞಾನಿಕ ಅಧ್ಯಯನ

ಪ್ರಾಥಮಿಕ ತನಿಖೆಯ ಪ್ರಕಾರ, ಇದು ಸೈಬೀರಿಯನ್ ವಲಸೆ ಹಕ್ಕಿಯಾಗಿದ್ದು, ಇದರ ಮೇಲೆ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ (Chinese Academy of Sciences) ವತಿಯಿಂದ ಸಂಶೋಧನೆಗಾಗಿ ಜಿಪಿಎಸ್ ಅಳವಡಿಸಿರುವ ಸಾಧ್ಯತೆಯಿದೆ. ಪಕ್ಷಿಗಳ ಚಲನವಲನ ಮತ್ತು ವಲಸೆ ದಾರಿಯನ್ನು ಅಧ್ಯಯನ ಮಾಡಲು ಇಂತಹ ಡಿವೈಸ್‌ಗಳನ್ನು ಅಳವಡಿಸಲಾಗುತ್ತದೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ಪಕ್ಷಿ ಅಧ್ಯಯನ ಕಾರ್ಯಕ್ರಮದ ಭಾಗವಾಗಿ ಈ ಹಕ್ಕಿಗೆ ಟ್ರ್ಯಾಕರ್ ಅಳವಡಿಸಿರುವ ಶಂಕೆಯಿದೆ. ಟ್ರ್ಯಾಕರ್ ಮೇಲೆ ಒಂದು ಇಮೇಲ್ ಐಡಿ ಕೂಡ ಇದ್ದು, 'ಪಕ್ಷಿ ಕಂಡುಬಂದರೆ ಸಂಪರ್ಕಿಸಿ' ಎಂಬ ಸಂದೇಶವಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಪೊಲೀಸರ ಮುನ್ನೆಚ್ಚರಿಕೆ

ಇದು ವೈಜ್ಞಾನಿಕ ಅಧ್ಯಯನದ ಭಾಗವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂಬ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಅನ್ನು ಫಾರೆನ್ಸಿಕ್ ಪರೀಕ್ಷೆಗೆ ಒಳಪಡಿಸಲಾಗಿದೆ. 'ಸಾಮಾನ್ಯವಾಗಿ ಅರಣ್ಯ ಇಲಾಖೆಗಳು ಪಕ್ಷಿಗಳ ಅಧ್ಯಯನಕ್ಕೆ ಕಾಲರ್ ಐಡಿ ಬಳಸುತ್ತವೆ. ಆದರೆ ಕಾರವಾರದ ಕಡಲತೀರವು ಆಯಕಟ್ಟಿನ ಪ್ರದೇಶವಾಗಿರುವುದರಿಂದ ಭದ್ರತೆಯ ದೃಷ್ಟಿಯಿಂದ ನಾವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ' ಎಂದು ಎಸ್ಪಿ ದೀಪನ್ ಎನ್. ಎನ್. ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನೀವು ಕರಾವಳಿಯವರು ಬೆಂಕಿ ಹಚ್ಚೋರು'- ಸಚಿವ ಬೈರತಿ ಸುರೇಶ್; ಶಾಸಕ ಸುನೀಲ್ ಕುಮಾರ್ ಆಕ್ರೋಶ
ಮಲ್ಲಿಕಾರ್ಜುನ ಖರ್ಗೆಗೆ 'ಭಾರತ ರತ್ನ' ನೀಡುವಂತೆ ಕಾಂಗ್ರೆಸ್ ಮುಖಂಡ ಆಗ್ರಹ