ಕಿತ್ತೂರು ಬಳಿ ಕೆಐಎಡಿಬಿ ಜಾಗದಲ್ಲಿ 1,000 ಎಕರೆ ಕೈಗಾರಿಕಾ ಟೌನ್‌ಶಿಪ್ ನಿರ್ಮಿಸಲು ನಿರ್ಧರಿಸಲಾಗಿದೆ. ಶೀಘ್ರ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿ 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿ (ಅ.25): ಕಿತ್ತೂರು ಬಳಿ ಕೆಐಎಡಿಬಿ ಜಾಗದಲ್ಲಿ 1,000 ಎಕರೆ ಕೈಗಾರಿಕಾ ಟೌನ್‌ಶಿಪ್ ನಿರ್ಮಿಸಲು ನಿರ್ಧರಿಸಲಾಗಿದೆ. ಶೀಘ್ರ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿ 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಸೋಮವಾರ ರಾಜ್ಯಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವ ಉದ್ಘಾಟಿಸಿ ಮಾತನಾಡಿದರು.
ಧಾರವಾಡ-ಬೆಳಗಾವಿ ರೈಲು ಮಾರ್ಗವನ್ನು ಕಿತ್ತೂರು ಮಾರ್ಗವಾಗಿ ನಿರ್ಮಿಸಲಾಗುವುದು. ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಸಂಬಂಧಿಸಿ ಇನ್ನು ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ಸಿಗಲಿದೆ. ಅಲ್ಲದೆ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಿದೆ. ಅದರ ಅನುಷ್ಠಾನಕ್ಕೂ ಶೀಘ್ರ ಕಾಲ ಕೂಡಿ ಬರಲಿದೆ ಎಂದರು.
ಶಿಗ್ಗಾಂವಿ ಕ್ಷೇತ್ರದ ಅಭಿವೃದ್ಧಿ ಕನಸು ನನಸಾಗುವ ಕಾಲ ಬಂದಿದೆ: ಸಿಎಂ ಬೊಮ್ಮಾಯಿ
ಮುಂದಿನ ತಿಂಗಳು ಅಡಿಗಲ್ಲು: ಸುವರ್ಣಸೌಧದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಮುಂದಿನ ತಿಂಗಳು ಅಡಿಗಲ್ಲು ಇಡಲಾಗುವುದು ಎಂದು ಬೊಮ್ಮಾಯಿ ಇದೇ ವೇಳೆ ಪ್ರಕಟಿಸಿದರು. ಜತೆಗೆ, ನಮ್ಮ ಅವಧಿಯಲ್ಲೇ ಉದ್ಘಾಟನೆಯನ್ನೂ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು. ರೈತರ ಮನವೊಲಿಸಿ ಜಮೀನು ಸ್ವಾಧೀನಪಡಿಸಿಕೊಂಡು ಈಗಿರುವ ಚನ್ನಮ್ಮನ ಕೋಟೆಯ ಪಕ್ಕದಲ್ಲೇ ಅರಮನೆಯ ಪ್ರತಿರೂಪ ನಿರ್ಮಿಸಲಾಗುವುದು. ಶಿಥಿಲಾವಾಸ್ಥೆಯಲ್ಲಿರುವ ಕೋಟೆಯ ಜೀರ್ಣೋದ್ಧಾರಕ್ಕೆ .27 ಕೋಟಿ ಅನುದಾನವನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ತೆಗೆದಿರಿಸಲಾಗಿದೆ ಎಂದರು.
ಮೂಢನಂಬಿಕೆಗೆ ಸಡ್ಡು ಹೊಡೆದ ಸಿಎಂ: ಚನ್ನಮ್ಮನ ಉತ್ಸವಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬುದು ಹಿಂದಿನ ನಂಬಿಕೆ. ಇದಕ್ಕೆ ಸಡ್ಡು ಹೊಡೆದು ಮುಖ್ಯಮಂತ್ರಿಯಾಗಿ 2 ಬಾರಿ ಉತ್ಸವಕ್ಕೆ ಬಂದಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕಿತ್ತೂರು ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತೇ ಎಂಬ ಮೌಢ್ಯ ಎಲ್ಲ ಮುಖ್ಯಮಂತ್ರಿಗಳಲ್ಲಿದೆ. ಎಸ್.ಬಂಗಾರಪ್ಪ ಸಿಎಂ ಆಗಿದ್ದಾಗ ಕಿತ್ತೂರು ಉತ್ಸವ ಆಚರಣೆಗೆ ಚಾಲನೆ ನೀಡಿದ್ದರು. ಅವರು ಸಿಎಂ ಆಗಿ ಕಿತ್ತೂರಿಗೆ ಬಂದು ಹೋಗಿ ಕೆಲವೇ ದಿನಗಳಲ್ಲಿ ಅಧಿಕಾರ ಹೋಯಿತು.
ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ: ಸಿಎಂ ಬೊಮ್ಮಾಯಿ ಹರ್ಷ
ಆ ಬಳಿಕ ಕಿತ್ತೂರು ಉತ್ಸವಕ್ಕೆ ಬಂದರೆ ಮುಖ್ಯಮಂತ್ರಿ ಗಾದಿ ಹೋಗುತ್ತದೆ ಎಂದು ಬಿಂಬಿಸಲಾಯಿತು. ಅಂದಿನಿಂದ ಹಲವು ಮುಖ್ಯಮಂತ್ರಿಗಳು ಕಿತ್ತೂರು ಉತ್ಸವಕ್ಕೆ ಬರಲೇ ಇಲ್ಲ. ಕಳೆದ ವರ್ಷ ನನಗೂ ಕಿತ್ತೂರು ಉತ್ಸವಕ್ಕೆ ಹೋಗಬೇಡಿ ಎಂದು ಕೆಲವರು ಸಲಹೆ ನೀಡಿದ್ದರು. ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತೆ ಎಂಬುದು ಮೂಢನಂಬಿಕೆ ಅಷ್ಟೆ. ಚಾಮರಾಜನಗರಕ್ಕೆ ಹೋದ್ರೂ ಅಧಿಕಾರ ಹೋಗುತ್ತದೆ ಎಂದು ಹೇಳುತ್ತಾರೆ. ಕಿತ್ತೂರು ಹಾಗೂ ಚಾಮರಾಜ ನಗರ ಎರಡೂ ಕಡೆ ಮುಖ್ಯಮಂತ್ರಿಯಾಗಿ ನಾನು ಹೋಗಿ ಬಂದಿದ್ದೇನೆ ಎಂದು ಹೇಳಿದರು.