ಖಾಸಗಿ ಸಾಲಕ್ಕೆ ಬಲಿಯಾದ ಕುಟುಂಬಗಳಿಗೂ ಪರಿಹಾರ

By Kannadaprabha NewsFirst Published Jul 14, 2021, 9:32 AM IST
Highlights

* ಹೈಕೋರ್ಟ್‌ಗೆ ಸರ್ಕಾರ ಹೇಳಿಕೆ
ಈ ಕುರಿತು ಜು.8ರಂದು ಆದೇಶ 
* ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ
 

ಬೆಂಗಳೂರು(ಜು.14):  ಪರವಾನಗಿ ಪಡೆದ ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಪರಿಹಾರ ನೀಡಲು ನಿರ್ಧರಿಸಿದ್ದು, ಈ ಕುರಿತು ಜು.8ರಂದು ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತರಿಗೆ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 2016ರಿಂದ ಬೆಳೆ ನಷ್ಟ ವಿಮೆ ಪರಿಹಾರ ವಿತರಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆಗೆ ಹಾಜರಾಗಿದ್ದ ಸರ್ಕಾರದ ಪರ ವಕೀಲ ವಿಜಯ್‌ಕುಮಾರ್‌ ಪರವಾನಗಿ ಪಡೆದ ಖಾಸಗಿ ಲೇವಾದೇವಿಯವರಿಂದ ಪಡೆದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೂ ಕಲ್ಪಿಸುವ ಸಂಬಂಧ ಜು.8ರಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಶಹಾಪೂರ: ಸಾಲಬಾಧೆ ತಾಳದೆ ಆತ್ಮಹತ್ಯೆಗೆ ಶರಣಾದ ಅನ್ನದಾತ

ಸರ್ಕಾರದ ಆದೇಶಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲ ಕ್ಲಿಫ್ಟನ್‌ ರೋಜಾರಿಯೋ, ಪರವಾನಗಿ ಹೊಂದಿರದ ಲೇವಾದೇವಿದಾರರಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ. ಸಾಲ ಪಡೆಯುವ ರೈತರು ಯಾವ ಲೇವಾದೇವಿದಾರರ ಪರವಾನಗಿ ಹೊಂದಿದ್ದಾರೆ, ಯಾರು ಹೊಂದಿಲ್ಲ ಎಂಬುದನ್ನು ನೋಡುವುದಿಲ್ಲ. ಆ ವಿಚಾರ ರೈತರಿಗೆ ತಿಳಿಯುವುದಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪರವಾನಗಿ ಹೊಂದಿರದ ಲೇವಾದೇವಿದಾರರಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಪರಿಹಾರ ನೀಡದಿರಲು ಸರ್ಕಾರ ಕೈಗೊಂಡಿರುವ ತೀರ್ಮಾನವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅರ್ಜಿದಾರರು ಮುಕ್ತರಾಗಿದ್ದಾರೆ ಎಂದು ತಿಳಿಸಿತು.

ಪರವಾನಗಿ ಹೊಂದಿದ ಲೇವಾದೇವಿದಾರರಿಂದ ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳನ್ನು ಸರ್ಕಾರ ಪತ್ತೆ ಹಚ್ಚಿ ಪರಿಹಾರ ನೀಡಲು ಪರಿಗಣಿಸಬೇಕು. ಈ ಹಿಂದೆ ಪರಿಹಾರಕ್ಕೆ ಇಂತಹ ರೈತರ ಕಟುಂಬಗಳು ಅರ್ಜಿ ಸಲ್ಲಿಸಿದ್ದು, ಬ್ಯಾಂಕುಗಳಿಂದ ಸಾಲ ಪಡೆದಿಲ್ಲ ಎಂಬ ಕಾರಣಕ್ಕೆ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಹಾಗಾಗಿ ಪರಿಹಾರ ಕಲ್ಪಿಸುವಾಗ ಈ ಕುಟುಂಬಗಳನ್ನು ಪರಿಗಣಿಸಬೇಕು. ಈ ಆದೇಶದ ಅನುಪಾಲನಾ ವರದಿಯನ್ನು ಆ.13ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
 

click me!