ಏಳನೇ ವೇತನ ಆಯೋಗ ಜಾರಿ, ನೂತನ ಪಿಂಚಣಿ ಪದ್ಧತಿ(ಎನ್‌ಪಿಎಸ್) ರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ ಸರ್ಕಾರಿ ನೌಕರರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಮನವೊಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ತಡರಾತ್ರಿವರೆಗೂ ಪ್ರಯತ್ನ ನಡೆಸಿದ್ದಾರೆ.
---
ಬೆಂಗಳೂರು (ಮಾ.1) : ಏಳನೇ ವೇತನ ಆಯೋಗ ಜಾರಿ, ನೂತನ ಪಿಂಚಣಿ ಪದ್ಧತಿ(ಎನ್‌ಪಿಎಸ್) ರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ ಸರ್ಕಾರಿ ನೌಕರರು ಬುಧವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಮನವೊಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ತಡರಾತ್ರಿವರೆಗೂ ಪ್ರಯತ್ನ ನಡೆಸಿದ್ದಾರೆ.
ವಿವಿಧ ಬೇಡಿಕೆ ಈಡೇರಿಸಲು ಕೆಲ ತಿಂಗಳಿನಿಂದ ಆಗ್ರಹಿಸುತ್ತಿದ್ದ ಸಂಘ, ಸರ್ಕಾರಕ್ಕೆ ಹಲವು ಬಾರಿ ಗಡುವನ್ನೂ ನೀಡಿತ್ತು. ಆದರೆ ಸರ್ಕಾರದಿಂದ ಆದೇಶ ಹೊರಬೀಳದ ಹಿನ್ನೆಲೆಯಲ್ಲಿ ಬುಧವಾರದಿಂದ ರಾಜ್ಯಾದ್ಯಂತ ಸುಮಾರು 8 ಲಕ್ಷದಷ್ಟುಸರ್ಕಾರಿ ನೌಕರರು(Karnataka govt employees) ಅನಿರ್ದಿಷ್ಟಾವಧಿ ಪ್ರತಿಭಟನೆ( indefinite strike )ಗೆ ನಿರ್ಧರಿಸಿದ್ದಾರೆ.
ಮಾರ್ಚ್ 1 ರಿಂದ ಸರ್ಕಾರಿ ನೌಕರರ ಮುಷ್ಕರ, ನಾಳೆಯಿಂದ ಯಾವ ಕೆಲಸವೂ ನಡೆಯುವುದಿಲ್ಲ!
ಇದಕ್ಕೂ ಮುನ್ನ ಮಂಗಳವಾರ ಮಧ್ಯಾಹ್ನ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ(CS Shadakshari) ಮತ್ತು ಪದಾಧಿಕಾರಿಗಳೊಂದಿಗೆ ವಿಧಾನಸೌಧ(Vidhanasoudha)ದಲ್ಲಿ ಸಭೆ ನಡೆಸಿದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ(Karnataka Chief Secretary Vandita Sharma), ‘ಮುಷ್ಕರ ಕೈಬಿಟ್ಟು ಬೇಡಿಕೆಗಳ ಈಡೇರಿಕೆಗೆ ಕಾಲಾವಕಾಶ ನೀಡುವಂತೆ’ ಕೋರಿದರು. ಆದರೆ ಇದಕ್ಕೆ ಸುತಾರಾಂ ಒಪ್ಪದ ಪದಾಧಿಕಾರಿಗಳು, ‘ಈಗಾಗಲೇ ಒಂದು ವರ್ಷ ಸಮಯ ನೀಡಿದ್ದೇವೆ. ಆದರೂ ಏನೂ ಪ್ರಯೋಜನವಾಗಿಲ್ಲ’ ಎಂದು ಹೇಳಿ ಮುಷ್ಕರ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.
‘ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಿದರೂ ನಾವು ಮುಷ್ಕರ ವಾಪಸ್ ಪಡೆಯುವುದಿಲ್ಲ. ಈ ಸಂಬಂಧ ಸರ್ಕಾರಿ ಆದೇಶ ಹೊರಬಿದ್ದರೆ ಮಾತ್ರ ಮುಷ್ಕರ ಕೈಬಿಡಲಾಗುವುದು. ಇಲ್ಲದಿದ್ದರೆ ಹೋರಾಟಕ್ಕೆ ನಾವು ಸಿದ್ಧವಾಗಿದ್ದೇವೆ’ ಎಂದು ಸಂಘ ಖಡಾಖಂಡಿತವಾಗಿ ಹೇಳಿದೆ. ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರಾತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವೊಲಿಸಲು ಯತ್ನಿಸಿದ್ದು ತಡರಾತ್ರಿಯೂ ಸಭೆ ಮುಂದುವರೆದಿತ್ತು.
ವಾರದ ಹಿಂದೆಯೇ ಕಬ್ಬನ್ ಪಾರ್ಕ್ನ ಕಚೇರಿಯಲ್ಲಿ ಸಭೆ ಸೇರಿದ್ದ ಸಂಘದ ಪದಾಧಿಕಾರಿಗಳು, ಸರ್ಕಾರಕ್ಕೆ ವಾರದ ಗಡುವು ನೀಡಿ ಮುಷ್ಕರದ ನೋಟಿಸ್ ನೀಡಿದ್ದರು. ಗಡುವು ಮೀರಿದರೂ ಸರ್ಕಾರ ಕ್ರಮ ಕೈಗೊಳ್ಳದಿದ್ದರಿಂದ ಪೂರ್ವ ನಿಗದಿಯಂತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ಹಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಬಿಎಂಟಿಸಿ(BMTC), ಕೆಎಸ್‌ಆರ್‌ಟಿಸಿ(KSRTC) ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ನೀರು ಸರಬರಾಜು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗವನ್ನು ಬಂದ್ ಮಾಡಲಿದ್ದು ತುರ್ತು ಸೇವೆ ಮಾತ್ರ ನೀಡಲಾಗುತ್ತದೆ. ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳ ಸಿಬ್ಬಂದಿಯೂ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಬಿಬಿಎಂಪಿ, ಸರ್ಕಾರಿ ವಿದ್ಯಾರ್ಥಿ ನಿಲಯಗಳು, ಜಿಲ್ಲಾ ಮತ್ತು ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಕಚೇರಿಯ ಸಿಬ್ಬಂದಿಯೂ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು ಸಾರ್ವಜನಿಕರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಎಸ್ಮಾಗೂ ಹೆದರಲ್ಲ: ನೌಕರರ ಸಡ್ಡು
ಮಂಗಳವಾರ ಮುಷ್ಕರದ ರೂಪುರೇಷೆ ನಿರ್ಧರಿಸಲು ಕಬ್ಬನ್ ಪಾರ್ಕ್ನಲ್ಲಿರುವ ಸಂಘದ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಷಡಕ್ಷರಿ, ಬುಧವಾರದಿಂದ ಎಲ್ಲ ಇಲಾಖೆಯ ಸರ್ಕಾರಿ ನೌಕರರು ಕೆಲಸಕ್ಕೆ ಗೈರಾಗಲಿದ್ದಾರೆ. ಅಮಾನತು ಮಾಡಿದರೂ ಹೆದರುವುದಿಲ್ಲ. ಎಸ್ಮಾ(ಅಗತ್ಯಸೇವೆ ನಿರ್ವಹಣಾ ಕಾಯ್ದೆ) ಜಾರಿ ಮಾಡಿದರೂ ಚಿಂತಿಸುವುದಿಲ್ಲ ಎಂದು ಎಚ್ಚರಿಸಿದರು.
ನಾವೆಲ್ಲಾ ಒಗ್ಗಟ್ಟಾಗಿದ್ದು ಸಾಮೂಹಿಕ ನಾಯಕತ್ವದಲ್ಲಿ ಮುಷ್ಕರ ನಡೆಸುತ್ತೇವೆ. ಹೋರಾಟ ನಡೆಸಲೇಬೇಕಾದ ಅನಿವಾರ್ಯ ಹಂತಕ್ಕೆ ಬಂದಿದ್ದೇವೆ. ನಾಗರಿಕರಿಗೆ ತೊಂದರೆ ಆಗದಂತೆ ಮುಷ್ಕರ ನಡೆಸುತ್ತೇವೆ. ತುರ್ತು ಸೇವೆ ಹೊರತುಪಡಿಸಿ ಎಲ್ಲ ಸರ್ಕಾರಿ ನೌಕರರೂ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಆದ್ದರಿಂದ ನಮ್ಮ ಹೋರಾಟಕ್ಕೆ ನಾಗರಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಧ್ಯಂತರ ವರದಿ ಪಡೆದು 7ನೇ ವೇತನ ಆಯೋಗ ಜಾರಿ ಮಾಡಬೇಕು. ಹೊಸ ಪಿಂಚಣಿ ಪದ್ಧತಿ ರದ್ದು ಮಾಡಿ ಹಳೆಯ ಪದ್ಧತಿಯನ್ನೇ ಮುಂದುವರೆಸಬೇಕು ಎಂಬುದು ನಮ್ಮ ಎರಡು ಪ್ರಮುಖ ಬೇಡಿಕೆಗಳಾಗಿವೆ. 7ನೇ ವೇತನ ಆಯೋಗ ಜಾರಿಯಿಂದ ಸರ್ಕಾರಕ್ಕೆ ಸುಮಾರು 12 ಸಾವಿರ ಕೋಟಿ ರು. ಹೊರೆಯಾಗಲಿದೆ. ತೆರಿಗೆ ಸಂಗ್ರಹಣೆಗೆ ಕಟ್ಟುನಿಟ್ಟಾಗಿ ಸೂಚಿಸಲಿ. ದುಡಿಯುವ ಸಮಯ ಹೆಚ್ಚಳ ಮಾಡಲಿ. ಎಲ್ಲದಕ್ಕೂ ನಾವು ಸಿದ್ಧರಾಗಿದ್ದೇವೆ. ಲಿಖಿತ ಭರವಸೆಗೆ ರಾಜಿಯಾಗುವುದಿಲ್ಲ. ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಕೆಲಸಕ್ಕೆ ಹಾಜರಾಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ಆಸ್ಪತ್ರೆಗಳ ಒಪಿಡಿ ಬಂದ್
ಸರ್ಕಾರಿ ನೌಕರರ ಪ್ರತಿಭಟನೆ ಬಿಸಿ ರೋಗಿಗಳಿಗೂ ತಟ್ಟಲಿದೆ. ಸರ್ಕಾರಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಸಂಪೂರ್ಣ ಸ್ತಬ್ಧವಾಗಲಿದೆ. ಉಳಿದಂತೆ ಐಸಿಯು, ಎಮರ್ಜೆನ್ಸಿ ಸೇವೆಗಳು ಮಾತ್ರ ಲಭ್ಯವಿವೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ವಿವೇಕ್, ಆಸ್ಪತ್ರೆ ಹೊರರೋಗಿ ವಿಭಾಗದಲ್ಲಿ ಕೆಲಸ ನಿರ್ವಹಿಸದೇ ಇರಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ 45 ಸಾವಿರಕ್ಕೂ ಅಧಿಕ ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳಿದ್ದು ಏಕಕಾಲದಲ್ಲಿ ಓಪಿಡಿ ಬಂದ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಎಂದಿನಂತೆ ನೀರು ಸರಬರಾಜು
ಮುಷ್ಕರಕ್ಕೆ ಜಲಮಂಡಳಿ ನೌಕರರ ಸಂಘ ನೈತಿಕ ಬೆಂಬಲ ವ್ಯಕ್ತಪಡಿಸಿದ್ದು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ನೌಕರರು ನಿರ್ಧರಿಸಿದ್ದಾರೆ. ಪಂಪಿಂಗ್ ಸ್ಟೇಷನ್‌ಗಳಲ್ಲಿ ಎಂದಿನಂತೆ ನೌಕರರು ಕಾರ್ಯ ನಿರ್ವಹಿಸಲಿದ್ದು ಕಾವೇರಿ ನೀರು ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಎಲ್ಲಾ ನೌಕರರೂ ಕರ್ತವ್ಯಕ್ಕೆ ಹಾಜರಾಗುವಂತೆ ಜಲಮಂಡಳಿ ಮೌಖಿಕ ಸೂಚನೆ ನೀಡಿದೆ.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಿಲ್ಲ
ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಎಂದಿನಂತೆ ವಿದ್ಯುತ್ ಪೂರೈಸಲು ಎಸ್ಕಾಂಗಳು ನಿರ್ಧರಿಸಿವೆ. ಬೆಸ್ಕಾಂ, ಕೆಪಿಟಿಸಿಎಲ… ಸಿಬ್ಬಂದಿ ಬುಧವಾರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಕೆಪಿಟಿಸಿಎಲ್ ನೌಕರರ ಸಂಘದ ಕಾರ್ಯದರ್ಶಿ ಬಲರಾಮ… ಹೇಳಿಕೆ ನೀಡಿದ್ದಾರೆ.
ಎಲ್ಲೂ ಧರಣಿ ಕೂರುವುದಿಲ್ಲ
7ನೇ ವೇತನ ಆಯೋಗ ಜಾರಿಯಾಗಬೇಕು. ಎನ್‌ಪಿಎಸ್ ರದ್ದಾಗಬೇಕು ಎಂಬ ಎರಡು ಪ್ರಮುಖ ಬೇಡಿಕೆ ನಮ್ಮದಾಗಿವೆ. ನಾವು ಎಲ್ಲೂ ಧರಣಿ ಕೂರುವುದಿಲ್ಲ, ಸಾರ್ವಜನಿಕರಿಗೆ ತೊಂದರೆ ಕೊಡುವುದಿಲ್ಲ. ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ತಿಳಿಸಿದ್ದಾರೆ. ಕೊರೋನಾ ಸಂದರ್ಭದಲ್ಲೂ ನಾವು ಸರ್ಕಾರದ ಜೊತೆ ಇದ್ದೆವು. ನಮ್ಮ ಪ್ರಮುಖ ಹಾಗೂ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು. ಆದರೆ ಸರ್ಕಾರ ಮಾತು ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆ-ಕಾಲೇಜು ಬಂದ್
ಮುಷ್ಕರಕ್ಕೆ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರು ಮತ್ತು ಪಿಯು ಕಾಲೇಜುಗಳ ಉಪನ್ಯಾಸಕರ ಸಂಘಗಳೂ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸಿಬ್ಬಂದಿ ಯುಜಿಸಿ ಶ್ರೇಣಿ ವೇತನ ಪಡೆಯುತ್ತಿರುವುದರಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುನಗೌಡ ಪಾಟೀಲ, 1ರಿಂದ 8 ನೇ ತರಗತಿವರೆಗೆ ರಾಜ್ಯದಲ್ಲಿ ಒಂದೂವರೆ ಲಕ್ಷ ಸರ್ಕಾರಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಶಿಕ್ಷಕರು ಭಾಗವಹಿಸಲಿದ್ದಾರೆ. ಮಕ್ಕಳು ಶಾಲೆಗೆ ಬರುವುದು ಬೇಡ ಎಂದು ಆಯಾ ಶಾಲೆಯ ಮುಖ್ಯಸ್ಥರ ಮೂಲಕ ಮಕ್ಕಳಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಮಾ.13 ರಿಂದ 5 ಹಾಗೂ 8ನೇ ತರಗತಿಗೆ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಒಂದು ವೇಳೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಶಿಕ್ಷಕರು ಪರೀಕ್ಷೆ ಕೆಲಸದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾರ್ಚ್ 1 ರಿಂದ ಸರ್ಕಾರಿ ನೌಕರರ ಮುಷ್ಕರ, ನಾಳೆಯಿಂದ ಯಾವ ಕೆಲಸವೂ ನಡೆಯುವುದಿಲ್ಲ!
ಏನಿರುತ್ತೆ?
ಏನಿರಲ್ಲ?
ಪ್ರಮುಖ ಬೇಡಿಕೆ
1. ಮಧ್ಯಂತರ ವರದಿ ಪಡೆದು ಏಳನೇ ವೇತನ ಆಯೋಗ ಜಾರಿ ಮಾಡಬೇಕು
2. ನೂತನ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್)ಯನ್ನು ಸರ್ಕಾರ ರದ್ದುಗೊಳಿಸಬೇಕು
ನಿನ್ನೆ ಏನೇನಾಯ್ತು?
3 ಲಕ್ಷ: ನಿಗಮ- ಮಂಡಳಿಗಳ ಸಿಬ್ಬಂದಿ ಆದೇಶ ಹೊರಡಿಸಿದ್ರೆ ಮಾತ್ರ ಕರ್ತವ್ಯಕ್ಕೆ
ಅಮಾನತು ಮಾಡಿದರೂ ಹೆದರಲ್ಲ. ಎಸ್ಮಾ ಜಾರಿ ಮಾಡಿದರೂ ಚಿಂತೆ ಮಾಡುವುದಿಲ್ಲ. ಬುಧವಾರದಿಂದ ಎಲ್ಲ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದಾರೆ. ಲಿಖಿತ ಭರವಸೆ ನೀಡಿದರೂ ಒಪ್ಪುವುದಿಲ್ಲ. ಸರ್ಕಾರ ಆದೇಶ ಹೊರಡಿಸಿದರೆ ಮಾತ್ರ ಕೆಲಸಕ್ಕೆ ಹಾಜರಾಗುತ್ತೇವೆ.
- ಷಡಕ್ಷರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ