ಅಮಿತ್ ಶಾ ಹೇಳಿಕೆ ಸರಿ ಇದೆ, ಬೊಮ್ಮಾಯಿ ನೇತೃತ್ವದಲ್ಲೇ ಎಲೆಕ್ಷನ್: ತ್ರಿವಳಿ ಸಚಿವರು!

By Kannadaprabha News  |  First Published Sep 6, 2021, 8:04 AM IST

* ಚುನಾವಣೆಗೆ ಬೊಮ್ಮಾಯಿ ಅವರೇ ನೇತೃತ್ವ: ಸಚಿವರು

* ಅಮಿತ್‌ ಶಾ ಹೇಳಿಕೆಗೆ ನಾವುಗಳು ಬದ್ಧ

* ಕಾರಜೋಳ, ಬೈರತಿ, ಎಸ್‌ಟಿಎಸ್‌ ಹೇಳಿಕೆ


ಬೆಂಗಳೂರು(ಸೆ.06): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ಬಗ್ಗೆ ಹಿರಿಯ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜ್ಯದ ಮೂವರು ಸಚಿವರು ಈ ಹೇಳಿಕೆಗೆ ಬದ್ಧ ಎಂದು ತಿಳಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿಯಾಗಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮತ್ತು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಅಮಿತ್‌ ಶಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾರ್ಯವೈಖರಿಯನ್ನೂ ಹೊಗಳಿದ್ದಾರೆ.

 

Latest Videos

undefined

ಕಳೆದ ವಾರ ದಾವಣಗೆರೆಯಲ್ಲಿ ಗಾಂಧಿ ಭವನ, ಪೊಲೀಸ್‌ ಪಬ್ಲಿಕ್‌ ಶಾಲೆ ಮತ್ತು ಗ್ರಂಥಾಲಯ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅಮಿತ್‌ ಶಾ ಅವರು, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸಲಾಗುವುದು ಎಂದು ತಿಳಿಸಿದ್ದರು. ಈ ಮೂಲಕ ಬೊಮ್ಮಾಯಿ ಅವರೇ ಮುಂದಿನ ಬಾರಿಯೂ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಸ್ಪಷ್ಟಪಡಿಸಿದ್ದರು. ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೊಳಗಾಗಿತ್ತು. ಹಿರಿಯ ಬಿಜೆಪಿ ಮುಖಂಡರಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಅಮಿತ್‌ ಶಾ ಯಾವ ಅರ್ಥದಲ್ಲಿ ಇದನ್ನು ಹೇಳಿದ್ದಾರೋ ಗೊತ್ತಿಲ್ಲ, ಆದರೆ ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವ ಬಗ್ಗೆ ಪಕ್ಷದಲ್ಲಿ ಒಲವಿದೆ ಎಂದು ತಿಳಿಸಿದ್ದರು.

ಪಕ್ಷದ ಹಿರಿಯರ ಹೇಳಿಕೆಗೆ ಬದ್ಧ​-ಕಾರಜೋಳ:

ಭಾನುವಾರ ಬಾಗಲಕೋಟೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಗೋವಿಂದ ಕಾರಜೋಳ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವುದಾಗಿ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಆಯಾ ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಬಿಜೆಪಿ ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸಿದೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು ನಮ್ಮ ಪಕ್ಷದ ಹಿರಿಯರ ಹೇಳಿಕೆಗೆ ನಾವು ಬದ್ಧರಾಗಿದ್ದೇವೆ. ಮುಖ್ಯಮಂತ್ರಿ ಬೊಮ್ಮಾಯಿ ಯುವಕರಿದ್ದು ಒಳ್ಳೆಯ ಕೆಲಸಗಾರರಿದ್ದಾರೆ. ಹೀಗಾಗಿ ಅವರಿಗೆ ಅಮಿತ್‌ ಶಾ ಸರ್ಟಿಫಿಕೇಟ್‌ ನೀಡಿದ್ದಾರೆ ಎಂದು ತಿಳಿಸಿದರು.

ಇನ್ನು ಅಮಿತ್‌ ಶಾ ಹೇಳಿಕೆಗೆ ಸಚಿವ ಈಶ್ವರಪ್ಪ ಅಸಮಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಈಶ್ವರಪ್ಪ ಅವರನ್ನು ನಾನು ಭೇಟಿಯಾಗಿಲ್ಲ, ಭೇಟಿಯಾದ ನಂತರ ಮಾತನಾಡುವೆ ಎಂದರು.

ನಾಯಕತ್ವ ವಿಚಾರದಲ್ಲಿ ಗೊಂದಲವಿಲ್ಲ​-ಭೈರತಿ:

ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಭೈರತಿ ಬಸವರಾಜ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ನಾವೆಲ್ಲರೂ ಬದ್ಧ ಎಂದು ತಿಳಿಸಿದರು. ನಾಯಕತ್ವ ವಿಚಾರದ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷದ ವರಿಷ್ಠ ಅಮಿತ್‌ ಶಾ ಈಗಾಗಲೇ ಸ್ಪಷ್ಟವಾಗಿ ಹೇಳಿರುವಂತೆ ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂದರು. ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಅಮಿತ್‌ ಶಾ ಹೇಳಿಕೆಯೇ ಅಂತಿಮ-ಎಸ್‌ಟಿಎಸ್‌:

ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಎಸ್‌.ಟಿ.ಸೋಮಶೇಖರ್‌, ಯಾರು ಏನೇ ಹೇಳಿದರು ಬಿಜೆಪಿ ರಾಷ್ಟ್ರೀಯ ನಾಯಕರಾಗಿರುವ ಅಮಿತ್‌ ಶಾ ಅವರ ಮಾತೇ ಅಂತಿಮ ಎಂದು ಸ್ಪಷ್ಟಪಡಿಸಿದರು. ಶಾ ಅವರು ಹೇಳಿರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲಿದ್ದಾರೆ ಎಂದರು. ಅಮಿತ್‌ ಶಾ ಹೇಳಿಕೆಗೆ ನಾನು ಪ್ರತಿಯಾಗಿ ಹೇಳುವುದೇನಿಲ್ಲ, ಬೊಮ್ಮಾಯಿ ಸಮರ್ಥರಿದ್ದು ಯಾರಿಗೂ ನೋವಾಗದಂತೆ ಆಡಳಿತ ನಡೆಸುತ್ತಾರೆ, ಯಾರು ಏನೇ ಹೇಳಿದರೂ ಅಮಿತ್‌ ಶಾ ಮಾತು ಅಂತಿಮ ಎಂದು ಈಶ್ವರಪ್ಪಗೆ ಟಾಂಗ್‌ ಕೊಟ್ಟರು.

click me!