ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌

Kannadaprabha News   | Kannada Prabha
Published : Feb 06, 2026, 06:47 AM IST
social media

ಸಾರಾಂಶ

 ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳ ಮೇಲೆ ಹದ್ದಿನ ಕಣ್ಣಿಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, 67.26 ಕೋಟಿ ರು. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ‘ಸೋಷಿಯಲ್‌ ಮೀಡಿಯಾ ಅನಾಲಿಟಿಕ್ಸ್‌ ಸಲ್ಯೂಷನ್ ತಂತ್ರಾಂಶ’ ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

 ಬೆಂಗಳೂರು :  ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳ ಮೇಲೆ ಹದ್ದಿನ ಕಣ್ಣಿಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, 67.26 ಕೋಟಿ ರು. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ‘ಸೋಷಿಯಲ್‌ ಮೀಡಿಯಾ ಅನಾಲಿಟಿಕ್ಸ್‌ ಸಲ್ಯೂಷನ್ ತಂತ್ರಾಂಶ’ ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ದ್ವೇಷ ಪ್ರಚಾರ, ಕಾನೂನು ಸುವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಬಲ್ಲ ವಿಷಯ ಹರಡಿದರೆ ಕಮಾಂಡಿಂಗ್‌ ಸೆಂಟರ್‌ ಮೂಲಕ ರಾಜ್ಯ ಸರ್ಕಾರ ಸ್ಕ್ಯಾನ್‌ ಮಾಡಲಿದೆ.

ತಕ್ಷಣ ಅಲರ್ಟ್‌ ಸಂದೇಶ ರವಾನೆ:

ಅಲ್ಲದೆ, ಮಕ್ಕಳ ಕಳ್ಳಸಾಗಣೆ, ಅಪರಾಧಿಕ ಕೃತ್ಯಗಳು, ಭಯೋತ್ಪಾದನೆ ಚಟುವಟಿಕೆಗಳಿಗೆ ನೆರವು, ಉಗ್ರಗಾಮಿಗಳ ನೇಮಕ, ಆತ್ಮಹತ್ಯೆ ಅಥವಾ ಕೊಲೆಗೆ ಪ್ರಚೋದನೆಯಂಥ ವಿಷಯಗಳು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪತ್ತೆಯಾದರೂ ಸಂಬಂಧಪಟ್ಟ ಜಿಲ್ಲೆಗೆ ಸ್ಥಳದ ಮಾಹಿತಿ (ಲೊಕೇಷನ್‌) ಸಹಿತ ಅಲರ್ಟ್‌ ಸಂದೇಶ ರವಾನಿಸಲಾಗುತ್ತದೆ.

ಸಾಫ್ಟ್‌ವೇರ್‌ ಅಡಿ ಕಮಾಂಡ್‌ ಸೆಂಟರ್‌ ಪ್ರತಿ ಜಿಲ್ಲೆಗೆ ತಕ್ಷಣದ ಎಚ್ಚರಿಕೆ ಸಂದೇಶ (ರಿಯಲ್‌ ಟೈಂ ಅಲರ್ಟ್ಸ್), ಜಿಯೋ ಸ್ಪೆಸಿಫಿಕ್‌ ಥ್ರೆಟ್‌ ಮ್ಯಾಪಿಂಗ್‌ ರವಾನಿಸಲಿದೆ. ಜತೆಗೆ ಸಂಬಂಧಪಟ್ಟ ಸಾಮಾಜಿಕ ಜಾಲತಾಣದ ಮೂಲ ದಾಖಲೆಗಳನ್ನು ಸಂಗ್ರಹಿಸಿ ತನಿಖಾ ಕಾರ್ಯವಿಧಾನ, ಸಾಕ್ಷ್ಯ ಸಂಗ್ರಹಕ್ಕೆ ನೆರವು ನೀಡಲಿದ್ದು, ಎಫ್‌ಐಆರ್ ದಾಖಲಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಲಿದೆ ಎಂದು ತಿಳಿದುಬಂದಿದೆ.

ಗುರುವಾರದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್‌, ಸುದ್ದಿ ಮತ್ತು ಪ್ರಚಾರ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣ, ಸುಳ್ಳು ಸುದ್ದಿ ಮೇಲೆ ಕಣ್ಣಿಡಲು ಎಐ ಆಧಾರಿತ ತಂತ್ರಾಂಶ ವ್ಯವಸ್ಥೆ ಮಾಡಲು ಸಂಪುಟ ನಿರ್ಧಾರ ಮಾಡಿದೆ ಎಂದರು.

ರಾಜ್ಯದಲ್ಲಿ ಸೋಷಿಯಲ್‌ ಮೀಡಿಯಾ ಮೂಲಕ ಹಲವು ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಅವುಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉಗ್ರಗಾಮಿಗಳ ನೇಮಕಾತಿ, ಮಕ್ಕಳ ಕಳ್ಳಸಾಗಣೆ, ಭಯೋತ್ಪಾದನೆ ಚಟುವಟಿಕೆಗಳಿಗೆ ನೆರವು, ಅಪರಾಧಿಕ ಕೃತ್ಯಗಳಿಗೆ ಸಾಮಾಜಿಕ ಜಾಲತಾಣ ಬಳಕೆ, ಆತ್ಮಹತ್ಯೆ ಅಥವಾ ಕೊಲೆಗೆ ಪ್ರಚೋದನೆಯಂಥ ಕೃತ್ಯಗಳನ್ನು ಮಾನಿಟರ್‌ ಮಾಡಲು ಇದು ನೆರವಾಗಲಿದೆ ಎಂದು ಹೇಳಿದರು.

ಮುಂದೆ ಕಾನೂನು ಕ್ರಮದ ಬಗ್ಗೆ ಚಿಂತನೆ:

ಸಮಾಜದಲ್ಲಿ ಸುಳ್ಳು ಸುದ್ದಿ ಹರಡಿ ಸಾರ್ವಜನಿಕರಲ್ಲಿ ಅಭದ್ರತೆ, ಭಯ ಉಂಟು ಮಾಡುವವರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಐಟಿಬಿಟಿ ಸಹಯೋಗದಲ್ಲಿ ಸತ್ಯ ತಪಾಸಣಾ ತಂಡ (ಫ್ಯಾಕ್ಟ್ ಚೆಕ್‌ ಟೀಂ) ರಚಿಸಲಾಗಿದೆ. ಗೃಹ ಇಲಾಖೆಯಲ್ಲಿ ಪ್ರತ್ಯೇಕ ಕೋಶ ರಚಿಸಿ ಸಿಐಡಿ ಘಟಕದಲ್ಲಿ ಇನ್‌ಫಾರ್ಮೇಷನ್‌ ಡಿಸಾರ್ಡರ್‌ ಟ್ರ್ಯಾಕಿಂಗ್‌ ಘಟಕ ಸ್ಥಾಪಿಸಲಾಗಿದೆ. ಆದರೆ, ಮಾಹಿತಿ ತಂತ್ರಜ್ಞಾನದ ಅಗಾಧ ಪ್ರಮಾಣ, ವೇಗ ಮತ್ತು ಸಂಕೀರ್ಣತೆಯಿಂದ ಅಪಪ್ರಚಾರವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಐ ಚಾಲಿತ ತಂತ್ರಾಂಶದ ಅಗತ್ಯವಿದೆ ಎಂದು ಸಂಪುಟದಲ್ಲಿ ಚರ್ಚಿಸಿದ್ದು, ಇದಕ್ಕಾಗಿ ಪ್ರತ್ಯೇಕ ತಂತ್ರಾಂಶಕ್ಕೆ ಸಂಪುಟ ಅನುಮೋದನೆ ನೀಡಿದೆ.

ಮುಖ್ಯವಾಹಿನಿ ಮಾಧ್ಯಮಗಳ ನಿಯಂತ್ರಣವಿಲ್ಲ:

ಈ ಸಾಫ್ಟ್‌ವೇರ್ ನಿಗಾ ಮುಖ್ಯವಾಹಿನಿ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳ ಮೇಲೆ ಇರುವುದಿಲ್ಲ. ಮುಖ್ಯವಾಹಿನಿ ಅಥವಾ ವಾರ್ತಾ ಇಲಾಖೆಯೊಂದಿಗೆ ನೋಂದಣಿ ಆಗಿರುವ ಅಧಿಕೃತ ಮಾಧ್ಯಮ ಸಂಸ್ಥೆಗಳ ಜಾಲತಾಣಗಳ ಮೇಲೆ ನಿಗಾವಹಿಸಲು ಎಐ ಸಾಫ್ಟ್‌ವೇರ್‌ಗೆ ಅವಕಾಶವಿಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್‌ ಸ್ಪಷ್ಟಪಡಿಸಿದರು.

50 ಕೋಟಿ ರು. ಎಐ ತಂತ್ರಾಂಶ

ಎಐ ಆಧಾರಿತ ತಂತ್ರಾಂಶಕ್ಕೆ 3 ವರ್ಷಗಳ ಅವಧಿಗೆ 50 ಕೋಟಿ ರು. ವೆಚ್ಚ ತಗುಲಲಿದೆ. ಇತರೆ 14 ಕೋಟಿ ರು. ವೆಚ್ಚ, ಸಿಬ್ಬಂದಿ, ತೆರಿಗೆಗಳು ಸೇರಿ 67.26 ಕೋಟಿ ರು. ವೆಚ್ಚ ಆಗಲಿದೆ. ಬಳಕೆದಾರರ ವರ್ತನೆ, ಹೊಸ ಡಿಜಿಟಲ್‌ ವೇದಿಕೆಗಳು ಮತ್ತು ಬದಲಾಗುತ್ತಿರುವ ಅಪಾಯಕಾರಿ ಮಾದರಿಗಳೊಂದಿಗೆ ಹೊಂದಿಕೊಳ್ಳಲು ಈ ವ್ಯವಸ್ಥೆ ಅಗತ್ಯ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

- ಮುಖ್ಯವಾಹಿನಿ ಮಾಧ್ಯಮಗಳಿಗೆ ವಿನಾಯ್ತಿ । ₹67 ಕೋಟಿ ವೆಚ್ಚ

- ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನಗಣ್ಣಿಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

- 67.26 ಕೋಟಿ ರು. ವೆಚ್ಚದಲ್ಲಿ ಸೋಷಿಯಲ್‌ ಮೀಡಿಯಾ ಅನಾಲಿಟಿಕ್ಸ್‌ ಸಲ್ಯೂಷನ್‌ ತಂತ್ರಾಂಶ ಅಭಿವೃದ್ಧಿ

- ಇದು ಕೃತಕ ಬುದ್ಧಿಮತ್ತೆಯಿಂದ ಚಾಲಿತ ಸಾಫ್ಟ್‌ವೇರ್‌. ಪ್ರತಿ ಜಿಲ್ಲೆಗೆ ರಿಯಲ್‌ ಟೈಂ ಸಂದೇಶ ರವಾನೆ

- ಸಾಮಾಜಿಕ ಜಾಲತಾಣದ ಮೂಲ ದಾಖಲೆ ಸಂಗ್ರಹಿಸಿ ತನಿಖೆಗೆ ನೆರವು ನೀಡುವ ಸಾಫ್ಟ್‌ವೇರ್‌

- ಎಫ್‌ಐಆರ್‌ ದಾಖಲಿಸಲು ಅಗತ್ಯ ಇರುವ ದಾಖಲೆಗಳು ಇದರಿಂದ ಲಭ್ಯ: ಸಚಿವ ಎಚ್‌.ಕೆ. ಪಾಟೀಲ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದುಬಾರಿ ಮೆಟ್ರೋ ವಿರುದ್ಧ ಜನಾಕ್ರೋಶ! ದೇಶದಲ್ಲೇ ದುಬಾರಿ ದರ; ದುಡ್ಡಿದ್ರೆ ನಮ್ಮ ಮೆಟ್ರೋ ಮುಟ್ರೋ ಎಂದ ನೆಟ್ಟಿಗರು
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌