
ಅಜಿತ್ ಕುಮಾರ್ ಹೆಗ್ಡೆ ಶಾನಾಡಿ,
ಅಪರ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಪ್ರಜಾಪ್ರಭುತ್ವವೊಂದು ಗೆಲ್ಲಬೇಕಾದರೆ ಚುನಾವಣೆಗಳು ಗೆಲ್ಲಬೇಕು. ಈ ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಸೋಮಾರಿತನ ತೋರದೇ ಚುನಾವಣಾ ಕರ್ತವ್ಯವನ್ನು ದೇವರ ಕೆಲಸವೆಂದು, ದೇಶದ ಕೆಲಸವನ್ನು ಸ್ವಂತ ಕೆಲಸಕ್ಕಿಂತ ಮಿಗಿಲಾದುದೆಂದು ಭಾವಿಸುವುದಾದರೆ, ನಿಷ್ಠೆಯಿಂದ ಕೆಲಸ ಮಾಡುವುದಾದರೆ ರಾಷ್ಟ್ರ ಹಾಗೂ ಸಂವಿಧಾನದ ಆಶಯ ಗೆಲ್ಲುತ್ತದೆ.
ಇಡೀ ದೇಶ ಅತ್ಯಂತ ಕಾತರದಿಂದ ಕಾಯುತ್ತಿರುವ ಲೋಕಸಭಾ ಚುನಾವಣೆಯ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣೆಯೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಭ್ರಮದ ಉತ್ಸವ. ಮತದಾರ ಪ್ರಭುವಿಗೆ ಒಂದು ದಿನದ ಕೆಲಸ, ೫ ವರ್ಷದ ಬದುಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಜೀವಮಾನದ ಕನಸು, ವರ್ಷಗಳ ತಯಾರಿ, ಆರು ತಿಂಗಳ ನಿರಂತರ ದುಡಿಮೆ. ದೇಶಾದ್ಯಂತ ಚುನಾವಣಾ ವ್ಯವಸ್ಥೆಯನ್ನು ನಿಯಂತ್ರಿಸುವ, ಪಾಲಿಸುವ ಕೇಂದ್ರ ಚುನಾವಣಾ ಅಯೋಗಕ್ಕೆ ನಿರಂತರ ವೃತ್ತಿಪರತೆ. ರಾಜ್ಯ, ಜಿಲ್ಲಾ, ಪಾಲಿಕೆ ಮಟ್ಟದಲ್ಲಿ ಚುನಾವಣಾ ಯಂತ್ರದ ಭಾಗವಾಗಿ ಚುನಾವಣಾ ಪ್ರಕ್ರಿಯೆಯನ್ನು ಮುನ್ನಡೆಸುವ ಅಧಿಕಾರಿ ನೌಕರ ವರ್ಗದವರಿಗೆ ಮೂರ‍್ನಾಲ್ಕು ತಿಂಗಳ ನಿರಂತರ ಜಾಗೃತಿ.
ದೇವರ ಆಶೀರ್ವಾದವಿದ್ದರೆ ಮಂಡ್ಯದಲ್ಲಿ ಮನೆ ಕಟ್ಟುವೆ: ಸುಮಲತಾ ಅಂಬರೀಶ್
ಮತದಾನ ಪ್ರಜೆಗಳ ಹಕ್ಕು:
ಚುನಾವಣೆಯಲ್ಲಿ ಮತದಾನ ಮಾಡುವುದು ಹೇಗೆ ಪ್ರತಿ ಪ್ರಜೆಯ ಅತ್ಯಮೂಲ್ಯವಾದ ಹಕ್ಕೋ ಅದೇ ರೀತಿ ಚುನಾವಣಾ ಪ್ರಕ್ರಿಯೆಯಲ್ಲಿ ನಮ್ಮ ಸಂಪೂರ್ಣ ಸಹಕಾರ ನೀಡುವುದು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕುಂದುಂಟಾಗದಂತೆ ಚುನಾವಣಾ ಕೆಲಸ ಕಾರ್ಯಗಳು ಸುಗಮವಾಗಿ ಸಾಗುವಂತೆ ಸಹಕರಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ.
ಅಧಿಕಾರಗಳ ಸಹಕಾರ ಅಗತ್ಯ:
ಚುನಾವಣಾ ಯಂತ್ರದ ಭಾಗವಾಗಿರುವ ಅಧಿಕಾರಿಗಳು ಮತ್ತು ನೌಕರರ ಚಾಣಾಕ್ಷತೆ, ವೃತ್ತಿಪರತೆ, ಕರ್ತವ್ಯ ನಿಷ್ಠೆಯಿಂದ ಪ್ರಜಾಪ್ರಭುತ್ವ ರಾಷ್ಟ್ರವೊಂದು ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಪ್ರದರ್ಶಿಸಲು ಸಾಧ್ಯ. ಚುನಾವಣಾ ಕಾರ್ಯವು ಲೋಪಮುಕ್ತವಾಗಿ ನಡೆಯಲು ಸರ್ಕಾರಿ ಯಂತ್ರ ಅತ್ಯಂತ ಹುರುಪಿನಿಂದ ಪಾಲ್ಗೊಳ್ಳಬೇಕಾಗುತ್ತದೆ. ಸರ್ಕಾರದ ಎಲ್ಲಾ ಇಲಾಖೆಗಳ ನಡುವೆ ಸೌಹಾರ್ದ, ಕೊಡುಕೊಳ್ಳುವಿಕೆ, ಒಳಗೊಳ್ಳುವಿಕೆಯಿಂದ ಮಾತ್ರ ಇದು ಸಾಧ್ಯವಾಗುತ್ತದೆ.ಶ್ರದ್ಧೆಯಿಂದ ಕೆಲಸ ಮಾಡಿಚುನಾವಣೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುವ ಇಲಾಖೆಗಳೆಂದರೆ ಕಂದಾಯ, ಪೊಲೀಸ್, ಎಕ್ಸೈಸ್ (ಅಬಕಾರಿ) ನಗರಾಡಳಿತ ಇಲಾಖೆಗಳು, ಉಳಿದ ಎಲ್ಲಾ ಇಲಾಖೆಗಳು. ಈ ಇಲಾಖೆಗಳಿಗೆ ಪೂರಕವಾಗಿ ಕರ್ತವ್ಯಪರತೆ ತೋರಿದಲ್ಲಿ ಎಲ್ಲವೂ ಸುಗಮ. ಮುಂಚೂಣಿಯಲ್ಲಿರುವ ಇಲಾಖೆಯ ಅಧಿಕಾರಿಗಳು ಮೂರ‍್ನಾಲ್ಕು ತಿಂಗಳು ಶ್ರದ್ಧೆಯಿಂದ, ಸಮಯದ ಪರಿಮಿತಿ ಇಲ್ಲದೇ ದುಡಿಯಬೇಕಾಗುತ್ತದೆ. ಪ್ರಮುಖ ಇಲಾಖೆಗಳನ್ನು ಹೊರತು ಪಡಿಸಿದರೆ ಪೂರಕ ಇಲಾಖೆಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿರುವ ಶಿಕ್ಷಕ ಬಂಧುಗಳ ಚುನಾವಣಾ ಕರ್ತವ್ಯ ಕೆಲವೇ ದಿನಗಳಿಗೆ ಸೀಮಿತವಾಗಿರುತ್ತದೆ.
ರಾಜಕೀಯ ಪ್ರಭಾವ ಬಳಸದಿರಿ:
ಚುನಾವಣಾ ಸಮಯದಲ್ಲಿ ಚುನಾವಣೆ ನಡೆಸುವವರು ಎದುರಿಸುವ ಅತ್ಯಂತ ಕಿರಿ ಕಿರಿಯ ಸಮಸ್ಯೆ ಎಂದರೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ಪಡೆಯಲು ವಿನಾಕಾರಣ ನಿರಂತರ ಪ್ರಯತ್ನಿಸುವ ಅಥವಾ ಹೋರಾಡುವ ಒಂದು ವರ್ಗ.ಸಿನೆಮಾವೊಂದರ ಟಿಕೆಟ್ ತೆಗೆದುಕೊಳ್ಳಲು, ದಿನಗಟ್ಟಲೆ ಕಾಯುವ, ಬಿರಿಯಾನಿ ತಿನ್ನಲು ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲುವ, ಮಸಾಲೆ ದೋಸೆ ತಿನ್ನಲು ಮಧ್ಯಾಹ್ನದ ವರೆಗೆ ಕಾಯುವ ತಾಳ್ಮೆ ಇರುವ ನಾವು ಮೊಬೈಲ್‌ನ ಸ್ಕ್ರೀನನ್ನು ಕಣ್ಣೆವೆ ಮುಚ್ಚದೇ, ಸಮಯದ ಪರಿವೆ ಇಲ್ಲದೆ ನಿರಂತರ ನೋಡುತ್ತಿರುತ್ತೇವೆ. ಆದರೆ ಒಂದೆರಡು ದಿನಗಳ ಚುನಾವಣಾ ಕರ್ತವ್ಯದ ನೊಟೀಸ್ ನಮ್ಮನ್ನು ತಲುಪಿದ ಕೂಡಲೇ ನಮಗೆ ಗೊತ್ತಿರುವ ಎಲ್ಲಾ ಅಧಿಕಾರಿಗಳ, ಎಲ್ಲಾ ರಾಜಕೀಯ ಮುಖಂಡರ ಹಾಗೂ ಇನ್ನಿತರ ಪ್ರಭಾವಿಶಾಲಿಗಳ ಸಂಪರ್ಕವನ್ನು ಹುಡುಕಿ ಅವರಿಂದ ವಶೀಲಿಬಾಜಿ ಮಾಡಿಸಿ ಶತಾಯ ಗತಾಯ ಚುನಾವಣಾ ಕರ್ತವ್ಯವದಿಂದ ವಿನಾಯಿತಿ ಪಡೆಯುವ ವರ್ಗವೊಂದು ನೌಕರಶಾಹಿಯ ನಡುವೆ ನಿರಂತರವಾಗಿ ಪ್ರಯತ್ನಶೀಲವಾಗಿರುತ್ತದೆ. ಹಾಗಂತ ಯಾವುದೇ ರೀತಿಯ ಚುನಾವಣಾ ಕರ್ತವ್ಯವನ್ನು ನೀಡಿದರೂ ಅದನ್ನು ಅತ್ಯಂತ ಶ್ರದ್ಧೆಯಿಂದ, ಪರಿಪೂರ್ಣವಾಗಿ ಮಾಡಿ ಮುಗಿಸುವ ಇನ್ನೊಂದು ವರ್ಗವೂ ಇದೆ.
ಸೋಮಾರಿತನ ಸಲ್ಲ:
ಚುನಾವಣಾ ಅಯೋಗದೊಂದಿಗೆ ಕೈ ಜೋಡಿಸಿ ಪ್ರತಿಯೊಬ್ಬ ವ್ಯಕ್ತಿಯು ಸ್ವ ಸಂತೋಷದ ಕರ್ತವ್ಯ ಪ್ರಜ್ಞೆಯಿಂದ ಚುನಾವಣಾ ಕರ್ತವ್ಯವನ್ನು ನೆರವೇರಿಸಿದರೆ, ಅದು ಪ್ರಜಾಪ್ರಭುತ್ವಕ್ಕೆ ನಾವು ನೀಡುವ ಅತೀ ದೊಡ್ಡ ಕೊಡುಗೆ. ನೆನಪಿಡಿ ದೊಡ್ಡ ದೇಶವೊಂದರ ಪ್ರಜಾಪ್ರಭುತ್ವವನ್ನು ಮುನ್ನಡೆಸುವ ಶಕ್ತಿಶಾಲಿ ಜನಪ್ರತಿನಿಧಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ನಮ್ಮನ್ನೇ ನಾವು ತೊಡಗಿಸಿಕೊಳ್ಳುವುದು ಅತ್ಯಂತ ಪ್ರತಿಷ್ಠೆಯ ವಿಚಾರ. ಕೆಲಸ ಮಾಡಲಾಗದ ಅನಾರೋಗ್ಯ, ಅಪಘಾತ ಅಥವಾ ಇನ್ನಿತರ ಸಕಾರಣವಿದ್ದಲ್ಲಿ ಚುನಾವಣಾ ಕರ್ತವ್ಯಕ್ಕೆ ವಿನಾಯಿತಿ ಕೋರಿದರೆ ಖಂಡಿತಾ ಅಯೋಗ ಅದನ್ನು ಪರಿಗಣಿಸುತ್ತದೆ. ಆದರೆ ಕರ್ತವ್ಯಕ್ಕೆ ಹೆದರಿ, ಸೋಮಾರಿತನದಿಂದ, ಸಕಾರಣವಿಲ್ಲದೇ ಚುನಾವಣಾ ಕರ್ತವ್ಯವೊಂದು ಬೇಡ ಎಂಬ ಹಿಂಜರಿಕೆ ಕರ್ತವ್ಯ ಲೋಪವಲ್ಲದೇ ಇನ್ನೇನು ಅಲ್ಲ. ಅದೂ ಅಲ್ಲದೇ ಚುನಾವಣಾ ಕರ್ತವ್ಯದಿಂದ ವಿನಾಯಿತಿ ಪಡೆಯಲು ನಾವು ನಡೆಸುವ ಪ್ರಯತ್ನ, ಚುನಾವಣೆಯಲ್ಲಿ ನಮ್ಮನ್ನು ತೊಡಗಿಸಿಕೊಂಡು ದಕ್ಷತೆಯಿಂದ ಕೆಲಸ ಮುಗಿಸುವುದಕ್ಕಿಂತ ತೀರಾ ಶ್ರಮದಾಯಕ.
Loksabha election 2024: ಪ್ರತಿ ಕ್ಷೇತ್ರಕ್ಕೂ ರಾಜ್ಯ ಬಿಜೆಪಿ 3 ಹೆಸರು ಫೈನಲ್?
ಚುನಾವಣಾ ಕರ್ತವ್ಯವನ್ನು ನಿರ್ವಹಿಸುವ ಯಾರೇ ಅಧಿಕಾರಿ, ನೌಕರರು, ಇನ್ನಿತರ ವರ್ಗದವರು ಚುನಾವಣಾ ಕರ್ತವ್ಯವನ್ನು ದೇವರ ಕೆಲಸವೆಂದು, ದೇಶದ ಕೆಲಸವೆಂದು, ಸ್ವಂತ ಕೆಲಸಕ್ಕಿಂತ ಮಿಗಿಲಾದುದೆಂದು ಭಾವಿಸಿ. ಪ್ರೀತಿ ಮತ್ತು ಶ್ರದ್ಧೆಯಿಂದ, ಸೊಗಸಾಗಿ, ಸಂತೋಷವಾಗಿ, ನಿಯಮ ಬದ್ಧವಾಗಿ ನಿರ್ವಹಿಸಿ ನಿಮ್ಮ ದೇಶದ ಈ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವದ ಉಳಿವಿಗೆ ನಿಮ್ಮ ಅಮೂಲ್ಯ ಕೊಡುಗೆ ನೀಡಿ. ಈ ದೇಶದ ಅಭಿವೃದ್ಧಿಯ ನಿರಂತರತೆಗೆ ಕೈಗೂಡಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ