ಇಡೀ ರಾಜ್ಯವೇ ಇದೀಗ ರಾಜ್ಯೋತ್ಸವದ ಸುವರ್ಣ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಅದರಲ್ಲೂ ಗಡಿ ನಾಡು ಬೆಳಗಾವಿಯಲ್ಲಿ ರಾಜ್ಯೋತ್ಸವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ವೈಭವದ ರಾಜ್ಯೋತ್ಸವಕ್ಕೆ ಕುಂದಾನಗರಿ ಸಜ್ಜುಗೊಳ್ಳುತ್ತಿರುವಾಗಲೇ ಇದೀಗ ನೆರೆಯ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿದೆ.
ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣನ್ಯೂಸ್ ಬೆಳಗಾವಿ
ಬೆಳಗಾವಿ (ಅ.12): ಇಡೀ ರಾಜ್ಯವೇ ಇದೀಗ ರಾಜ್ಯೋತ್ಸವದ ಸುವರ್ಣ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಅದರಲ್ಲೂ ಗಡಿ ನಾಡು ಬೆಳಗಾವಿಯಲ್ಲಿ ರಾಜ್ಯೋತ್ಸವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ವೈಭವದ ರಾಜ್ಯೋತ್ಸವಕ್ಕೆ ಕುಂದಾನಗರಿ ಸಜ್ಜುಗೊಳ್ಳುತ್ತಿರುವಾಗಲೇ ಇದೀಗ ನೆರೆಯ ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆದಿದೆ. ಮಹಾರಾಷ್ಟ್ರ ಹಾಲಿ ಸಿಎಂ ಏಕನಾಥ ಶಿಂಧೆ ಗಡಿ ಹೋರಾಟದ ಮೂಲಕವೇ ರಾಜಕೀಯ ಪ್ರವೇಶಿಸಿದ್ದವರು. ಈ ಕಾರಣಕ್ಕೆ ಅವರು ಸಿಎಂ ಆಗ್ತಿದ್ದಂತೆ ಮಹಾರಾಷ್ಟ್ರದಲ್ಲಿ ಜಾರಿ ಇರುವ ಮಹಾತ್ಮಾಫುಲೆ ಆರೋಗ್ಯ ವಿಮೆ ಯೋಜನೆಯನ್ನು ಕರ್ನಾಟಕದ ಗಡಿ ಭಾಗದಲ್ಲಿರುವ 865 ಗ್ರಾಮಗಳ ಮರಾಠಿ ಭಾಷಿಕರಿಗೆ ವಿಸ್ತರಿಸುವ ವಿವಾದಾತ್ಮಕ ನಿರ್ಣಯ ಕೈಗೊಂಡಿದ್ದರು. ತನ್ನ ಯೋಜನೆಯನ್ನು ಕರ್ನಾಟಕದಲ್ಲಿ ವಿಸ್ತರಿಸುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸವನ್ನು ಶಿಂಧೆ ಸರ್ಕಾರ ಮಾಡಿತ್ತು. ಇದಕ್ಕೆ ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ತಿರುಗೇಟು ನೀಡಿದಕ್ಕೆ ಆಗ ಶಾಂತವಾಗಿದ್ದ ಮಹಾರಾಷ್ಟ್ರ ಸರ್ಕಾರ ಇದೀಗ ಮತ್ತೇ ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ಆ ಯೋಜನೆ ನೀಡಲು ಮುಂದಾಗುತ್ತಿದೆ.
ಆರೋಗ್ಯದ ಹೆಸರಲ್ಲಿ ಮಹಾ ಕುತಂತ್ರ!
ನಿನ್ನೆಯಷ್ಟೇ ಮುಂಬೈನಲ್ಲಿ ಮಹಾರಾಷ್ಟ್ರ ಸರ್ಕಾರ ರಚಿಸಿರುವ ಗಡಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು. ಇದರ ಅಧ್ಯಕ್ಷರೂ ಆಗಿರುವ ಸಂಸದ ಧೈರ್ಯಶೀಲ ಮಾನೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳಗಾವಿಯ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ವಿವಾದಾತ್ಮಕ ನಿರ್ಣಯ ಕೈಗೊಂಡಿರುವ ಧೈರ್ಯಶೀಲ ಮಾನೆ ರಾಜ್ಯದ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಕರ್ನಾಟಕದಲ್ಲಿ ನೆಲೆಸಿರುವ 865 ಗ್ರಾಮಗಳ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ನೀಡುವುದಾಗಿ ಘೊಷಿಸಿದ್ದಾರೆ. ಈ ಯೋಜನೆ ಜಾರಿಗಾಗಿಯೇ ಬೆಳಗಾವಿಗೆ ಹೊಂದಿಕೊಂಡಿರುವ ಚಂದಗಡದಲ್ಲಿ ಕಚೇರಿ ಸ್ಥಾಪಿಸಿ ಹಿರಿಯ ಅಧಿಕಾರಿಗಳನ್ನು ನೇಮಿಸುತ್ತೇವೆ. ಈ ಯೋಜನೆಯಡಿ ಐದು ಲಕ್ಷವರೆಗೆ ಆರೋಗ್ಯ ವಿಮೆಯ ಲಾಭ ಕರ್ನಾಟಕದ ಮರಾಠಿ ಭಾಷಿಕರಿಗೆ ದೊರಕಿಸಿ ಕೊಡುತ್ತೇವೆ ಎಂದಿದ್ದಾರೆ. ಈ ಯೋಜನೆ ಲಾಭ ಪಡೆಯುವ ಪ್ರತಿಯೊಬ್ಬ ಮರಾಠಿ ಭಾಷಿಕನೂ ತಾನು ಮರಾಠಿ ಭಾಷಿಕ ಎಂದು ಪ್ರಮಾಣ ಪತ್ರ ನೀಡಬೇಕು. ಅದರ ಜೊತೆಗೆ ಬೆಳಗಾವಿಯಲ್ಲಿರುವ ಎಂಇಎಸ್ ಕಚೇರಿಯ ಶಿಫಾರಸು ಪತ್ರ ನೀಡಬೇಕು ಎಂದು ನಿಯಮ ರೂಪಿಸಿದ್ದಾರೆ.
ನಿಮ್ಮ ಮೈಯಲ್ಲಿ ಹರೀತಿರೋದು ಹಸಿರೋ, ಹಿಂದು ರಕ್ತವೋ? ಸಿಎಂ ವಿರುದ್ಧ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಈಶ್ವರಪ್ಪ!
ದಾಖಲೆ ಸಂಗ್ರಹಿಸುವ ಹುನ್ನಾರ
ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಸುಪ್ರೀಂಕೋರ್ಟ್‍ನಲ್ಲಿದೆ. ಫಸಲ್ ಅಲಿ ಆಯೋಗ ಹಾಗೂ ಮಹಾಜನ್ ಆಯೋಗ ವರದಿ ಧಿಕ್ಕರಿಸಿ ಮಹಾರಾಷ್ಟ್ರ ಸರ್ಕಾರವೇ 2004ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ವಿವಾದ ನೋಡಿಕೊಳ್ಳಲೆಂದೇ ಇಬ್ಬರು ಸಚಿವರನ್ನು ಮಹಾರಾಷ್ಟ್ರ ಸರ್ಕಾರ ನೇಮಿಸಿದೆ. ಇದೀಗ ಕರ್ನಾಟಕದಲ್ಲಿ ಜಾರಿಗೆಗೆ ಮುಂದಾಗಿರುವ ಮಹಾತ್ಮಾಫುಲೆ ಆರೋಗ್ಯ ವಿಮೆ ಯೋಜನೆ ಕೊಡುವ ನೆಪದಲ್ಲಿ ಮಹಾರಾಷ್ಟ್ರ ಸರ್ಕಾರ ದಾಖಲೆ ಸಂಗ್ರಹಿಸುವ ಹುನ್ನಾರ ಮಾಡುತ್ತಿದೆ. ನಾನು ಮರಾಠಿ ಭಾಷಿಕ ಎಂದು ಫಲಾನುಭವಿಗಳು ನೀಡುವ ಪ್ರಮಾಣ ಪತ್ರಗಳನ್ನು ಸಂಗ್ರಹಿಸಿ ಸುಪ್ರೀಂಕೋರ್ಟ್‍ಗೆ ಸಲ್ಲಿಸುವುದು ಮಹಾರಾಷ್ಟ್ರ ಪ್ಲ್ಯಾನ್. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯ ಸರ್ಕಾರ ಇರಲಿ, ತನ್ನ ಯೋಜನೆಗಳನ್ನು ತನ್ನ ರಾಜ್ಯದಲ್ಲೇ ಜಾರಿ ಮಾಡಬೇಕು. ಮತ್ತೊಂದು ರಾಜ್ಯದಲ್ಲಿ ಹಸ್ತಕ್ಷೇಪವನ್ನು ಮಾಡಬಾರದು ಎಂಬುವುದಿದೆ. ಒಕ್ಕೂಟ ವ್ಯವಸ್ಥೆ ಧಿಕ್ಕರಿಸುತ್ತಿರುವ ನೆರೆಯ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆಗೆ ಠಕ್ಕರ್ ಕೊಡುವ ಕೆಲಸನವನ್ನು ಸಿಎಂ ಸಿದ್ದರಾಮಯ್ಯ ಮಾಡಬೇಕಿದೆ.
ಮಹಿಷಾ ದಸರಾಗೆ ಸರ್ಕಾರ ಅನುಮತಿ: ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಏನು ಹೇಳಿದ್ರು?
ಸಿಎಂಗೆ ಪತ್ರ ಬರೆದ ಸಂಘಟನೆಗಳು
ಮಹಾರಾಷ್ಟ್ರದ ವಿವಾದಾತ್ಮಕ ನಿರ್ಣಯ ಬೆನ್ನಲ್ಲೇ ಇಂದು ಬೆಳಗಾವಿಯ ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿ ಸಿಎಂಗೆ ಪತ್ರಬರೆದು ಮಹಾರಾಷ್ಟ್ರಕ್ಕೆ ಪ್ರತ್ಯುತ್ತರ ನೀಡುವಂತೆ ಕೋರಿದೆ. ಅಲ್ಲದೇ 2018ರಿಂದ ಖಾಲಿ ಇರುವ ಗಡಿ ಉಸ್ತುವಾರಿ ಸಚಿವರ ನೇಮಕ ಮಾಡಬೇಕು ಗಡಿ ಸಂರಕ್ಷಣಾ ಆಯೋಗ, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ರೂಪ ನೀಡಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಆಕ್ರಮಣಕಾರಿ ನಡೆಗೆ ಸಿಎಂ ಸಿದ್ದು ಸರ್ಕಾರವೂ ಪ್ರತ್ಯುತ್ತರ ನೀಡಬೇಕು ಎಂಬುವುದು ಈ ಭಾಗದ ಒತ್ತಾಸೆಯಾಗಿದೆ.