
ಬೆಂಗಳೂರು(ಜೂ.09): ಯೋಜನಾ ವೆಚ್ಚದಲ್ಲಾಗುತ್ತಿರುವ ಏರಿಕೆಯನ್ನು ತಪ್ಪಿಸಲು ಹೊಸ ಕಾಮಗಾರಿಗಳಿಗಿಂತ ಚಾಲ್ತಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಎಲ್ಲ ಇಲಾಖೆಗಳಿಗೂ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಬಹುತೇಕ ಇಲಾಖೆಗಳು ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಅಗತ್ಯ ಅನುದಾನ ಮೀಸಲಿಡದೆ, ಹೊಸ ಯೋಜನೆಗಳ ಕಾಮಗಾರಿಗಳಿಗೆ ಹಣವನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಚಾಲ್ತಿ ಕಾಮಗಾರಿಗಳಿಗೆ ಹಣ ನಿಗದಿ ಮಾಡದ ಕಾರಣ, ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿಲ್ಲ. ಅಲ್ಲದೆ, ಯೋಜನಾ ವೆಚ್ಚವೂ ಹೆಚ್ಚಳವಾಗಿ ಇಲಾಖೆ ಹಾಗೂ ಸರ್ಕಾರಕ್ಕೆ ಹೊರೆಯಾಗುತ್ತಿದೆ. ಹೀಗಾಗಿ ಅನುದಾನ ನಿಗದಿ ಮಾಡುವ ಸಂದರ್ಭದಲ್ಲಿ ಹೊಸ ಕಾಮಗಾರಿಗಳಿಂತ ಚಾಲ್ತಿ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆರ್ಥಿಕ ಇಲಾಖೆ ಆದೇಶಿಸಿದೆ.
ಬಾಗಲಕೋಟೆ: ಐದು ವರ್ಷವಾದ್ರೂ ಪೂರ್ಣಗೊಳ್ಳದ ಸೇತುವೆ
ಚಾಲ್ತಿ ಕಾಮಗಾರಿ ಪೂರ್ಣಗೊಳಿಸುವ ಮೊತ್ತವು ಶೇ.50ಕ್ಕಿಂತ ಕಡಿಮೆಯಿದ್ದರೆ, ಅದಕ್ಕೆ ಪೂರ್ಣ ಮೊತ್ತವನ್ನು ನಿಗದಿ ಮಾಡಬೇಕು. ಅದೇ ಚಾಲ್ತಿ ಕಾಮಗಾರಿಯ ಮೊತ್ತ ಶೇ.50ಕ್ಕಿಂತ ಹೆಚ್ಚಿದ್ದರೆ ಅನುದಾನದ ಶೇ.60ರಷ್ಟುಹಣವನ್ನು ನಿಗದಿ ಮಾಡಿ ಉಳಿದ ಹಣವನ್ನು ಹೊಸ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ಒಂದು ವೇಳೆ ಆಯವ್ಯಯದಲ್ಲಿ ಒದಗಿಸಿ ಅನುದಾನಕ್ಕಿಂತ ಚಾಲ್ತಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಮೊತ್ತ ಹೆಚ್ಚಿದ್ದರೆ, ಆಯವ್ಯಯದ ಅನುದಾನದ ಮೊತ್ತದಲ್ಲಿ ಶೇ.80ರಷ್ಟನ್ನು ಚಾಲ್ತಿ ಕಾಮಗಾರಿಗೆ ನೀಡಬೇಕು ಎಂದು ತಿಳಿಸಲಾಗಿದೆ.
ಹೊಸ ಕಾಮಗಾರಿಯ ಮೊತ್ತ 10 ಕೋಟಿ ರು.ಗಳಷ್ಟಿದ್ದರೆ ಒಂದೇ ಆರ್ಥಿಕ ವರ್ಷದಲ್ಲಿ ಅಷ್ಟೂಹಣವನ್ನು ನೀಡಬೇಕು. 10ರಿಂದ 100 ಕೋಟಿ ರು.ಗಳಷ್ಟಿದ್ದರೆ ಮೊದಲ ಆರ್ಥಿಕ ವರ್ಷ ಶೇ.40 ಹಾಗೂ ಎರಡನೇ ಆರ್ಥಿಕ ಶೇ.60 ಅನುದಾನ ಒದಗಿಸಬೇಕು. 100 ಕೋಟಿ ರು. ಮೀರಿದರೆ ಮೊದಲ ವರ್ಷ ಶೇ.30, 2ನೇ ವರ್ಷ ಶೇ.40 ಹಾಗೂ 3ನೇ ವರ್ಷ ಉಳಿದ ಶೇ.30ರಷ್ಟು ಅನುದಾನವನ್ನು ನೀಡಬೇಕು.
ಈ ಅನುದಾನ ಹಂಚಿಕೆ ಕುರಿತು ನಿಗದಿ ಮಾಡಿರುವ ಮಾರ್ಗಸೂಚಿಯನ್ವಯವೇ ರಾಜ್ಯ ಸರ್ಕಾರ ಆಯವ್ಯಯದಲ್ಲಿ ಒದಗಿಸುವ ಅನುದಾನವನ್ನು ಇಲಾಖೆಗಳು ಚಾಲ್ತಿ ಹಾಗೂ ಹೊಸ ಕಾಮಗಾರಿಗಳಿಗೆ ಹಂಚಿಕೆ ಮಾಡಬೇಕು. ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಿ ಅದನ್ನು ತಪ್ಪನೆ ಪಾಲಿಸಬೇಕು. ಕಾಮಗಾರಿ ವಿಳಂಬವಾಗಿ ಯೋಜನಾ ವೆಚ್ಚದಲ್ಲಾಗುತ್ತಿರುವ ಹೆಚ್ಚುವರಿ ಹೊರೆಯನ್ನು ತಪ್ಪಿಸಬೇಕು ಎಂದು ಆರ್ಥಿಕ ಇಲಾಖೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ