ವಡ್ಡರ್ಸೆ ರಘುರಾಮ್​ ಪ್ರಶಸ್ತಿ ಆಯ್ಕೆ ಸಮಿತಿಗೆ ಸುವರ್ಣ ನ್ಯೂಸ್‌ನ ಎಂ.ಸಿ.ಶೋಭಾರನ್ನು ಸದಸ್ಯರನ್ನಾಗಿ ನೇಮಿಸಿದ ಸರ್ಕಾರ!

By Kannadaprabha NewsFirst Published Oct 10, 2024, 1:27 PM IST
Highlights

ವಡ್ಡರ್ಸೆ ರಘುರಾಮ್​ ಪ್ರಶಸ್ತಿ ಆಯ್ಕೆ ಸಮಿತಿಗೆ ಅಧ್ಯಕ್ಷರು, ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಔಟ್​ಪುಟ್​ ಎಡಿಟರ್​ ಎಂ.ಸಿ.ಶೋಭಾ ಅವರನ್ನು ಸದಸ್ಯರನ್ನಾಗಿ ಸರ್ಕಾರ ನೇಮಿಸಿದೆ.

ಬೆಂಗಳೂರು (ಅ.10): ವಡ್ಡರ್ಸೆ ರಘುರಾಮ್​ ಪ್ರಶಸ್ತಿ ಆಯ್ಕೆ ಸಮಿತಿಗೆ ಅಧ್ಯಕ್ಷರು, ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಔಟ್​ಪುಟ್​ ಎಡಿಟರ್​ ಎಂ.ಸಿ.ಶೋಭಾ ಅವರನ್ನು ಸದಸ್ಯರನ್ನಾಗಿ ಸರ್ಕಾರ ನೇಮಿಸಿದೆ. ಸಮಿತಿ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ, ಹಿರಿಯ ಪತ್ರಕರ್ತ ದಿನೇಶ್ ಅಮಿನ್​ ಮಟ್ಟು, ಕ.ಮ. ರವಿಶಂಕರ್​, ಅಬ್ಬಾಸ್ ಮುಲ್ಲಾ, ಎನ್. ರವಿಕುಮಾರ್​ ಅವರನ್ನು ಸದಸ್ಯರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ವಡ್ಡರ್ಸೆ ರಘುರಾಮಶೆಟ್ಟಿ ಪರಿಚಯ: ಓದುಗರ ಸಂಪಾದಕ ಎಂದೇ ಹೆಸರಾಗಿದ್ದ ದಿ.ವಡ್ಡರ್ಸೆ ರಘುರಾಮ ಶೆಟ್ಟಿ, 1960ರ ದಶಕದಿಂದ ಸುಮಾರು ನಾಲ್ಕು ದಶಕ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆಗೈದಿದ್ದಾರೆ. ಮಾಧ್ಯಮವು ವಾಣಿಜ್ಯೋದ್ಯಮಿಗಳ ಹಾಗೂ ಈ ರಂಗದ ಪರಿಚಯವಿಲ್ಲದವರ ಆಡುಂಬೋಲವಾಗಬಾರದು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು.  ಸಮಾಜದ ವಂಚನೆಯ ಜಾಲಗಳನ್ನು ಬಯಲಿಗೆಳೆಯುವ ಉದ್ದೇಶದಿಂದ 1984ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮುಂಗಾರು ದಿನಪತ್ರಿಕೆ ಪ್ರಾರಂಭಿಸಿ, ನಿರ್ಭೀತ ಬರಹಗಳ ಮೂಲಕ ಪತ್ರಿಕಾ ವೃತ್ತಿಯಲ್ಲಿ ಬದಲಾವಣೆ ತಂದವರು. ಕನ್ನಡ ಪತ್ರಿಕೋದ್ಯಮದಲ್ಲಿ ದೀನ ದಲಿತರ ಹಾಗೂ ದುರ್ಬಲ ವರ್ಗದವರ ಪರವಾಗಿ ಧ್ವನಿಯೆತ್ತುವ, ದನಿಯಿಲ್ಲದವರ ದನಿಯಾಗಿದ್ದರು.

ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತ ಉತ್ತೇಜಿಸಲು ಮತ್ತು ಸಾಮಾಜಿಕ ಬದಲಾವಣೆ ತರಲು ಶ್ರಮಿಸಿದರು. ಹಿರಿಯ ಪತ್ರಕರ್ತ ದಿ.ವಡ್ಡರ್ಸೆ ರಘುರಾಮ ಶೆಟ್ಟಿ ನೆನಪಿನಾರ್ಥ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದಾರೆ. ಪ್ರಶಸ್ತಿಯು ₹2 ಲಕ್ಷ ನಗದು, ಸ್ಮರಣಿಕೆ ಒಳಗೊಂಡಿದೆ. ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾರ್ವಜನಿಕರು, ಸಂಘ - ಸಂಸ್ಥೆಗಳು ಅರ್ಹ ಪತ್ರಕರ್ತರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದಾಗಿದೆ. ನಾಮನಿರ್ದೇಶನಗಳನ್ನು ಸಲ್ಲಿಸಲು ಅ.21 ಕೊನೆಯ ದಿನವಾಗಿದೆ. 

Latest Videos

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಸುವರ್ಣ ನ್ಯೂಸ್‌ನ ಎಂ.ಸಿ. ಶೋಭಾ ನೇಮಕ!

ನಾಮನಿರ್ದೇಶನಗಳನ್ನು ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾಸೌಧ, ಭಗವಾನ್ ಮಹಾವೀರ ರಸ್ತೆ, (ಇನ್ ಫೆಂಟ್ರಿ ರಸ್ತೆ), ಬೆಂಗಳೂರು 560 001 ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಇತರೆ ಜಿಲ್ಲೆಗಳ ಪತ್ರಕರ್ತರು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!