‘ಗೂಗಲ್ ರಿವ್ಯೂನಲ್ಲಿ ಹಲವು ಮೋಸದ ಪ್ರಕರಣ ನಡೆಸಿರುವ ಮಾಹಿತಿಯಿದೆ ಎಂಬ ಕಾರಣದಿಂದ ವಂಚನೆ ಪ್ರಕರಣದ ಆರೋಪಿಗೆ ಜಾಮೀನು ನಿರಾಕರಿಸಲಾಗದು’ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಬೆಂಗಳೂರು (ನ.05): ‘ಗೂಗಲ್ ರಿವ್ಯೂನಲ್ಲಿ ಹಲವು ಮೋಸದ ಪ್ರಕರಣ ನಡೆಸಿರುವ ಮಾಹಿತಿಯಿದೆ ಎಂಬ ಕಾರಣದಿಂದ ವಂಚನೆ ಪ್ರಕರಣದ ಆರೋಪಿಗೆ ಜಾಮೀನು ನಿರಾಕರಿಸಲಾಗದು’ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ ಹಾಗೂ ಒಪ್ಪಂದದ ಅನುಸಾರ ಸರಕು-ಸಾಮಗ್ರಿ ಪೂರೈಸದ ಪ್ರಕರಣದಲ್ಲಿ ಬಂಧನ ಭೀತಿಗೆ ಒಳಗಾಗಿದ್ದ ವ್ಯಕ್ತಿಯೊಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ‘ಗೂಗಲ್ ರಿವ್ಯೂಗಳಿಗೆ ಕಾನೂನುಬದ್ಧ ಸಾಕ್ಷ್ಯ ಮೌಲ್ಯ ಇಲ್ಲ’ ಎಂಬ ಕಾರಣವನ್ನು ತನ್ನ ತೀರ್ಪಿಗೆ ಅದು ನೀಡಿದೆ.
ರಾಮನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಮಹಾರಾಷ್ಟ್ರ ಮುಂಬೈ ಮೂಲದ ಓಂ ಪ್ರತಾಪ್ ಸಿಂಗ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಅರ್ಜಿದಾರರು ಸಾಕಷ್ಟುಜನರಿಗೆ ವಂಚನೆ ಮಾಡಿದ್ದಾರೆ ಎಂಬುದು ಗೂಗಲ್ ರಿವ್ಯೂಯಿಂದ ತಿಳಿದುಬಂದಿದೆ. ಹೀಗಾಗಿ ಅವರಿಗೆ ಜಾಮೀನು ನೀಡಬಾರದು’ ಎಂದು ಸರ್ಕಾರಿ ವಕೀಲರು ವಾದಿಸಿದ್ದರು. ಆದರೆ, ‘ಗೂಗಲ್ ರಿವ್ಯೂಗಳಿಗೆ ಕಾನೂನುಬದ್ಧವಾದ ಸಾಕ್ಷ್ಯ ಮೌಲ್ಯ ಇಲ್ಲದ ಕಾರಣ ಅದನ್ನು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿತು.
ಪತಿಯ ಚೆಕ್ ಬೌನ್ಸ್ ಆದರೆ ಪತ್ನಿ ವಿರುದ್ಧ ಕೇಸ್ ಇಲ್ಲ: ಹೈಕೋರ್ಟ್
ಈ ಪ್ರಕರಣದ ದಾಖಲೆ ಪರಿಶೀಲಿಸಿದಾಗ ಅರ್ಜಿದಾರ-ದೂರುದಾರ ನಡುವೆ ಹಣಕಾಸು ವ್ಯವಹಾರ ನಡೆದಿರುವುದು ನಿಜ. ಆದರೆ, ದೂರುದಾರರಿಂದ ಪಡೆದಿದ್ದ ಹಣದ ಪೈಕಿ ಮೂರನೇ ಒಂದು ಭಾಗವನ್ನು ಅರ್ಜಿದಾರರು ಈಗಾಗಲೇ ಹಿಂದಿರುಗಿಸಿದ್ದಾರೆ. ಉಳಿದ ಹಣವನ್ನು ಮುಂದಿನ ದಿನದಲ್ಲಿ ಪಾವತಿಸುವುದಾಗಿಯೂ ಭರವಸೆ ನೀಡಿದ್ದಾರೆ. ಹಾಗಾಗಿ, ಅರ್ಜಿದಾರನಿಗೆ ನಿರೀಕ್ಷಣಾ ಜಾಮೀನು ನೀಡಲು ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಏನಿದು ಕೇಸು?: ಬೆಂಗಳೂರಿನ ಪವಿತ್ರಾ ಎಂಬಾಕೆ ರಾಮನಗರದಲ್ಲಿ ದೀಪದ ಎಣ್ಣೆ ತಯಾರಿಕೆ ಉದ್ದಿಮ ನಡೆಸುತ್ತಿದ್ದಾರೆ. ಅರ್ಜಿದಾರರ ಒಡೆತನದ ಮುಂಬೈ ಮೂಲದ ಡೈಮಂಡ್ ಪೆಟ್ರೋಲಿಯಂ ಕಂಪನಿಯೊಂದಿಗೆ ದೀಪದ ಎಣ್ಣೆಗೆ ಬೇಕಾದ ಲಿಕ್ವಿಡ್ ಪ್ಯಾರಫಿನ್ ಖರೀದಿಸಲು ಮುಂದಾಗಿ, ಒಟ್ಟು 52,39, 400 ರು. ಅನ್ನು ಎರಡು ಕಂತಿನಲ್ಲಿ ಪಾವತಿಸಿದ್ದರು. ಅರ್ಜಿದಾರ 26,31,611 ರು. ಮೌಲ್ಯದ ಪ್ಯಾರಫಿನ್ ಪೂರೈಸಿದ್ದರು. ಉಳಿದ 26,07,800 ರು. ಮೌಲ್ಯದ ಪ್ಯಾರಫಿನ್ ಪೂರೈಸಿರಲಿಲ್ಲ. ಬಾಕಿ ಸರಕು ಪೂರೈಸಲು ಕೋರಿ ಅರ್ಜಿದಾರರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದ್ದರು.
Mandya: ಹೈಕೋರ್ಟ್ ಅಂಗಳಕ್ಕೆ ಜಾಮೀಯಾ ಮಸೀದಿ ವಿವಾದ
ಆದರೆ, ಅರ್ಜಿದಾರರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಅರ್ಜಿದಾರನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಪ್ರತಾಪ್ ಸಿಂಗ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ಪರ ವಕೀಲರು, ಅರ್ಜಿದಾರ ನಿರಂತರವಾಗಿ ಅಪರಾಧ ಕೃತ್ಯದಲ್ಲಿ ತೊಡಗಿದ್ದಾರೆ. ಈ ವಿಚಾರವು ಗೂಗಲ್ ರಿವ್ಯೂಯಿಂದ ತಿಳಿದು ಬರುತ್ತದೆ. ಹಾಗಾಗಿ, ನಿರೀಕ್ಷಣಾ ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲವಾಗಿದ್ದು, ಅರ್ಜಿ ವಜಾಗೊಳಿಸುವಂತೆ ನ್ಯಾಯಾಲಯವನ್ನು ಕೋರಿದ್ದರು.