ಬೆಂಗಳೂರಲ್ಲಿ 5ನೇ ಕೊರೋನಾ ಕೇಸ್ : ಗೂಗಲ್ ಉದ್ಯೋಗಿಗೆ ಸೋಂಕು

By Kannadaprabha News  |  First Published Mar 13, 2020, 11:23 AM IST

ಬೆಂಗಳೂರಿನಲ್ಲಿ  5ನೇ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಹನಿಮೂನ್ ಮುಗಿಸಿ ಬಂದವನಿಗೆ ಸೋಂಕು ತಗುಲಿದೆ. 


ಬೆಂಗಳೂರು [ಮಾ.13]:  ಬೆಂಗಳೂರು ನಗರದಲ್ಲಿ ಮತ್ತೊಂದು ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಮುಂಬೈ ಮೂಲದ 26 ವರ್ಷದ ನವ ವಿವಾಹಿತ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಫೆ.23ರಂದು ಪತ್ನಿಯೊಂದಿಗೆ ಮಧುಚಂದ್ರಕ್ಕೆ ಗ್ರೀಸ್‌ಗೆ ತೆರಳಿದ್ದ ವ್ಯಕ್ತಿಯು ಮಾ.6ರಂದು ಮುಂಬೈಗೆ ವಾಪಸಾಗಿದ್ದ. ಬಳಿಕ ಮಾ.8ರಂದು ಮುಂಬೈನಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ಸೋಂಕಿತ ವ್ಯಕ್ತಿಗೆ ಗುರುವಾರ ಸೋಂಕು ದೃಢಪಟ್ಟಿದೆ. ಈವರೆಗೆ ಸೋಂಕಿತ ವ್ಯಕ್ತಿಯು ಹತ್ತು ಮಂದಿಯೊಂದಿಗೆ ನೇರ ಹಾಗೂ 7 ಮಂದಿಯೊಂದಿಗೆ ಪರೋಕ್ಷ ಸಂಪರ್ಕ ಹೊಂದಿದ್ದು, ಅಷ್ಟೂಮಂದಿಯ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.

Tap to resize

Latest Videos

ಉಳಿದಂತೆ ಮುಂಬೈನಲ್ಲಿರುವ ಸೋಂಕಿತ ವ್ಯಕ್ತಿಯ ತಂದೆ, ತಾಯಿ ಹಾಗೂ ಮುಂಬೈನಿಂದ ಆಗ್ರಾಕ್ಕೆ ತೆರಳಿರುವ ಸೋಂಕಿತನ ಪತ್ನಿಗೂ ಸೋಂಕು ಹರಡಿರಬಹುದಾದ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮಕ್ಕಾಗಿ ಸ್ಥಳೀಯ ಆರೋಗ್ಯ ಇಲಾಖೆಗಳಿಗೆ ರಾಜ್ಯ ಸರ್ಕಾರವು ಮಾಹಿತಿ ರವಾನಿಸಿದೆ.

ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ಬೆಂಗಳೂರಿನಲ್ಲಿ ಕೆಲಸ ಮಾಡುವ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಸೋಂಕು ದೃಢಪಟ್ಟಿದೆ. ಪತ್ನಿಯೊಂದಿಗೆ ಗ್ರೀಸ್‌ಗೆ ತೆರಳಿದ್ದ ವ್ಯಕ್ತಿಯು ನೇರವಾಗಿ ಮಾ.6ರಂದು ಮುಂಬೈಗೆ ಬಂದಿದ್ದರು. ಮಾ.8ರಂದು ಇಂಡಿಗೋ ವಿಮಾನದ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದು ಬೆಂಗಳೂರಿಗೆ ಆಗಮಿಸಿದ್ದರು. ಬಳಿಕ ಅವರಿಗೆ ಜ್ವರ, ನೆಗಡಿ, ಗಂಟಲು ಸೋಂಕು ಉಂಟಾಗಿತ್ತು. ಹೀಗಾಗಿ ಮಾ.9ರಂದು ಕಚೇರಿಗೆ ಹೋಗಿದ್ದವರು ನಾಲ್ವರು ಸಹೋದ್ಯೋಗಿಗಳೊಂದಿಗೆ ಮಾತ್ರ ಮಾತನಾಡಿ ಒಂದು ಗಂಟೆ ಒಳಗಾಗಿ ಮನೆಗೆ ವಾಪಸಾಗಿದ್ದಾರೆ.

ಬೆಂಗಳೂರಲ್ಲಿ ಕೊರೋನಾ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ...

ಬಳಿಕ ಕೊರೋನಾ ಲಕ್ಷಣಗಳ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಮಾ.10ರಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಆಗಮಿಸಿದ್ದಾರೆ. ಗುರುವಾರ ಪರೀಕ್ಷೆಯ ಫಲಿತಾಂಶ ಬಂದಿದ್ದು, ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಹಿನ್ನೆಲೆಯಲ್ಲಿ ಜಯನಗರ ಜನರಲ್‌ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವ್ಯಕ್ತಿಯ ಆರೋಗ್ಯವು ಸ್ಥಿರವಾಗಿದ್ದು, ಅವರೊಂದಿಗೆ ಸಂಪರ್ಕ ಹೊಂದಿದ್ದವರ ಮಾಹಿತಿಯನ್ನೂ ಕಲೆ ಹಾಕಿದ್ದೇವೆ. ಯಾರಿಗೂ ರೋಗದ ಲಕ್ಷಣಗಳು ಇಲ್ಲದಿರುವುರಿಂದ ಮನೆಯಲ್ಲೇ ಪ್ರತ್ಯೇಕ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

"

ಕಲಬುರಗಿಯಲ್ಲಿ 40ಕ್ಕೂ ಹೆಚ್ಚು ಜನರಿಗೆ ಹೋಂ ಐಸೊಲೇಷನ್..

ಕಂಪನಿಯಲ್ಲಿ 154 ಉದ್ಯೋಗಿಗಳಿದ್ದರು:  ಸೋಂಕಿತ ವ್ಯಕ್ತಿಯ ಕಂಪನಿಯಲ್ಲಿ 154 ಉದ್ಯೋಗಿಗಳಿದ್ದರು. ಆದರೆ ವ್ಯಕ್ತಿಯು ಯಾರನ್ನೂ ಸಂಪರ್ಕ ಮಾಡಿಲ್ಲ. ನಾಲ್ಕು ಮಂದಿ ಆಪ್ತರನ್ನು ಮಾತ್ರ ಸಂಪರ್ಕ ಮಾಡಿದ್ದಾರೆ. ಹೀಗಾಗಿ ಅವರೆಲ್ಲರನ್ನೂ ಸಂಪರ್ಕಿತರು ಎಂದು ಪರಿಗಣಿಸಿಲ್ಲ. ಆದಾಗ್ಯೂ ಅವರ ಮೇಲೂ ನಿಗಾ ವಹಿಸಲಾಗುವುದು. ಜತೆಗೆ ವ್ಯಕ್ತಿ ಓಡಾಡಿದ್ದ ಕ್ಯಾಬ್‌ ಚಾಲಕ, ಬೆಂಗಳೂರಿನಲ್ಲಿ ವ್ಯಕ್ತಿಯ ಜೊತೆಗಿದ್ದ ಸಹೋದರ, ಮುಂಬೈನಿಂದ ಬೆಂಗಳೂರಿಗೆ ಆಗಮಿಸುವಾಗ ಪ್ರಯಾಣಿಸಿದ್ದ ಇಂಡಿಗೋ ವಿಮಾನದಲ್ಲಿದ್ದ ಸುತ್ತಲಿನ ಮೂರು ಸಾಲುಗಳಲ್ಲಿನ ಪ್ರಯಾಣಿಕರನ್ನು ಸಂಪರ್ಕಿಸುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ತರೆ 4 ಸೋಂಕಿತರ ಆರೋಗ್ಯ ಸ್ಥಿರ:  ಸೋಮವಾರ ಹಾಗೂ ಮಂಗಳವಾರ ಕೊರೋನಾ ಸೋಂಕು ದೃಢಪಟ್ಟಿದ್ದ ನಾಲ್ಕೂ ಮಂದಿಯ ಆರೋಗ್ಯ ಸ್ಥಿರವಾಗಿದೆ. 46 ವರ್ಷದ ಸೋಂಕಿತ ಟೆಕ್ಕಿಗೆ ಮಧುಮೇಹ ಸಮಸ್ಯೆ ಕಾಣಿಸಿಕೊಂಡಿದೆ. ಮಧುಮೇಹ 240ರಷ್ಟಿದ್ದು, ನಿಯಂತ್ರಿಸಲು ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಎದೆಯ ಎಕ್ಸ್‌-ರೇನಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಂಡಿದ್ದು, ಗಂಭೀರವಾದ ಯಾವುದೇ ಸಮಸ್ಯೆ ಇಲ್ಲ. ಅವರು ಆರಾಮವಾಗಿದ್ದಾರೆ. ಉಳಿದಂತೆ ಅವರ ಪತ್ನಿ ಹಾಗೂ ಮಗಳ ಆರೋಗ್ಯವೂ ಸ್ಥಿರವಾಗಿದೆ. 50 ವರ್ಷದ ಟೆಕ್ಕಿಯ ಆರೋಗ್ಯದಲ್ಲೂ ಸಹ ಯಾವುದೇ ಸಮಸ್ಯೆ ಕಾಣಿಸಿಲ್ಲ ಎಂದು ಸಚಿವ ಡಾ.ಕೆ. ಸುಧಾಕರ್‌ ಮಾಹಿತಿ ನೀಡಿದರು.

click me!