ಕ್ರಿಸ್ತನ ಮರಣ ದಿನ ಗುಡ್‌ಫ್ರೈಡೇ ಆಗಿದ್ದು ಹೀಗೆ

By Kannadaprabha NewsFirst Published Apr 2, 2021, 3:34 PM IST
Highlights

ಕ್ರೈಸ್ತರ ಪಾಲಿಗೆ ಗುಡ್‌ ಫ್ರೈಡೇ ಅತ್ಯಂತ ಪವಿತ್ರ ಹಬ್ಬ. ಹಾಗೆಯೇ ಇದು ಭರವಸೆಯ ಹಬ್ಬ. ಕಷ್ಟ-ನೋವುಗಳ ನಂತರ ಸುಖದ ನಾಳೆಗಳಿವೆ ಎಂಬುದನ್ನು ನೆನಪಿಸುವ ಹಬ್ಬ.

ಮಾನವ ಕುಲದ ರಕ್ಷಣೆಗಾಗಿ ಧರೆಗೆ ಅವತರಿಸಿದ ದೇವಪುತ್ರ ಯೇಸುಕ್ರಿಸ್ತನ ಮರಣದ ದಿನ ಹೇಗೆ ಶುಭ ಶುಕ್ರವಾರವಾಗುತ್ತದೆ? ಅದು ದುಃಖದ ಶುಕ್ರವಾರ ಅಲ್ಲವೇ? ಅಲ್ಲ. ಅದು ದುಃಖದ ದಿನವಲ್ಲ. ಕ್ರೈಸ್ತರಿಗೆ ಅದು ಅತ್ಯಂತ ಪವಿತ್ರ ದಿನ, ಹಾಗೆಯೇ ಶುಭದಿನ ಕೂಡ.

ಯೇಸುವಿನ ಜನ್ಮ ಇತಿಹಾಸ

ಮನುಷ್ಯನ ಪಾಪಕಾರ್ಯಗಳು ಹೆಚ್ಚಿದಾಗ ದೇವರು ಮನುಷ್ಯರ ರಕ್ಷಣೆಗೆ ರಕ್ಷಕನೊಬ್ಬನನ್ನು ಕಳುಹಿಸುವ ಬಗ್ಗೆ ಪ್ರವಾದಿಗಳ ಮೂಲಕ ವಾಗ್ದಾನ ಮಾಡುತ್ತಾರೆ. ಯಹೂದಿ ಜನರು ಆ ರಕ್ಷಕನಿಗಾಗಿ ಎದುರು ನೋಡುತ್ತಿದ್ದರು. ಈ ಸಮಯದಲ್ಲಿ ಜೆರುಸಲೇಂನ ಬೆತ್ಲೆಹೇಮ್‌ನಲ್ಲಿ ಯೇಸುಕ್ರಿಸ್ತರ ಜನನವಾಗುತ್ತದೆ. ಒಂದಷ್ಟುಜನ ಯೇಸುಕ್ರಿಸ್ತನೇ ದೇವರು ಕಳುಹಿಸಿದ ರಕ್ಷಕ ಎಂದು ನಂಬಿದರು. ಆದರೆ ಯೇಸುಕ್ರಿಸ್ತರು ಸಾಕಷ್ಟುಅದ್ಭುತ ಕೃತ್ಯಗಳನ್ನು ಮಾಡಿದರೂ ಜನರು ಅವರನ್ನು ನಂಬಲಿಲ್ಲ.

ಅದರ ಬದಲು ಯೇಸು ತಾನು ದೇವರೆಂದು ಹೇಳಿ ಮೋಸೆಸ್‌ ಮೂಲಕ ದೇವರು ನೀಡಿದ ಏಕ ದೇವರ ಆರಾಧನೆ ಎಂಬ ಆಜ್ಞೆಯನ್ನು ಧಿಕ್ಕರಿಸುತ್ತಿದ್ದಾರೆ, ಕೆಲಸ ಮಾಡಲು ಅನುಮತಿಯಿಲ್ಲದ ಭಾನುವಾರಗಳಂದು ರೋಗಿಗಳನ್ನು ಗುಣಪಡಿಸಿದರು, ಪಾಪಿಗಳು, ಸುಂಕ ವಸೂಲಿಗಾರರು ಮುಂತಾದವರನ್ನು ಪ್ರೀತಿಯಿಂದ ಕಂಡರು ಎಂದೆಲ್ಲಾ ಆರೋಪಿಸಿ ಅವರನ್ನು ಶಿಲುಬೆಗೆ ಜಡಿದು ಕೊಲ್ಲಲು ಹವಣಿಸುತ್ತಾರೆ.

ಯೇಸುವಿನ ಜೀವನದಲ್ಲಿ ನಡೆಯಲಿರುವ ಘಟನೆಗಳ ಬಗ್ಗೆ ವಿವಿಧ ಪ್ರವಾದಿಗಳು ಪ್ರವಾದನೆ ಮಾಡಿದ್ದು, ಅವು ಬೈಬಲ್‌ನ ಹಳೆಯ ಒಡಂಬಡಿಕೆಯಲ್ಲಿ ದಾಖಲಾಗಿದ್ದವು. ಜನರು ಅವನ್ನೂ ನಂಬಲು ತಯಾರಾಗಲಿಲ್ಲ. ಬದಲಿಗೆ ಯೇಸುಕ್ರಿಸ್ತರನ್ನು ರೋಮನ್‌ ರಾಜ್ಯಪಾಲನಾಗಿದ್ದ ಪಿಲಾತನ ಬಳಿ ವಿಚಾರಣೆಗೆಂದು ಕರೆದೊಯ್ದರು. ಯೇಸುವಿನಲ್ಲಿ ಯಾವುದೇ ತಪ್ಪು ಇಲ್ಲದ ಕಾರಣ ಅವರನ್ನು ಬಿಡುಗಡೆಗೊಳಿಸಲು ಪಿಲಾತನು ಬಯಸಿದನು.

ಎಲ್ ಅಕ್ಷರದಿಂದ ಶುರುವಾಗೋ ಹೆಸರಿನವರು ಬೆಸ್ಟ್ ಲವರ್ಸ್!

ಶಿಲುಬೆಗೇರಿಸಿ ಮೊಳೆ ಜಡಿದರು

ಪಾಸ್ಖ ಹಬ್ಬದ ಸಂದರ್ಭದಲ್ಲಿ ಒಬ್ಬ ಕೈದಿಯನ್ನು ಬಿಡುಗಡೆಗೊಳಿಸುವ ಪದ್ಧತಿ ಅವರಲ್ಲಿತ್ತು. ಆದರೆ, ಜನರು ಯೇಸುವನ್ನು ಶಿಲುಬೆಗೇರಿಸಿ, ಬರಬ್ಬನನ್ನು ಬಿಟ್ಟುಬಿಡಿ ಎಂದು ಕುಪ್ರಸಿದ್ಧ ಕೊಲೆಗಾರ ಬರಬ್ಬನ ಬಿಡುಗಡೆಗಾಗಿ ಆಗ್ರಹಿಸಿದರು. ಜನರ ದಂಗೆಗೆ ಹೆದರಿ ಅಸಹಾಯಕನಾದ ಪಿಲಾತ ಯೇಸುವನ್ನು ಜನರ ವಶಕ್ಕೆ ನೀಡಿದನು. ಅವರು ಯೇಸುವಿನ ಶಿರಕ್ಕೆ ಚೂಪಾದ ಮುಳ್ಳಿನ ಕಿರೀಟ ತೊಡಿಸಿದರು. ಭಾರವಾದ ಶಿಲುಬೆಯನ್ನು ಹೊರಿಸಿ ಕಪಾಲ (ಗೊಲ್ಗೊಥಾ) ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ಕರೆದೊಯ್ದರು.

ಅಲ್ಲಿ ಅವರ ಮೈಯ ಗಾಯಗಳಿಗೆ ಅಂಟಿದ ರಕ್ತಸಿಕ್ತವಾದ ಬಟ್ಟೆಗಳನ್ನು ಎಳೆದು ತೆಗೆದು ಸೈನಿಕರು ಅದನ್ನು ನಾಲ್ಕು ಪಾಲು ಮಾಡಿ ಹಂಚಿಕೊಂಡರು. ಯೇಸುವಿನ ಕೈಕಾಲುಗಳನ್ನು ಮೊಳೆಹಾಕಿ ಶಿಲುಬೆಗೆ ಜಡಿದರು. ಇಬ್ಬರು ಕಳ್ಳರ ಮಧ್ಯೆ ಅವರನ್ನು ಶಿಲುಬೆಗೇರಿಸಿದರು. ಸಂಜೆ ಸುಮಾರು ಮೂರು ಗಂಟೆಯ ಹೊತ್ತಿಗೆ ಯೇಸು ಮರಣ ಹೊಂದಿದರು. ಆಗ ಒಮ್ಮೆಲೇ ಸೂರ್ಯಗ್ರಹಣವಾಗುತ್ತದೆ. ಭೂಮಿಯಿಡೀ ಕತ್ತಲೆ ಕವಿಯುತ್ತದೆ. ಜೆರುಸಲೇಂ ದೇವಾಲಯದ ಗರ್ಭಗುಡಿಯ ಪರದೆ ಮೇಲಿಂದ ಕೆಳಗಿನವರೆಗೆ ಹರಿದು ಹೋಗುತ್ತದೆ. ಭೂಕಂಪವುಂಟಾಗುತ್ತದೆ. ಇದನ್ನು ಕಂಡ ಜನ ಭಯಭೀತರಾಗಿ ಇವರು ನಿಜವಾಗಿಯೂ ದೇವಪುತ್ರರಾಗಿದ್ದರು ಎಂದು ಬೊಬ್ಬಿರಿಯುತ್ತಾರೆ.

ಯೇಸುವಿನ ಪುನರುತ್ಥಾನ

ಯೇಸು ತಮ್ಮ ಶಿಲುಬೆ ಮರಣ ಹಾಗೂ ಪುನರುತ್ಥಾನದ ಬಗ್ಗೆ ಮೂರು ವಿಭಿನ್ನ ಸಂದರ್ಭಗಳಲ್ಲಿ ಶಿಷ್ಯರಿಗೆ ಎಚ್ಚರಿಕೆ ನೀಡಿದ್ದರು. ಶಿಷ್ಯರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯೇಸು ಪುನರುತ್ಥಾನ ಹೊಂದುತ್ತಾರೆಂದು ಹೇಳಿದ್ದನ್ನು ನೆನಪಿಸಿಕೊಂಡ ಜನರು, ಅವರ ಶಿಷ್ಯರು ಅವರ ಶವವನ್ನು ಹೊತ್ತೊಯ್ದು ಅವರು ಪುನರುತ್ಥಾನ ಹೊಂದಿದ್ದಾರೆಂದು ಸುಳ್ಳು ಹೇಳಬಹುದು ಎಂದು ಯೇಸುವಿನ ಶರೀರ ಇಟ್ಟಿದ್ದ ಕಲ್ಲಿನಲ್ಲಿ ಕೊರೆದು ಮಾಡಿದ ಗುಹಾ ಸಮಾಧಿಯ ಬಾಯಿಗೆ ಬಹುದೊಡ್ಡ ಕಲ್ಲಿಟ್ಟು ಮುಚ್ಚಿ ಪಹರೆಗಾರರನ್ನಿಟ್ಟರು.

ವಾಸ್ತು ಪ್ರಕಾರ ಈ ವಸ್ತುಗಳನ್ನು ನೆಲದ ಮೇಲೆ ತಪ್ಪಿಯೂ ಇಡಬೇಡಿ

ಆದರೆ ಮೂರನೇ ದಿನ ಅಂದರೆ ಭಾನುವಾರ ಬೆಳಗ್ಗಿನ ಜಾವ ಮೂರು ಗಂಟೆಯ ಹೊತ್ತಿಗೆ ಒಮ್ಮೆಲೇ ಆ ಕಲ್ಲು ಉರುಳಿ ಹೋಗುತ್ತದೆ. ಯೇಸು ಪುನಃ ಜೀವಂತರಾಗಿ ಎದ್ದು ಬರುತ್ತಾರೆ. ಇದೇ ಈಸ್ಟರ್‌ ಅಥವಾ ಪುನರುತ್ಥಾನದ ಹಬ್ಬ. ಯೇಸು ಶಿಷ್ಯರಿಗೆ ಪ್ರತ್ಯಕ್ಷರಾಗುತ್ತಾರೆ. ಅವರಿಗೆ ಧೈರ್ಯ ತುಂಬುತ್ತಾರೆ. ದೈವಿಕ ಶಕ್ತಿಯನ್ನು ಅವರ ಮೇಲೆ ಕಳಿಸುವ ಭರವಸೆ ನೀಡುತ್ತಾರೆ. ತಮ್ಮ ಪುನರುತ್ಥಾನದ ನಲವತ್ತನೇ ದಿನ ಯೇಸು ಶಿಷ್ಯರು ನೋಡುತ್ತಿದ್ದಂತೆ ಸ್ವರ್ಗಾರೋಹಣ ಮಾಡುತ್ತಾರೆ. ಆ ಬಳಿಕ ದೇವರ ಶಕ್ತಿ ಪಡೆದ ಶಿಷ್ಯರು ಪ್ರಪಂಚದಾದ್ಯಂತ ಸುವಾರ್ತೆ ಸಾರಲು ಹೊರಡುತ್ತಾರೆ.

ಪಾಪ ನಿವೇದನೆಗೆ ಪ್ರಾರ್ಥನೆ

ಗುಡ್‌ ಫ್ರೈಡೇಗೆ ಸಂಬಂಧಿಸಿದ ಕಾರ್ಯಕ್ರಮಗಳು ವಿಭೂತಿ ಬುಧವಾರದಿಂದ ಆರಂಭವಾಗುತ್ತವೆ. ಆ ದಿನ ಪಾಪಗಳ ಕುರಿತ ಪಶ್ಚಾತ್ತಾಪದ ಕುರುಹಾಗಿ ಹಣೆಯಲ್ಲಿ ಬೂದಿ ಬಳಿಯುವ ಮೂಲಕ ನಲವತ್ತು ದಿನಗಳ ಕಾಲದ ತಪಸ್ಸು ಕಾಲ (ಪಾಸ್ಖ ಕಾಲ) ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಬಹುತೇಕ ಕ್ರೈಸ್ತರು ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರವನ್ನಷ್ಟೇ ಸೇವಿಸುತ್ತಾರೆ. ಪ್ರಾರ್ಥನೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಗುಡ್‌ ಫ್ರೈಡೇಗಿಂತ ಮೊದಲಿನ ಭಾನುವಾರವನ್ನು ಗರಿಗಳ ಭಾನುವಾರ ಎಂದು ಆಚರಿಸಲಾಗುತ್ತದೆ.

ಜೆರುಸಲೇಂ ನಗರಕ್ಕೆ ಕತ್ತೆಯ ಮೇಲೇರಿ ಬಂದ ಯೇಸುವನ್ನು ಜನರು ದಾರಿಯಲ್ಲಿ ಆಲಿವ್‌ ಗಿಡದ ಎಲೆಗಳನ್ನು ಹಾಗೂ ತಮ್ಮ ಮೇಲಂಗಿಗಳನ್ನು ಹಾಸಿ ಗೌರವದಿಂದ ರಾಜೋಚಿತವಾಗಿ ಸ್ವೀಕರಿಸಿದ್ದರು. ಇದರ ನೆನಪೇ ಗರಿಗಳ ಭಾನುವಾರ. ಆ ದಿನ ಚಚ್‌ರ್‍ಗಳಲ್ಲಿ ಆಶೀರ್ವದಿಸಿದ ಎಳೆ ತೆಂಗಿನ ಗರಿಯನ್ನು ಭಕ್ತರಿಗೆ ನೀಡುತ್ತಾರೆ. ಪಾಮ… ಸಂಡೇಯಿಂದ ಈಸ್ಟರ್‌ ಸಂಡೇವರೆಗಿನ ಒಂದು ವಾರವನ್ನು ಪವಿತ್ರವಾರ ಎಂದು ಆಚರಿಸುತ್ತಾರೆ.

ಪ್ರಕೃತಿಯಲ್ಲಿ ಕಾಣುತ್ತೆ ಪರಶಿವನ ಮೂರು ಕಣ್ಣುಗಳು..!

ಕ್ರೈಸ್ತರೆಲ್ಲರೂ ಪಾಪನಿವೇದನೆ ಮಾಡಿಕೊಂಡು ಪಾಪಮುಕ್ತ ಮನಸ್ಸಿನಿಂದ ಹಬ್ಬದ ಆಚರಣೆಗೆ ಸಿದ್ಧರಾಗುತ್ತಾರೆ. ಪಾಸ್ಖ ಗುರುವಾರದಂದು ಯೇಸುಕ್ರಿಸ್ತರು ಸೇವೆ ಹಾಗೂ ವಿನಯದ ಸಂಕೇತವಾಗಿ ಶಿಷ್ಯರ ಪಾದಗಳನ್ನು ತೊಳೆದುದರ ನೆನಪಿಗೆ ಚರ್ಚಿನಲ್ಲಿ ಪಾದ ತೊಳೆಯುವ ಕಾರ್ಯಕ್ರಮದಲ್ಲಿ ಗುರುಗಳು ಆಯ್ದ ಹನ್ನೆರಡು ಜನರ ಪಾದಗಳನ್ನು ತೊಳೆದು ಒರೆಸಿ ಮುತ್ತಿಡುತ್ತಾರೆ. ಆ ದಿನ ಯೇಸುವಿನ ಅಂತಿಮ ಭೋಜನ (ಲಾಸ್ಟ್‌ ಸಪ್ಪರ್‌)ದ ಸ್ಮರಣೆಯನ್ನು ಆಚರಿಸಲಾಗುತ್ತದೆ. ಆ ದಿನ ಅಧಿಕೃತವಾಗಿ ಕ್ರೈಸ್ತ ಧರ್ಮದ ಪೂಜಾ ವಿಧಾನ ಉದ್ಘಾಟನೆಗೊಂಡಿತು ಎನ್ನಬಹುದು.

ಭರವಸೆಯ ಹಬ್ಬ

ಗುಡ್‌ ಫ್ರೈಡೇ ದಿನ ಶಿಲುಬೆಯ ಹಾದಿ ಎಂಬ ಆಚರಣೆಯಿರುತ್ತದೆ. ಯೇಸು ಶಿಲುಬೆಯನ್ನು ಹೊತ್ತು ಗೊಲ್ಗೊಥಾ ಬೆಟ್ಟಕ್ಕೆ ಹೋಗಿ ಶಿಲುಬೆಯಲ್ಲಿ ಮರಣ ಹೊಂದುವವರೆಗಿನ ಘಟನೆಗಳನ್ನು ಪ್ರಾರ್ಥನಾ ಪೂರ್ವಕವಾಗಿ ಸ್ಮರಿಸಲಾಗುತ್ತದೆ. ಕ್ರೈಸ್ತ ಧರ್ಮದಲ್ಲಿ ಜನರು ಉಪವಾಸ ಆಚರಿಸಬೇಕಾದ ಎರಡೇ ಎರಡು ದಿನಗಳಿವೆ.

ಅವು ವಿಭೂತಿ ಬುಧವಾರ ಮತ್ತು ಗುಡ್‌ ಫ್ರೈಡೇ. ಪವಿತ್ರ ಶನಿವಾರವೂ ವಿಶೇಷ ಪ್ರಾರ್ಥನೆಯಿರುತ್ತದೆ. ಈಸ್ಟರ್‌ ಭಾನುವಾರ ಬೆಳಗಿನ ಜಾವ ಮೂರು ಗಂಟೆಗೆ ಯೇಸುವಿನ ಪುನರುತ್ಥಾನದ ಹಬ್ಬದ ಸಲುವಾದ ಸಂಭ್ರಮದ ಪೂಜೆ ಇರುತ್ತಿತ್ತು. ಆದರೆ ಕೆಲವು ವರ್ಷಗಳಿಂದ ಈ ಪೂಜೆಯನ್ನು ಶನಿವಾರ ಸಂಜೆ ಏಳು ಗಂಟೆಯ ಹೊತ್ತಿಗೆ ಆರಂಭಿಸಲಾಗುತ್ತಿದೆ. ಕ್ರೈಸ್ತರ ಪಾಲಿಗೆ ಗುಡ್‌ ಫ್ರೈಡೇ ಅತಿ ಪವಿತ್ರ ಹಬ್ಬ. ಹಾಗೆಯೇ ಇದು ಭರವಸೆಯ ಹಬ್ಬ. ಕಷ್ಟ-ನೋವುಗಳ ನಂತರ ಸುಖದ ನಾಳೆಗಳಿವೆ ಎಂಬುದನ್ನು ನೆನಪಿಸುವ ಹಬ್ಬವಿದು.

- ಜೆಸ್ಸಿ ಪಿ.ವಿ., ಪುತ್ತೂರು

click me!