
ಗೋಕರ್ಣ/ ತುಮಕೂರು (ಸೆ.30): ಗೋಕರ್ಣದ ಮುಖ್ಯ ಕಡಲತೀರದ ರಾಮತೀರ್ಥದ ಬಳಿಯ ಪಾಂಡವರ ಗುಹೆಯಲ್ಲಿ ಪತ್ತೆಯಾಗಿದ್ದ ರಷ್ಯಾದ ನೀನಾ ಕುಟೀನಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಸೋಮವಾರ ಪೊಲೀಸರು ರಷ್ಯಾಗೆ ಕಳುಹಿಸಿದ್ದಾರೆ. ಜು.10ರಂದು ಗುಡ್ಡ ಕುಸಿತ ಪ್ರದೇಶವಾದ ರಾಮತೀರ್ಥದ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ರಷ್ಯಾ ಮಹಿಳೆ ತನ್ನ ಮಕ್ಕಳಾದ ಪ್ರೆಯಾ (6) ಹಾಗೂ ಅಮಾ (4) ಅವರು ಗುಹೆಯಲ್ಲಿ ವಾಸವಿರುವುದು ಪತ್ತೆಯಾಗಿತ್ತು.
ನಂತರ ಇವರನ್ನು ವಿಚಾರಿಸಿದಾಗ ವೀಸಾ ಅವಧಿ ಮುಗಿದಿದ್ದು, ಹಲವು ದಿನಗಳಿಂದ ವಾಸವಿರುವುದು ತಿಳಿದು ಬಂದಿತ್ತು. ತಕ್ಷಣ ಅಪಾಯದ ಸ್ಥಳದಿಂದ ಪೊಲೀಸರು ಇವರನ್ನು ರಕ್ಷಿಸಿ, ತುಮಕೂರಿನ ವಿದೇಶಿಗರ ನಿಗಾ ಕೇಂದ್ರದಲ್ಲಿ ಇರಿಸಿದ್ದರು. ಇದಾದ ನಂತರ ಈಕೆಯ ಪತಿ ರಷ್ಯಾ ನಿವಾಸಿ ಡೋರ್‌ಶ್ಲೋಮೋ ಗೋಲ್ಡ್ಸ್ಟೈನ್ ಬೆಂಗಳೂರು ಹೈಕೋರ್ಟ್‌ನಲ್ಲಿ ರಷ್ಯಾಗೆ ಕಳುಹಿಸುವಂತೆ ಅರ್ಜಿ ಸಲ್ಲಿಸಿದ್ದರು. ಗೋಕರ್ಣ ಹಾಗೂ ತುಮಕೂರು ಪೊಲೀಸ್ ಅಧಿಕಾರಿಗಳು ಮೂವರನ್ನು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ರಷ್ಯಾಗೆ ಕಳುಹಿಸಿದ್ದಾರೆ.
ಗೋಕರ್ಣದ ರಾಮತೀರ್ಥ ಬೆಟ್ಟದ ಮೇಲಿರುವ ಗುಹೆಯಲ್ಲಿ ಜು.11ರಂದು ರಷ್ಯಾದ ಮಹಿಳೆ ನೀನಾ ಕುಟಿನಾ (40) ಮತ್ತು ಆಕೆಯ ಇಬ್ಬರು ಪುತ್ರಿಯರು ಕಂಡು ಬಂದಿದ್ದರು. 2018ರಲ್ಲಿ ಬ್ಯುಸಿನೆಸ್ ವೀಸಾದಲ್ಲಿ ರಷ್ಯಾದಿಂದ ಭಾರತಕ್ಕೆ ಬಂದಿದ್ದ ಅವರು ಗೋವಾದಲ್ಲಿ ನೆಲೆಸಿದ್ದರು. ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಿಗೆ ಆಕರ್ಷಿತರಾಗಿದ್ದ ಕುಟಿನಾ, ಇತ್ತೀಚೆಗೆ ಮಕ್ಕಳ ಸಹಿತ ಗೋಕರ್ಣಕ್ಕೆ ಬಂದು, ಕಾಡಿನ ಗುಹೆಯಲ್ಲಿ ಏಕಾಂತದಲ್ಲಿ ವಾಸಿಸುತ್ತಿದ್ದರು.
ಇದೀಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕುಟಿನಾ ಪತಿ, ತಾನು 2017ರಿಂದ 2024 ರವರೆಗೆ ಪತ್ನಿ ಮತ್ತು ಮಕ್ಕಳೊಂದಿಗೆ ಗೋವಾದಲ್ಲಿ ನೆಲೆಸಿದ್ದೆ. 2024ರ ಅಂತ್ಯದಲ್ಲಿ ಪತ್ನಿ ಮಕ್ಕಳೊಂದಿಗೆ ಗೋವಾದಿಂದ ತಪ್ಪಿಸಿಕೊಂಡಿದ್ದರು. ಇತ್ತೀಚೆಗೆ ಗೋಕರ್ಣದ ಗುಹೆಯಲ್ಲಿ ಪತ್ತೆಯಾಗಿದ್ದಾರೆ. ಹೀಗಾಗಿ ಮಕ್ಕಳ ಭೇಟಿಗೆ ಅವಕಾಶ ಕಲ್ಪಿಸಬೇಕು. ಮಕ್ಕಳ ದಾಖಲೆಗಳು ದೃಢಪಡುವವರೆಗೆ ಗಡೀಪಾರು ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು. ಮಕ್ಕಳನ್ನು ಬಂಧನ ಕೇಂದ್ರದಿಂದ ಬಿಡುಗಡೆಗೊಳಿಸಿ ತನ್ನ ಸುಪರ್ದಿಗೆ ಹಸ್ತಾಂತರಿಸಲು ಆದೇಶಿಸಬೇಕು ಎಂದು ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ