ನಗರದ ಚಾಮರಾಜಪೇಟೆ ಮೈದಾನದಲ್ಲಿ ನ.1ರಿಂದ 3ರವರೆಗೆ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲು ಚಾಮರಾಜಪೇಟೆ ನಾಗರಿಕರ ಒಕ್ಕೂಟಕ್ಕೆ ಅನುಮತಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ನಿರ್ದೇಶಿಸಿರುವ ಹೈಕೋರ್ಟ್.
ಬೆಂಗಳೂರು (ನ.01): ನಗರದ ಚಾಮರಾಜಪೇಟೆ ಮೈದಾನದಲ್ಲಿ ನ.1ರಿಂದ 3ರವರೆಗೆ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲು ಚಾಮರಾಜಪೇಟೆ ನಾಗರಿಕರ ಒಕ್ಕೂಟಕ್ಕೆ ಅನುಮತಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ಒಂದೊಮ್ಮೆ ಈ ಮೈದಾನ ಬಳಕೆಗೆ ಯಾವುದಾದರೂ ಕಾನೂನು ಅಡಚಣೆಯಿದ್ದರೆ, ರಾಜ್ಯೋತ್ಸವ ಆಚರಣೆಗಾಗಿ ಒಕ್ಕೂಟಕ್ಕೆ ಪರ್ಯಾಯ ಮೈದಾನದ ವ್ಯವಸ್ಥೆ ಮಾಡಬಹುದು ಎಂದು ಸ್ಪಷ್ಟಪಡಿಸಿದೆ.
ಚಾಮರಾಜಪೇಟೆ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಅಣ್ಣಮ್ಮ ದೇವಿ ಉತ್ಸವ ಆಚರಿಸಲು ಅನುಮತಿ ನಿರಾಕರಿಸಿದ್ದ ಜಿಲ್ಲಾಧಿಕಾರಿಗಳ ಕ್ರಮ ಪ್ರಶ್ನಿಸಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಮೈದಾನವನ್ನು ಧಾರ್ಮಿಕ ಆಚರಣೆಗಳಿಗೆ ಬಳಕೆ ಮಾಡುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದನ್ನು ಉಲ್ಲೇಖಿಸಿ ರಾಜ್ಯೋತ್ಸವದ ಜೊತೆಗೆ ಅಣ್ಣಮ್ಮ ದೇವಿ ಉತ್ಸವ ನಡೆಸಲು ಅರ್ಜಿದಾರ ಸಂಘಟನೆಗೆ ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿದ್ದರು.
ಮಗನ ಆಸ್ತಿಯಲ್ಲಿ ತಾಯಿಗೂ ಹಕ್ಕು: ಹೈಕೋರ್ಟ್‌ನಿಂದ ಮಹತ್ವದ ಆದೇಶ
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ಹಮ್ಮಿಕೊಳ್ಳಲಾಗುವುದು. ಅಣ್ಣಮ್ಮದೇವಿ ಉತ್ಸವ ನಡೆಸುವುದಿಲ್ಲ. ಕನ್ನಡ ಧ್ವಜವನ್ನು ಬಿಟ್ಟು ಮತ್ಯಾವುದೇ ಧ್ವಜ ಹಾರಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ಮುಚ್ಚಳಿಕೆ ಬರೆದುಕೊಟ್ಟರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಕರ್ನಾಟಕ ರಾಜ್ಯ ರಚನೆ ಅಂಗವಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಆಚರಣೆಯಲ್ಲಿ ಎಲ್ಲ ಧರ್ಮದವರು ಭಾಗಿಯಾಗುತ್ತಾರೆ. ಹಾಗಾಗಿ, ರಾಜ್ಯೋತ್ಸವ ಆಚರಣೆಗೆ ಅನುಮತಿಯನ್ನು ಜಿಲ್ಲಾಡಳಿತ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಅಲ್ಲದೆ, ಮೈದಾನದಲ್ಲಿ ನಿಗದಿತ ದಿನ ಹಾಗೂ ಸಮಯದಲ್ಲಿ ಕೇವಲ ರಾಜ್ಯೋತ್ಸವ ಆಚರಿಸಬೇಕು ಹಾಗೂ ಕನ್ನಡ ನಾಡು-ನುಡಿಯನ್ನು ಪ್ರಚುರಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಒಕ್ಕೂಟದ ಸದಸ್ಯರು ಯಾವುದೇ ಧಾರ್ಮಿಕ ಭಾವನೆ ಹಾಗೂ ಕೋಮು ಸೌಹಾರ್ಧತೆಗೆ ಧಕ್ಕೆಯಾಗುವ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಜಿಲ್ಲಾಡಳಿತದ ನಡೆಗೆ ಹೈಕೋರ್ಟ್ ಬೇಸರ: ಮಂಗಳವಾರ ಕಲಾಪ ಪ್ರಾರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ಹಾಜರಾಗಿ, ಮೈದಾನದಲ್ಲಿ ರಾಜ್ಯೋತ್ಸವ ಆಚರಿಸಲು ಒಕ್ಕೂಟಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕರ್ನಾಟಕ ರಚನೆಯಾದ ದಿನದ ಪ್ರಯುಕ್ತ ರಾಜ್ಯ ಉತ್ಸವ ಆಚರಣೆ ಮಾಡಲಾಗುತ್ತದೆ. ಎಲ್ಲ ಧರ್ಮದವರು ಸೇರಿ ಹಬ್ಬದ ರೀತಿ ಸಂಭ್ರಮ ಮಾಡಬೇಕಿದೆ. ಅಂತಹ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡುವುದಿಲ್ಲ ಎಂದರೆ ಹೇಗೆ? ಮೇಲಾಗಿ ರಾಜ್ಯ ಸರ್ಕಾರವೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುತ್ತಿರುವಾಗ, ಇಲ್ಲಿ ಮಾತ್ರ ಅಡ್ಡಿಪಡಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿತಲ್ಲದೆ, ಪ್ರಕರಣ ಕುರಿತು ಜಿಲ್ಲಾಧಿಕಾರಿಯಿಂದ ವಿವರಣೆ ಪಡೆದು ತಿಳಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿತು.
ನಂತರ ಮಧ್ಯಾಹ್ನ 1.30ಕ್ಕೆ ಪ್ರಕರಣವನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಂಡಾಗ ಅರ್ಜಿದಾರರ ಪರ ವಕೀಲರು, ಅಣ್ಣಮ್ಮ ಉತ್ಸವ ಆಚರಣೆ ಮಾಡುವುದಿಲ್ಲ. ಕೇವಲ ರಾಜ್ಯೋತ್ಸವ ಆಚರಿಸಲಾಗುವುದು ಎಂದು ನ್ಯಾಯಪೀಠಕ್ಕೆ ಸ್ಪಷ್ಪಡಿಸಿದರು. ಅದಕ್ಕೆ ಜಿಲ್ಲಾಡಳಿತ ಪರ ಹಾಜರಿದ್ದ ಸರ್ಕಾರಿ ವಕೀಲರು ಒಪ್ಪಿದರು. ಇದರಿಂದ ಮೈದಾನದಲ್ಲಿ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತು. ಆದರೆ, ಕೆಲ ಸಮಯದ ಬಳಿಕ ಮತ್ತೆ ಅರ್ಜಿ ವಿಚಾರಣೆ ನಡೆಸಿ ಕಾನೂನು ಅಡಚಣೆಯಿದ್ದರೆ ಪರ್ಯಾಯ ಮೈದಾನ ಕಲ್ಪಿಸಬಹುದು ಎಂದು ಸೂಚಿಸಿತು.
ರಾಮನಗರ ಜಿಲ್ಲೆ ಮರುನಾಮಕರಣ ನನಗೆ ಗೊತ್ತಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಪ್ರಕರಣದ ಹಿನ್ನೆಲೆ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನ.1ರಿಂದ 3ರ ವರೆಗೆ ಕನ್ನಡ ರಾಜ್ಯೋತ್ಸವ/ ಅಣ್ಣಮ್ಮ ದೇವಿ ಉತ್ಸವ ಮತ್ತು ಕನ್ನಡ ಸಂಸ್ಕೃತಿಯನ್ನು ಪ್ರಸ್ತುತಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಅನುಮತಿ ನೀಡುವಂತೆ ಅರ್ಜಿದಾರ ಒಕ್ಕೂಟ ಅ.17ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಕೋರಿತ್ತು. ಸದರಿ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಮಾಡುವ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶವಿದೆ. ಈ ಹಿನ್ನೆಲೆಯಲ್ಲಿ ರಾಜ್ಯೋತ್ಸವ, ಅಣ್ಣಮ್ಮ ಉತ್ಸವ ಆಚರಣೆಗೆ ಅನುಮತಿ ನೀಡಿದಲ್ಲಿ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾದಂತಾಗಲಿದೆ. ಆದ ಕಾರಣ ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿತ್ತು.