ಕೊಪ್ಪಳದಲ್ಲಿ ಕಾರ್ಖಾನೆ ಸ್ಥಾಪನೆಗೆ ಗವಿಸಿದ್ಧೇಶ್ವರ ಶ್ರೀಗಳ ವಿರೋಧ; ಪ್ರತಿಭಟನೆ ವೇಳೆ ಕಣ್ಣೀರು!

Published : Feb 25, 2025, 05:52 AM ISTUpdated : Feb 25, 2025, 05:54 AM IST
ಕೊಪ್ಪಳದಲ್ಲಿ ಕಾರ್ಖಾನೆ ಸ್ಥಾಪನೆಗೆ ಗವಿಸಿದ್ಧೇಶ್ವರ ಶ್ರೀಗಳ ವಿರೋಧ; ಪ್ರತಿಭಟನೆ ವೇಳೆ ಕಣ್ಣೀರು!

ಸಾರಾಂಶ

ಕೊಪ್ಪಳದಲ್ಲಿ ಹೊಸ ಕಾರ್ಖಾನೆ ಸ್ಥಾಪನೆಗೆ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ, ಕಾರ್ಖಾನೆ ಸ್ಥಾಪನೆಯ ಆದೇಶವನ್ನು ರದ್ದುಗೊಳಿಸುವಂತೆ ತಾಕೀತು ಮಾಡಿದ್ದಾರೆ.

ಕೊಪ್ಪಳ (ಫೆ.25): ಗೆದ್ದಾಗಲೆಲ್ಲ ಸಚಿವರಾಗಿರುವ, ಮೂರು ಬಾರಿ ಮಂತ್ರಿಯಾದ ಶಿವರಾಜ ತಂಗಡಗಿ ಇದ್ದಾರೆ. 8-9 ಬಾರಿ ಗೆದ್ದಿರುವ ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ರಾಯರಡ್ಡಿ ಅವರಿದ್ದಾರೆ. ಸೋಲಿಲ್ಲದ ಸರದಾರ ಎಂದು ಕರೆಯಿಸಿಕೊಂಡಿರುವ ಶಾಸಕ ರಾಘವೇಂದ್ರ ಹಿಟ್ನಾಳ ಇದ್ದಾರೆ. ನೀವು ಮೂವರು ಸೇರಿ, ಜತೆಗೆ ಸಂಸದ ರಾಜಶೇಖರ ಹಿಟ್ನಾಳ ಅವರು, ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಿದ್ದನ್ನು ರದ್ದು ಮಾಡಿ, ಆದೇಶ ತೆಗೆದುಕೊಂಡೇ ಬರಬೇಕು ಎಂದು ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ತಾಕೀತು ಮಾಡಿದ್ದಾರೆ.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಮೂವರ ಅನುಮತಿ ಇಲ್ಲದೆ ಸರ್ಕಾರಿಯ ಕಚೇರಿ ಒಬ್ಬ ಅಧಿಕಾರಿಯನ್ನೂ ಬದಲಾಯಿಸಲು ಸಾಧ್ಯವಿಲ್ಲ. ಅಂಥದ್ದರಲ್ಲಿ ನಿಮಗೆ ಗೊತ್ತಿಲ್ಲದೆ ಇಂಥದ್ದೊಂದು ಕಾರ್ಖಾನೆ ಬರಲು ಹೇಗೆ ಸಾಧ್ಯ? ಆ ನೆಪ, ಈ ನೆಪ ಎಂದು ಹೇಳುವಂತಿಲ್ಲ, ಎಲ್ಲ ಜನಪ್ರತಿನಿಧಿಗಳಿಗೆ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ತಾವು ಆದೇಶ ರದ್ದು ಮಾಡಿಸಿಕೊಂಡು ಬನ್ನಿ. ನಿಮ್ಮದೇ ಸರ್ಕಾರ ಇದೆ. ಹೀಗಿದ್ದೂ ನಾವ್ಯಾಕೆ ಹೋರಾಟ ಮಾಡಬೇಕು? ಎಂದು ಪ್ರಶ್ನೆ ಮಾಡಿ, ಇದು ನಿಮ್ಮ ಜವಾಬ್ದಾರಿ ಎಂದು ಎಚ್ಚರಿಸಿದರು.

ಇದನ್ನೂ ಓದಿ: ₹1 ಲಕ್ಷ ಸಂಬಳ ಕೊಟ್ರೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ವೈದ್ಯರೇ ಸಿಗುತ್ತಿಲ್ಲ

ಅದು, ಬೆಂಗಳೂರಿನಲ್ಲಿ ಫೈನಲ್ ಆಗಿದೆಯೋ ದಿಲ್ಲಿಯಲ್ಲಿ ಫೈನಲ್ ಆಗಿದೆಯೋ ಗೊತ್ತಿಲ್ಲ. ನೀವು ಅಲ್ಲಿ ಹೋಗಿ ಕೇಳಬೇಕು ಮತ್ತು ಕ್ಯಾನ್ಸಲ್ ಮಾಡಿಸಿಕೊಂಡು ಬರಬೇಕು. ಇದಕ್ಕೆ ಉಳಿದೆಲ್ಲ ಜನಪ್ರತಿನಿಧಿಗಳು ಜತೆಯಾಗಬೇಕು, ನಾವ್ಯಾರೂ ಪ್ರತಿಭಟನೆ ಮಾಡುವುದಿಲ್ಲ. ನಿಮ್ಮ ಉತ್ತರಕ್ಕಾಗಿ ಕಾಯುತ್ತೇವೆ ಎಂದರು.

ಉಗ್ರ ಹೋರಾಟ ಮಾಡಿದಾಗ ಸ್ಪಂದಿಸುವುದಲ್ಲ, ನ್ಯಾಯಕ್ಕಾಗಿ ವಿನಂತಿ ಮಾಡಿಕೊಂಡಾಗಲೂ ಸ್ಪಂದಿಸಿದರೆ ಅರ್ಥ ಬರುತ್ತದೆ. ನಾವು ಜಪಾನ್ ಮಾಡಿ ಅಂತಾ ಕೇಳುವುದಿಲ್ಲ. ಆದರೆ, ನಮ್ಮನ್ನು ಜೋಪಾನ ಮಾಡಿ ಅಂತಾ ಕೇಳುತ್ತೇನೆ ಎಂದು ಶ್ರೀಗಳು ಹೇಳಿದರು. ಸರ್ಕಾರದ ವಿರುದ್ಧ ಘೋಷಣೆ ಹಾಕಬೇಡಿ, ಸಾರ್ವಜನಿಕ ಆಸ್ತಿಯ ಹಾಳು ಮಾಡಬೇಡಿ. ನಿಮ್ಮ ವಿರುದ್ಧ ಹೋರಾಟ ಮಾಡಲ್ಲ, ಭಕ್ತರ ಪರವಾಗಿ ಧ್ವನಿ ಎತ್ತಿದ್ದೇವೆ. ಸತ್ಯದ ಪರವಾಗಿ ಧ್ವನಿ ಎತ್ತಿದವರಿಗೆ ಸ್ಪಂದಿಸಬೇಕು ಎಂದರು.

ನನಗೆ ವಿಷ ಹಾಕಿದರೂ ನಾನು ನಿಮಗೆ ಕೆಟ್ಟ ಶಬ್ದ ಬಳಕೆ ಮಾಡುವುದಿಲ್ಲ. ನಮಗೆ ಬದುಕಲು ಕೊಡಿ, ಆನಂದದ ಕೊಪ್ಪಳ ಆಗಲಿ, ಆಧ್ಯಾತ್ಮದ ಕೊಪ್ಪಳ ಆಗಲಿ. 

ನಾನು ಹೇಳುವುದಿಲ್ಲ, ಮಾಡುತ್ತೇನೆ: ಈಗ ಸದ್ಯಕ್ಕೆ ಇಷ್ಟಂತೂ ಆಗಲಿ, ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇವೆ. ಫಲ-ಅಫಲಗಳ ಬಗ್ಗೆ ಚಿಂತಿಸುವುದು ಬೇಡ. ಸದ್ಯಕ್ಕೆ ಜನಪ್ರತಿನಿಧಿಗಳಿಗೆ ಜವಾಬ್ದಾರಿ ನೀಡಿದ್ದೇವೆ. ನಾನಂತೂ ಸ್ಪಷ್ಟವಾಗಿ ಹೇಳುತ್ತೇನೆ. ಇನ್ಮುಂದೆ ಕೊಪ್ಪಳಕ್ಕೆ ಯಾವ ಫ್ಯಾಕ್ಟರಿಯೂ ಬರುವುದಕ್ಕೆ ಬಿಡುವುದಿಲ್ಲ. ಅದರಲ್ಲಿ ರಾಜಿಯೂ ಆಗುವುದಿಲ್ಲ. ಏನು ಮಾಡಬೇಕು ಎಂದು ಆ ಗವಿಸಿದ್ಧ ದಾರಿ ತೋರಿಸಿದ್ದಾನೆ. ಅದನ್ನು ನಾನು ಈಗ ಹೇಳುವುದಿಲ್ಲ. ಹೇಳಿದರೆ ನೀವು ಅದನ್ನೇ ಟ್ರೋಲ್ ಮಾಡುತ್ತೀರಿ. ಆ ಗವಿಸಿದ್ಧ ಬೆಳಕು ತೋರಿದ್ದಾನೆ. ಅದರಂತೆಯೇ ನಾನು ನಡೆಯುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.

ನಮ್ಮ ಸುತ್ತ ಫ್ಯಾಕ್ಟರಿ ಆದರೆ, ಜನರನ್ನು ಎಲ್ಲಿಗೆ ಕಳುಹಿಸುತ್ತೀರಿ? ಅದಕ್ಕೆ ಉತ್ತರ ಕೊಟ್ಟು ಫ್ಯಾಕ್ಟರಿ ಕಟ್ಟಿ ಎಂದರು. ಚಂದಕಾಣಲು ಹಚ್ಚುವ ಕಾಡಿಗೆ ಮುಖಪೂರ್ತಿ ಸವರಬಾರದು. ಈಗ ಮತ್ತೊಂದು ಫ್ಯಾಕ್ಟರಿ ಬಂದರೆ ಕೊಪ್ಪಳ ನರಕವಾಗುತ್ತದೆ. ಕ್ಯಾನ್ಸರ್, ಅಸ್ತಮಾ ಸೇರಿದಂತ ಅನೇಕ ರೋಗಗಳು ಒಕ್ಕರಿಸಿವೆ. ಹುಟ್ಟುವ ಮಕ್ಕಳು ಬುದ್ಧಿಮಾಂದ್ಯರಾಗುತ್ತಿದ್ದಾರೆ. ಇರುವುದೊಂದೆ ತುಂಗಭದ್ರಾ ತಾಯಿ. ಆದರೆ, ಈಗ ಅದು ಸಹ ಹಸಿರಾಗುತ್ತದೆ. ಇದನ್ನು ತಡೆಯದಿದ್ದರೆ ನಾವು ಮುಂದೆ ನೀರು ಎಲ್ಲಿಂದ ಕುಡಿಯುವುದು ಎನ್ನುವುದನ್ನು ಯಾರನ್ನು ಕೇಳಬೇಕು ಎಂದರು.

ಮಠದ ಆವರಣ ಬಿಟ್ಟು ಬಂದಿದ್ಯಾಕೆ?: ನನ್ನನ್ನು ಮಠ ಆಚೆ ಕರೆಯಬೇಡಿ, ಗವಿಸಿದ್ಧಪ್ಪನನ್ನು ಮಠದಲ್ಲಿರಲು ಬಿಡಿ ಎಂದು ಹೇಳಿದ್ದು ಸತ್ಯ. ಆದರೆ, ನಾನು ಯಾಕೆ ಬಂದೆ ಅಂದರೆ, ನನ್ನನ್ನು ಸೇರಿದಂತೆ ಮಠದ 18 ಸ್ವಾಮೀಜಿಗಳಿಗೂ ನೀವು ಕಾಣಿಕೆ ನೀಡಿದ್ದೀರಿ, ಅನ್ನ ಹಾಕಿದ್ದೀರಿ, ಮಕ್ಕಳಿಗೆ ಏನೆಲ್ಲಾ ಕೊಟ್ಟಿದೀರಿ, ಇಷ್ಟೆಲ್ಲ ಕೊಟ್ಟಿರುವ ನೀವು ಕಷ್ಟದಲ್ಲಿರುವಾಗ ನಾನು ಸುಮ್ಮನೇ ಕುಳಿತುಕೊಳ್ಳಬಾರದು ಎಂದು ಆತ್ಮಸಾಕ್ಷಿಯಿಂದ ಧ್ವನಿ ಎತ್ತಿದ್ದೇನೆ.

ಧೂಳು ಕುಡಿದು ಇರಲೇನು?: ಅಜ್ಜಾವರು ಮಠಾ ಬಿಡ್ತೀನಿ ಅಂದಾರ ಅಂತಾ ಆಡಿಕೊಳ್ಳುತ್ತಾರೆ. ಮತ್ತೆ ಫ್ಯಾಕ್ಟರಿ ಧೂಳು ಕುಡಿದುಕೊಂಡು ಇಲ್ಲಿ ಇರಲೇನು ನಾನು? ಬೇರೆ ಕೆಲಸ ಇಲ್ಲವೇನು ನನಗೆ? ಇದರಲ್ಲಿ ರಾಜಿಯಾಗುವ ಮನುಷ್ಯ ಅಲ್ಲ, ಒಂದೇ ಗವಿಮಠ ಐತೇನು? ನಿಂತಲ್ಲಿ ಗವಿಮಠ ಕಟ್ಟಬಹುದು. ಗವಿಸಿದ್ಧ ಅದನ್ನು ಕರುಣಿಸಿದ್ದಾನೆ ಎಂದು ಬೇಸರದಿಂದ ಹೇಳಿದರು.ಮೊದಲು ಅಳವಡಿಸಿ: ಎಂಎಸ್‌ಪಿಎಲ್ ಕಾರ್ಖಾನೆಯವರು ಹೊಸ ತಂತ್ರಜ್ಞಾನವಿದ್ದು, ಡಸ್ಟ್ ಆಗುವುದಿಲ್ಲ ಎನ್ನುತ್ತಾರೆ. ಅದನ್ನೇ ಇರುವ ಕಾರ್ಖಾನೆಗಳಿಗೆ ಅಳವಡಿಸಿ, ಯಶಸ್ವಿಯಾಗಲಿ, ಮುಂದೆ ನೋಡಣ ಎಂದರು. 

ಇದನ್ನೂ ಓದಿ: Sri Abhinava Gavisiddeshwara Swamiji : ಈ ಭಾಗದ ಪರಿಸರ ಹಾನಿಗೆ ಅವಕಾಶಬೇಡ ಪಕ್ಷಾತೀತವಾಗಿ ಹೋರಾಟ ಬೇಕು

ಕೇವಲ ಎಂಎಸ್‌ಪಿಎಲ್‌ ಅಷ್ಟೇ ಅಲ್ಲ, ಅಣುಸ್ಥಾವರ, ಮುದ್ದಾಬಳ್ಳಿ ಬಳಿ ಸಕ್ಕರೆ ಕಾರ್ಖಾನೆ ಸೇರಿದಂತೆ ಯಾವುದೂ ಬೇಡ. ಈಗ ಇರುವ ಕಾರ್ಖಾನೆಗಳು ಸಾಕು ಎಂದರು. ಈಗಾಗಲೇ 20-30 ವರ್ಷಗಳಿಂದ ಬಂದಿರುವ ಕಾರ್ಖಾನೆಗಳು ಬಂದಿದ್ದರೂ ಅದರಿಂದ ಸ್ಥಳೀಯರಿಗೆ ಏನು ಲಾಭವಾಗಿದೆ. ಒಂದು ಸ್ಕೂಲ್ ತೆಗೆಯದಷ್ಟು ಬಡತನವಿದೆಯಾ ಅವರಿಗೆ ಎಂದರು.

ಪ್ರತ್ಯೇಕ ಕೈಗಾರಿಕಾ ನೀತಿ ಬೇಕು: ಕೊಪ್ಪಳಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿ ಮಾಡಬೇಕು. ಈಗಾಗಲೇ ಇರುವ ಕಾರ್ಖಾನೆಗಳಿಂದ ಆಗುವ ಡ್ಯಾಮೇಜ್ ಸರಿಪಡಿಸಬೇಕು ಎಂದರು.

ಬಡಿದಾಡಬೇಡಿ: ನಾನು ಬಡಿದಾಡುವುದನ್ನು ಕಲಿಸುವುದಿಲ್ಲ. ದುಡಿಯುವುದನ್ನು ಕಲಿಸುವವನು. ಹೀಗಾಗಿ, ಬಂದ್ ಮಾಡುವುದನ್ನು, ಬಸ್ಸಿಗೆ ಬೆಂಕಿ ಹಚ್ಚುವುದನ್ನು, ಪ್ರತಿಭಟನೆ ಮಾಡುವುದನ್ನು ನಾನು ಹೇಳುವುದಿಲ್ಲ. ನನಗೆ ಅದು ಇಷ್ಟ ಆಗುವುದಿಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಮನೂರು ಶಿವಶಂಕರಪ್ಪರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಿಸಬೇಕು: ರಂಭಾಪುರಿ ಶ್ರೀಗಳ ಆಗ್ರಹ
ಫಾಕ್ಸ್‌ಕಾನ್ ಸಾಧನೆ ಕದಿಯಲು ಯತ್ನ: ಕೇಂದ್ರ ಸಚಿವ ಅಶ್ವಿನ್ ವೈಷ್ಣವ್‌ಗೆ ಸಿದ್ದರಾಮಯ್ಯ ತಿರುಗೇಟು