ಇಂದಿನಿಂದ ಪೂರ್ಣಾವಧಿ ಮೆಟ್ರೋ ರೈಲು ಸಂಚಾರ

By Kannadaprabha News  |  First Published Sep 11, 2020, 7:21 AM IST

ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಮೆಟ್ರೋ ಸೇವೆ| ದಟ್ಟಣೆ ಅವಧಿಯಲ್ಲಿ 5 ನಿಮಿಷಕ್ಕೆ ಒಂದು ಟ್ರೈನ್‌| ರೈಲು ಹತ್ತುವಾಗ ಮತ್ತು ಇಳಿಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು| ರೈಲು ಪ್ರತಿ ನಿಲ್ದಾಣದಲ್ಲಿ 60 ಸೆಕೆಂಡ್‌ ಮತ್ತು ಇಂಟರ್‌ ಎಕ್ಸ್‌ಚೇಂಜ್‌ ನಿಲ್ದಾಣದಲ್ಲಿ 75 ಸೆಕೆಂಡ್‌ ಮಾತ್ರ ನಿಲುಗಡೆ| 


ಬೆಂಗಳೂರು(ಸೆ.11): ಸಂಚಾರ ಆರಂಭಿಸಿದ ನಾಲ್ಕು ದಿನಗಳ ಬಳಿಕ ನಮ್ಮ ಮೆಟ್ರೋ ರೈಲು ನೇರಳೆ ಮತ್ತು ಹಸಿರು ಎರಡು ಮಾರ್ಗದಲ್ಲೂ ಇಂದಿನಿಂದ(ಸೆ.11) ಪೂರ್ಣಾವಧಿಯ ಕಾರ್ಯಾಚರಣೆ ನಡೆಸಲಿದೆ.

ಇಂದು(ಶುಕ್ರವಾರ) ಬೆಳಗ್ಗೆ 7ಕ್ಕೆ ಬೈಯ್ಯಪ್ಪನಹಳ್ಳಿ, ಮೈಸೂರು ರಸ್ತೆ, ನಾಗಸಂದ್ರ ಮತ್ತು ಯಲಚೇನಹಳ್ಳಿ ಸೇರಿದಂತೆ ನಾಲ್ಕು ಟ್ರಮಿರ್ನಲ್‌ಗಳಿಂದಲೂ ಮೆಟ್ರೋ ರೈಲುಗಳು ಸಂಚಾರ ಪ್ರಾರಂಭಿಸಲಿದ್ದು, ರಾತ್ರಿ 9ರವರೆಗೆ ಸಂಚಾರ ಮುಕ್ತಾಯಗೊಳಿಸಲಿವೆ. ಈ ಸಂದರ್ಭದಲ್ಲಿ ದಟ್ಟಣೆ ಅವಧಿಯಲ್ಲಿ ಪ್ರತಿ 5 ನಿಮಿಷ, ಉಳಿದಂತೆ 10 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲು ಸಂಚಾರ ನಡೆಸಲಿದೆ. ಆದರೂ ಕೋವಿಡ್‌-19 ನಿಯಮದಂತೆ ಒಮ್ಮೆ ಒಂದು ರೈಲಿನಲ್ಲಿ 400 ಜನರು ಮೀರದಂತೆ ಮತ್ತು ನಿಲ್ದಾಣಗಳಲ್ಲಿ 50 ಜನಕ್ಕಿಂತ ಹೆಚ್ಚು ನಿಲ್ಲದಂತೆ ಕ್ರಮ ಮುಂದುವರಿಸಲಾಗುವುದು ಎಂದು ನಮ್ಮ ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

ಸೆ.7ರಂದು ನೇರಳೆ ಮಾರ್ಗ ಮತ್ತು ಸೆ.9ರಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭಗೊಂಡಿತ್ತು. ಈ ಅವಧಿಯಲ್ಲಿ ಎರಡು ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ತಲಾ ಮೂರು ಗಂಟೆಗಳ ಕಾಲ ಮೆಟ್ರೋ ರೈಲುಗಳು ಸಂಚಾರ ನಡೆಸಿದ್ದವು. ಗುರುವಾರ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ರೈಲುಗಳು ಸಂಚರಿಸಿದ್ದು ಅಂದಾಜು ಹದಿನೈದು ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಗಸಂದ್ರ- ಯಲಹಚೇನಹಳ್ಳಿ ನಡುವೆ ಮೆಟ್ರೋ ಕಾರ್ಯಾರಂಭ

ಕೋವಿಡ್‌ ನಿಯಮ ಮುಂದುವರಿಕೆ:

ಕೋವಿಡ್‌ ನಿಯಮಗಳಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ. ಸ್ಮಾರ್ಟ್‌ ಕಾರ್ಡ್‌ ಇದ್ದವರಿಗೆ ಮಾತ್ರ ಮೆಟ್ರೋ ನಿಲ್ದಾಣಗಳಿಗೆ ಪ್ರವೇಶಾವಕಾಶ ಮುಂದುವರೆಯಲಿದೆ. ನಿಲ್ದಾಣಗಳು ಮತ್ತು ಮೆಟ್ರೋ ರೈಲಿನಲ್ಲಿ ಎಲ್ಲರೂ ಕಡ್ಡಾಯವಾಗಿ ಎರಡು ಮೀಟರ್‌(6 ಅಡಿ) ಅಂತರ ಕಾಯ್ದುಕೊಳ್ಳಬೇಕು. 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣಗಳಲ್ಲಿ ನಿಲ್ಲಲು ಬಿಎಂಆರ್‌ಸಿಎಲ್‌ ಅನುಮತಿ ನೀಡಿಲ್ಲ. ಮುಖಗವುಸು ಮತ್ತು ಸ್ಯಾನಿಟೈಸರ್‌ ಬಳಕೆ ಕಡ್ಡಾಯ ಮಾಡಲಾಗಿದೆ.

ಪ್ರತಿ ರೈಲಿನಲ್ಲಿ ಗರಿಷ್ಠ 400 ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಹತ್ತಿದ್ದರೆ ಅವರನ್ನು ಮುಂದಿನ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ. ಜತೆಗೆ ಲಿಫ್ಟ್‌ಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಪ್ರಯಾಣಿಸಬಾರದು. 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನವರು ಅಗತ್ಯವಿದ್ದರೆ ಮಾತ್ರ ಪ್ರಯಾಣಿಸಬೇಕು. ರೈಲು ಹತ್ತುವಾಗ ಮತ್ತು ಇಳಿಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರೈಲು ಪ್ರತಿ ನಿಲ್ದಾಣದಲ್ಲಿ 60 ಸೆಕೆಂಡ್‌ ಮತ್ತು ಇಂಟರ್‌ ಎಕ್ಸ್‌ಚೇಂಜ್‌ ನಿಲ್ದಾಣದಲ್ಲಿ 75 ಸೆಕೆಂಡ್‌ ಮಾತ್ರ ನಿಲುಗಡೆಯಾಗಲಿದೆ ಎಂದು ಮೆಟ್ರೋ ನಿಗಮ ಮಾಹಿತಿ ನೀಡಿದೆ.
 

click me!