
ರಾಮದುರ್ಗ : ‘ಇಂದಿನ ಸರ್ಕಾರಗಳು ಕೊಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ಜನ ಸೋಮಾರಿಯಾಗ್ತಿದ್ದಾರೆ. ಸರ್ಕಾರಗಳು ಕೊಡುತ್ತಿರುವ ಇಂತಹ ಬಿಟ್ಟಿ ಭಾಗ್ಯ ಯೋಜನೆಗಳಿಂದ ಜನರ ಬದುಕು ಉಜ್ವಲಗೊಳ್ಳುವುದಿಲ್ಲ’ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರಸೋಮೇಶ್ವರ ಮಹಾಸ್ವಾಮಿಗಳು ಪ್ರತಿಪಾದಿಸಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿಯಲ್ಲಿ ಸೋಮವಾರ ಕಲ್ಮೇಶ್ವರ ಸ್ವಾಮಿಗಳ ಷಷ್ಠಿಪೂರ್ತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಶ್ರೀಗಳು, ಇಂದಿನ ಸರ್ಕಾರಗಳು ಕೊಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ಜನ ಸೋಮಾರಿಯಾಗ್ತಿದ್ದಾರೆ. ಇಂತಹ ಬಿಟ್ಟಿ ಭಾಗ್ಯ ಯೋಜನೆಗಳಿಂದ ಜನರ ಬದುಕು ಉಜ್ವಲಗೊಳ್ಳುವುದಿಲ್ಲ. ಜನರಲ್ಲಿ ದುಡಿಯುವ ಮನೋಭಾವ ಕಡಿಮೆಯಾಗಿ, ಸೋಮಾರಿತನ ಹೆಚ್ಚುತ್ತದೆ ಎಂದು ವಿಷಾದಿಸಿದರು.
ದೇಶದಲ್ಲಿ ರೈತ ಹಾಗೂ ಯೋಧ, ಎರಡು ಕಣ್ಣುಗಳಿದ್ದಂತೆ. ಯೋಧ ದೇಶ ಕಾಯುವ ಮೂಲಕ ನಮ್ಮನ್ನು ರಕ್ಷಣೆ ಮಾಡಿದರೆ, ರೈತರು ಕಷ್ಟಪಟ್ಟು ದುಡಿಯುವ ಮೂಲಕ ನಮಗೆ ಅನ್ನ ನೀಡುತ್ತಾರೆ. ರೈತರು ಕಷ್ಟಪಟ್ಟು ದುಡಿದರೆ ಭೂಮಿತಾಯಿ ಎಂದಿಗೂ ಅವರ ಕೈಬಿಡುವುದಿಲ್ಲ ಎಂದು ಹೇಳಿದರು.
ಶ್ರೀಗಳು ಹೇಳಿದ್ದೇನು?
- ಪುಕ್ಕಟೆ ಸ್ಕೀಂನಿಂದ ಜನರಲ್ಲಿ ದುಡಿವ ಮನೋಭಾವ ಕ್ಷೀಣ
- ಜನರಲ್ಲಿ ಸೋಮಾರಿತನ ಹೆಚ್ಚಳವು ಬೇಸರದ ವಿಷಯ- ದೇಶದಲ್ಲಿ ರೈತ ಹಾಗೂ ಯೋಧ ಎರಡು ಕಣ್ಣುಗಳಿದ್ದಂತೆ
- ಯೋಧ ದೇಶ ಕಾಯ್ದರೆ, ರೈತರು ನಮಗೆ ಅನ್ನ ನೀಡ್ತಾನೆ
- ಕಷ್ಟಪಟ್ಟು ದುಡಿದರೆ ಭೂತಾಯಿ ನಮ್ಮನ್ನೆಂದೂ ಕೈಬಿಡಲ್ಲ
- ಬೆಳಗಾವಿ ಜಿಲ್ಲೆಯಲ್ಲಿ ಬಾಳೆಹೊನ್ನೂರು ಶ್ರೀಗಳ ನುಡಿ
ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಒಂದು ಅವಕಾಶ ಸಿಗಬೇಕು
ಶ್ರಮಕ್ಕೆ ಪ್ರತಿಫಲ ಸಿಗಲೇಬೇಕು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜಯ ಸಾಧಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರಣ. ಪಕ್ಷದ ಗೆಲುವಿಗೆ ಶಿವಕುಮಾರ್ ಅವರ ಶ್ರಮವಿದೆ. ಅವರಿಗೂ ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಒಂದು ಅವಕಾಶ ಸಿಗಬೇಕು’ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ವೀರ ಸೋಮೇಶ್ವರ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಬಿಜ್ಜಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸಿದ್ದೇಶ್ವರ ಸ್ವಾಮಿ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಕೆಶಿ ಪರ ಬಹಿರಂಗವಾಗಿಯೇ ಬ್ಯಾಟಿಂಗ್ ಮಾಡಿದರು.
ಸಿಎಂ ಬದಲಾವಣೆ ಕುರಿತಂತೆ ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಬೇಕು. ಒಪ್ಪಂದ ಆಗಿರುವಂತೆ ಡಿಕೆಶಿಗೆ ಅವಕಾಶ ಮಾಡಿಕೊಡಬೇಕು. ಏನು ಒಪ್ಪಂದ ಆಗಿದೆ ಎನ್ನುವುದು ಸಿದ್ದರಾಮಯ್ಯ, ಡಿಕೆಶಿ ಹಾಗೂ ವರಿಷ್ಠರಿಗೆ ಮಾತ್ರ ತಿಳಿದಿದೆ. ಆ ಒಪ್ಪಂದದಂತೆ ನಡೆದುಕೊಂಡರೆ ಎಲ್ಲಾ ರಾಜಕಾರಣಿಗಳಿಗೂ ಗೌರವ. ಈಗಾಗಲೇ ರಾಜ್ಯದ ನಾಯಕತ್ವದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಮಾತಿನ ಚಕಮಕಿ ನಡೆಯುತ್ತಿದ್ದು, ಇದನ್ನು ರಾಷ್ಟ್ರೀಯ ನಾಯಕರು ತಿಳಿಗೊಳಿಸಿ, ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ