RCB IPL 2025 Final: ಆರ್‌ಸಿಬಿ ಗೆದ್ರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಹೋಳಿಗೆ ಊಟ ಆಫರ್!

Published : Jun 03, 2025, 11:32 AM ISTUpdated : Jun 03, 2025, 12:02 PM IST
IPL 2025 final match, rcb, rcb fans

ಸಾರಾಂಶ

ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗಾಗಿ ರಾಜ್ಯಾದ್ಯಂತ ಅಭಿಮಾನಿಗಳು ವಿಶೇಷ ಪ್ರಾರ್ಥನೆ, ಹೋಮ-ಹವನಗಳನ್ನು ನೆರವೇರಿಸಿದ್ದಾರೆ. ಗೆಲುವಿನ ಸಂಭ್ರಮಕ್ಕೆ ಉಚಿತ ಹೋಳಿಗೆ ಊಟ, ಆಟೋ ಪ್ರಯಾಣದಂತಹ ಭರವಸೆಗಳನ್ನು ಅಭಿಮಾನಿಗಳು ನೀಡಿದ್ದಾರೆ.

ಬೆಂಗಳೂರು (ಜೂ.3): 18ನೇ ಐಪಿಎಲ್ ಆವೃತ್ತಿಯ ಫೈನಲ್ ಪಂದ್ಯಕ್ಕೆ ಅಹಮದಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಪಂಜಾಬ್‌ ಮತ್ತು ಆರ್‌ಸಿಬಿ ಸೆಣಸಾಡುತ್ತಿವೆ.

ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಗೆದ್ದು ಬರಲಿ ಎಂದು ರಾಜ್ಯಾದ್ಯಂತ ಆರ್‌ಸಿಬಿ ಅಭಿಮಾನಿಗಳು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಿದ್ದಾರೆ. ಜೊತೆಗೆ ಆರ್‌ಸಿಬಿ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಹೋಳಿಗೆ ಊಟ ಹಾಕಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.

ವಿಶೇಷ ಹೋಮ:

ಮೈಸೂರು ನಗರದ ದಿವಾನ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನದಲ್ಲಿ ಆರ್‌ಸಿಬಿ ಗೆಲುವಿಗಾಗಿ ಅಭಿಮಾನಿಗಳು ವಿಶೇಷ ಹೋಮ ಮಾಡಿಸಿದ್ದಾರೆ. ಆರ್‌ಸಿಬಿ ತಂಡದ ಆಟಗಾರರಿಗೆ ದೈವಬಲ ತುಂಬಲು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಅವರ ನೇತೃತ್ವದಲ್ಲಿ ವಿಜಯದುರ್ಗಾ ಹೋಮ ನೆರವೇರಿಸಿ ಆರ್‌ಸಿಬಿ ಜರ್ಸಿ ಧರಸಿ ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಕೆ ಹರೀಶ್ ಗೌಡ ಅವರು ಸಹ ಆರ್‌ಸಿಬಿ ಜೆರ್ಸಿ ಧರಸಿ ಪೂಜೆಯಲ್ಲಿ ಭಾಗಿಯಾಗಿದ್ದರು.

ಆರ್‌ಸಿಬಿ ಗೆದ್ರೆ ಉಚಿತ ಹೋಳಿಗೆ ಊಟ:

ಆರ್‌ಸಿಬಿ ಫೈನಲ್ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಿಸುವುದಾಗಿ ಕೆ.ಆರ್. ಬ್ಯಾಂಕ್ ಅಧ್ಯಕ್ಷ ಹಾಗೂ ಅಭಿಮಾನಿ ಬಸವರಾಜ್ ಘೋಷಿಸಿದ್ದಾರೆ. ನಗರದ ಗನ್‌ಹೌಸ್ ವೃತ್ತದಲ್ಲಿ ‌ಸಾಂಕೇತಿಕವಾಗಿ ಉಚಿತ‌ ಹೋಳಿಗೆ ಊಟವನ್ನು ಸೋಮವಾರ ವಿತರಿಸಿ ಮಾತನಾಡಿದ ಅವರು, ‌ಮೈಸೂರಿನ 16 ಇಂದಿರಾ ಕ್ಯಾಂಟೀನ್‌ಗಳಗಳಲ್ಲೂ ಉಚಿತ ಹೋಳಿಗೆ ಊಟ ವ್ಯವಸ್ಥೆ ಮಾಡುವುದಾಗಿ ಹೇಳಿದರು.ಆರ್‌ಸಿಬಿಗಾಗಿ ವಿಶೇಷ ಕಾರು ಸಿದ್ಧ:

ಮೈಸೂರಿನ ಆರ್‌ಸಿಬಿ ಅಭಿಮಾನಿಗಳಾದ ದೀಪಕ್, ಶ್ರೇಯಸ್ ಮತ್ತು ಪ್ರಣೀತ್ ಎಂಬವರು ಹೆಬ್ಬಾಳು ಕೈಗಾರಿಕಾ ಪ್ರದೇಶದ ಕಾರ್‌ಮೆಡ್‌ನಲ್ಲಿ ವಿಶೇಷ ಕಾರನ್ನು ಸಿದ್ಧಪಡಿಸಿ, ಕಾರನ್ನು ಸಂಪೂರ್ಣವಾಗಿ ಆರ್‌ಸಿಬಿಮಯ ಮಾಡಿದ್ದಾರೆ. ಕಾರಿನ ಮುಂಭಾಗದಲ್ಲಿ ಕನ್ನಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು, ಒಂದು ಬದಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಇತರ ಆಟಗಾರರು ಹಾಗೂ ಅಭಿಮಾನಿಗಳ ಸ್ಟಿಕ್ಕರ್, ಮತ್ತೊಂದು ಬದಿ ಐಪಿಎಲ್ ಗೆದ್ದ ಮಹಿಳಾ ತಂಡದ ಸ್ಟಿಕ್ಕರ್ ಅಂಟಿಸಿದ್ದಾರೆ. ಜೊತೆಗೆ ತಾಯಿ ಚಾಮುಂಡೇಶ್ವರಿಗೆ ಆರ್‌ಸಿಬಿ ಪರವಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಒಂದು ದಿನ ಆಟೋದಲ್ಲಿ ಉಚಿತ ಪ್ರಯಾಣ:

ಬೆಂಗಳೂರಿನಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ಫೈನಲ್‌ನಲ್ಲಿ ಆರ್‌ಸಿಬಿ ಗೆದ್ದು ಬಂದರೆ ಒಂದು ದಿನದ ಮಟ್ಟಿಗೆ ಆರ್‌ಸಿಬಿ ಅಭಿಮಾನಿಗಳಿಗೆ ತಮ್ಮ ಆಟೋದಲ್ಲಿ ಉಚಿತ ಪ್ರಯಾಣ ನೀಡುವುದಾಗಿ ತಿಳಿಸಿದ್ದಾರೆ.

ಇನ್ನು ಹುಬ್ಬಳ್ಳಿಯೆಲ್ಲಡೆ ಆರ್‌ಸಿಬಿ ಕ್ರೀಡಾಭಿಮಾನಿಗಳಲ್ಲೂ ಫುಲ್‌ ಜೋಶ ಕಂಡು ಬರುತ್ತಿದೆ. ಈ ಬಾರಿ ಆರ್‌ಸಿಬಿ ಫೈನಲ್‌ಗೆ ತಲುಪಿರುವುದರಿಂದ 18 ವರ್ಷದ ಕನಸು ನನಸಾಗಲಿದೆಯೇ? ಎಂಬ ಚರ್ಚೆ, ಬೆಟ್ಟಿಂಗ್‌ ಕೇಳಿ ಬರುತ್ತಿದೆ. ಫೈನಲ್ ಪಂದ್ಯ ವೀಕ್ಷಣೆಗಾಗಿ ಹಾವೇರಿ ಮುನ್ಸಿಪಲ್ ಹೈಸ್ಕೂಲ್ ಮೈದಾನ, ರಾಣಿಬೆನ್ನೂರು ನಗರದ ತಾಲೂಕು ಕ್ರೀಡಾಂಗಣ, ಹಾನಗಲ್ಲ ಪಟ್ಟಣದ ಕನಕ ವೃತ್ತ ಸೇರಿದಂತೆ ಜಿಲ್ಲೆಯ ವಿವಿಧಡೆ ಬೃಹತ್ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗುತ್ತಿದೆ. ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದ ಪುನೀತ್‌ರಾಜಕುಮಾರ ದೇವಸ್ಥಾನದಲ್ಲಿ ಕ್ರೀಡಾಭಿಮಾನಿಗಳು ಸೋಮವಾರ ವಿಶೇಷ ಪೂಜೆ ಸಲ್ಲಿಸಿ, ಆರ್‌ಸಿಬಿ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.

ದಾವಣಗೆರೆಯಲ್ಲಿ ಆರ್‌ಸಿಬಿ ಗೆಲುವು ಸಾಧಿಸಲಿ ಎಂದು ಎಸ್‌ಎಸ್‌ಎನ್‌ಪಿಎಸ್ ಮತ್ತು ಬಾಪೂಜಿ ಕಾಲೇಜಿನ ವಿದ್ಯಾರ್ಥಿಗಳು ಪಿ.ಜೆ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಫೈನಲ್‌ಗೆ ಬಂದಿದೆ. ಬೆಂಗಳೂರು ತಂಡ ವಿಜಯಶಾಲಿ ಆಗಲಿದೆ. ತಂಡಕ್ಕೆ ಶುಭವಾಗಲಿ.

-ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ.

ಆರ್‌ಸಿಬಿ ಗೆಲುವಿಗೆ ಕರ್ನಾಟಕದ ಜನರು, ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅವರಿಗೆ ಫೈನಲ್‌ನಲ್ಲಿ ಯಶಸ್ಸು ಸಿಗಲಿ. ಆರ್‌ಸಿಬಿ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದ್ದು, ಗೆಲುವಿನ ಮೂಲಕ ರಾಜ್ಯಕ್ಕೆ ಬರಲಿದೆ. ಆರ್‌ಸಿಬಿ ಅಭಿಮಾನಿಗಳೆಲ್ಲರಿಗೂ ನಾಳೆ ಶುಭ ವಾರ್ತೆ ದೊರೆಯುತ್ತದೆ.

-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌