
ಗಣೇಶ ಪಾಲಿಟಿಕ್ಸ್ - ಸಿಪಿವೈ 500, ಜಯಮುತ್ತುರಿಂದ 600 ಮೂರ್ತಿ ವಿತರಣೆ
ಚನ್ನಪಟ್ಟಣ (ಆ:.26): ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ರಾಜಕೀಯ ನಾಯಕರು ಸಾರ್ವಜನಿಕರಿಗೆ ಉಚಿತವಾಗಿ ಗಣೇಶ ಮೂರ್ತಿಗಳನ್ನು ಹಂಚುವ ಕಾರ್ಯಕ್ಕೆ ಮುಂದಾಗಿದ್ದು, ಇದು ಗಣೇಶಮೂರ್ತಿ ತಯಾರಿಸಿ ಮಾರಾಟ ಮಾಡುವ ವ್ಯಾಪಾರಸ್ಥರ ಬದುಕಿನ ಮೇಲೆ ಬರೆ ಎಳೆದಿದೆ.
ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಅವರು ವೈಯಕ್ತಿಕವಾಗಿ 500ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ವಿತರಿಸಲು ಮಂದಾಗಿದ್ದು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಚ್.ಸಿ.ಜಯಮುತ್ತು ಅವರು ಚನ್ನಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ 600ಕ್ಕೂ ಹೆಚ್ಚು ಗಣೇಶ ಮೂರ್ತಿ ಹಂಚಲು ತಯಾರಿ ನಡೆಸಿದ್ದಾರೆ. ಇದು ಕಾಂಗ್ರೆಸ್-ಜೆಡಿಎಸ್ ನಡುವೆ ಜಟಾಪಟಿಗೆ ಕಾರಣವಾಗಿದೆ.
ಜಯಮುತ್ತು ಅವರು 2007ರಿಂದಲೂ ಚನ್ನಪಟ್ಟಣ ತಾಲೂಕಿನ ಜನರಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಗಳನ್ನು ವಿತರಿಸಿಕೊಂಡು ಬರುತ್ತಿದ್ದಾರೆ. ಇನ್ನು ಶಾಸಕ ಯೋಗೇಶ್ವರ್ ಕಳೆದ 3 ವರ್ಷಗಳಿಂದ ಹಬ್ಬಕ್ಕೆ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.
\Bಗಣೇಶಮೂರ್ತಿ ವ್ಯಾಪಾರಿಗಳಿಂದ ವಿರೋಧ\B
ಯೋಗೇಶ್ವರ್ ಮತ್ತು ಜಯಮುತ್ತು ಅವರು ಸಾರ್ವಜನಿಕರಿಗೆ ಉಚಿತವಾಗಿ ಗಣೇಶ ಮೂರ್ತಿ ವಿತರಿಸುವುದಕ್ಕೆ ಗಣೇಶ ಮೂರ್ತಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ಗಣೇಶ ಮೂರ್ತಿಗಳನ್ನು ಈ ರೀತಿ ತಾಲೂಕಿನ ಜನತೆಗೆ ಉಚಿತವಾಗಿ ವಿತರಿಸಿದರೆ ಯುವಕರು ಗಣೇಶಮೂರ್ತಿ ಖರೀದಿಸಲು ಬರುವುದಿಲ್ಲ. ಇದರಿಂದ ನಮ್ಮ ವ್ಯಾಪಾರದ ಮೇಲೆ ಹೊಡೆತ ಬೀಳುತ್ತಿದೆ. ನೂರಾರು ಮೂರ್ತಿಗಳನ್ನು ಖರೀದಿಸುವ ರಾಜಕಾರಣಿಗಳು ಸ್ಥಳೀಯ ತಯಾರಕರನ್ನು ಪರಿಗಣಿಸಬೇಕು ಎಂದು ಚನ್ನಪಟ್ಟಣದ ಗಣೇಶ ಮೂರ್ತಿ ವ್ಯಾಪರಸ್ಥರು ಅಳಲು ತೋಡಿದ್ದಾರೆ.
ಬೇರೆ ಬೇರೆ ರಾಜ್ಯಗಳಿಂದ ಸಾರಾಸಗಟಾಗಿ ಗಣೇಶ ಮೂರ್ತಿಗಳನ್ನು ತಂದು ಚನ್ನಪಟ್ಟಣ ತಾಲೂಕಿನಲ್ಲಿ ಉಚಿತವಾಗಿ ಹಂಚಿಕೆ ಮಾಡುತ್ತಿದ್ದು, ಲಕ್ಷಾಂತರ ರು. ಬಂಡವಾಳ ಹಾಕಿ ಗಣೇಶ ಮೂರ್ತಿ ತಯಾರಕರ ಹಾಗೂ ಮಾರಾಟ ಮಾಡುವವರ ಬದುಕಿನ ಮೇಲೆ ಬರೆ ಎಳೆದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ