
ಬೆಂಗಳೂರು : ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಬೇಡಿಕೆ ಕೊನೆಗೂ ಈಡೇರುವ ಸಾಧ್ಯತೆಯಿದೆ. ಈ ಸಂಬಂಧ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಸ್ಪಷ್ಟ ಸುಳಿವು ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸು ವಿತರಣೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ತಲಾ ಶೇ.25 ರಷ್ಟು ಅನುದಾನ ಭರಿಸಲು ಶಿಕ್ಷಣ ಇಲಾಖೆ ಹಾಗೂ ಸಾರಿಗೆ ಇಲಾಖೆ ಬದ್ಧವಾಗಿವೆ. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯಿಂದ ವಾಪಸ್ಸಾದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಮ್ಮಣ್ಣ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ದೆಹಲಿಯಿಂದ ವಾಪಸ್ಸಾದ ಬಳಿಕ ಈ ಬಗ್ಗೆ ಸಭೆ ನಡೆಸಲಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಸಾರಿಗೆ ಇಲಾಖೆ ಜತೆ ಚರ್ಚೆ ಮಾಡಿದ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಒಂದು ವಾರದಲ್ಲಿ ಉಚಿತ ಬಸ್ಸು ಪಾಸು ವಿತರಣೆ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುವುದು ತಡವಾಗಿದೆ. ಆದರೆ ಬಸ್ಸು ಪಾಸು ವಿತರಣೆ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಸಾರಿಗೆ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜತೆ ಈಗಾಗಲೇ ಚರ್ಚಿಸಿದ್ದು ಸದ್ಯದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಿದರು.
ಉಚಿತ ಬಸ್ ಪಾಸು ವಿತರಣೆಯಿಂದ19.6 ಲಕ್ಷ ವಿದ್ಯಾರ್ಥಿಗಳು ಲಾಭ ಪಡೆಯಲಿದ್ದಾರೆ. ಇದರಿಂದ ಸರ್ಕಾರಕ್ಕೆ ಎರಡು ಸಾವಿರ ಕೋಟಿ ರು. ಹೊರೆ ಉಂಟಾಗಲಿದೆ. ಇದರಲ್ಲಿ ಶೇ.25ರಷ್ಟು ಅನುದಾನವನ್ನು ಭರಿಸಲು ಶಿಕ್ಷಣ ಇಲಾಖೆ ಪರವಾಗಿ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. ಶೇ.೨೫ರಷ್ಟು ಅನುದಾನ ನೀಡಲು ನಾವು ಬದ್ಧವಾಗಿದ್ದೇವೆ. ಇನ್ನು ಶೇ.50ರಷ್ಟು ಅನುದಾನವನ್ನು ಸರ್ಕಾರ ಭರಿಸಬೇಕು. ಈ ಹಿಂದೆಯೂ ಸರ್ಕಾರವು ಶೇ.50 ರಷ್ಟು ಅನುದಾನ ಭರಿಸುತ್ತಿತ್ತು. ಹೀಗಾಗಿ ಸರ್ಕಾರ ಈಗಲೂ ಸಿದ್ಧವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ