ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹28.40 ಲಕ್ಷ ಪಡೆದು ವಂಚಿಸಿದ ಆರೋಪದಡಿ ಆರು ಮಂದಿ ವಿರುದ್ಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು (ಸೆ.30) : ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹28.40 ಲಕ್ಷ ಪಡೆದು ವಂಚಿಸಿದ ಆರೋಪದಡಿ ಆರು ಮಂದಿ ವಿರುದ್ಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊಸಪಾಳ್ಯ ನಿವಾಸಿ ಎಚ್.ಕೆ.ರಾಘವೇಂದ್ರ ಎಂಬುವವರು ನೀಡಿದ ದೂರಿನ ಮೇರೆಗೆ ದಾವಣಗೆರೆ ಮೂಲದ ಮಂಜುನಾಥ, ರಾಘವೇಂದ್ರ, ಸುನೀತಾ ಬಾಯಿ, ಗಾಯಿತ್ರಿ, ಸಚಿನ್ ಹಾಗೂ ತಿಲಕ್ ಎಂಬುಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಲಕೋಟೆ: ಪೊಲೀಸರ ಹೆಸರಲ್ಲಿ ಸ್ವಾಮೀಜಿಗೆ 1 ಕೋಟಿ ವಂಚನೆ
ಪ್ರಕರಣದ ವಿವರ: ದೂರುದಾರ ಹೊಸಪಾಳ್ಯ ನಿವಾಸಿ ಎಚ್.ಕೆ.ರಾಘವೇಂದ್ರ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾರೆ. ಮೂರು ವರ್ಷದ ಹಿಂದೆ ಕಿರಣ್ ಎಂಬ ಸ್ನೇಹಿತನ ಮುಖಾಂತರ ರಾಘವೇಂದ್ರ ಎಂಬಾತ ದೂರುದಾರರಿಗೆ ಪರಿಚಿತನಾಗಿದ್ದಾನೆ. ಈ ವೇಳೆ ತನಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದೆ. ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ. ತನ್ನ ಸಹೋದರ ಮಂಜುನಾಥ ದಾವಣಗೆರೆಯಲ್ಲಿ ಎಇಇ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ನಂಬಿಸಿದ್ದಾನೆ.
ಆರೋಪಿಗಳಿಗೆ ₹28.40 ಲಕ್ಷ ವರ್ಗ: ಅದರಂತೆ ದೂರುದಾರ 2021ರ ಫೆ.22ರಂದು ಆರೋಪಿ ರಾಘವೇಂದ್ರನ ಖಾತೆಗೆ ₹2 ಲಕ್ಷ ವರ್ಗಾಯಿಸಿದ್ದಾರೆ. ಬಳಿಕ ವಿವಿಧ ಹಂತಗಳಲ್ಲಿ ಆರೋಪಿಯ ಸಹೋದರ ಮಂಜುನಾಥ, ಇವರ ಪತ್ನಿ ಗಾಯಿತ್ರಿ, ರಾಘವೇಂದ್ರ ಪತ್ನಿ ಸುನಿತಾ ಬಾಯಿ, ಇವರ ಸ್ನೇಹಿತರಾದ ಸಚಿನ್ ಹಾಗೂ ತಿಲಕ್‌ಗೆ ನಗದು ಸೇರಿದಂತೆ ಒಟ್ಟು ₹28.40 ಲಕ್ಷ ನೀಡಿದ್ದಾರೆ. ಆದರೆ, ಆರೋಪಿಗಳು ಈವರೆಗೂ ದೂರುದಾರರಿಗೆ ಯಾವುದೇ ಸರ್ಕಾರಿ ಕೊಡಿಸಿಲ್ಲ. ಹಣದ ಬಗ್ಗೆ ಪ್ರಶ್ನೆ ಮಾಡಿದರೆ, ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬೆಂಗಳೂರು: ಆನ್‌ಲೈನ್ ಜಾಬ್ ಹೆಸರಲ್ಲಿ 6 ಕೋಟಿ ವಂಚನೆ
ಹಲವರಿಗೆ ವಂಚನೆ: ಆರೋಪಿಗಳು ತನ್ನಂತೆಯೇ ಹಲವು ಜನರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರು. ಪಡೆದು ಕೆಲಸ ಕೊಡಿಸದೆ ವಂಚಿಸಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಈ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ