ಮಾಜಿ ಶಾಸಕರೊಬ್ಬರ ಪುತ್ರನಿಂದ 1.5 ಕೋಟಿ ಪಂಗನಾಮ!

By Web DeskFirst Published Feb 14, 2019, 8:17 AM IST
Highlights

ಮಾಜಿ ಶಾಸಕರ ಪುತ್ರನೊಬ್ಬ ಉದ್ಯಮಿಯೊಬ್ಬರಿಗೆ 100 ಕೋಟಿ ಸಾಲ ಕೊಡಿಸೋದಾಗಿ ಹೇಳಿ 1.12 ಕೋಟಿ ಪಂಗನಾಮ ಹಾಕಿದ್ದು, ಶಾಸಕರ ಪುತ್ರನೂ ಸೇರಿದಂತೆ 8 ಮಂದಿಯನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು :  ನಾನೇ ಸಚಿವ ಎಂದು ಹೇಳಿಕೊಂಡು ಮಾಜಿ ಶಾಸಕರ ಪುತ್ರನೊಬ್ಬ ಉದ್ಯಮಿಯೊಬ್ಬರಿಗೆ 100 ಕೋಟಿ ಸಾಲ ಕೊಡಿಸೋದಾಗಿ ಹೇಳಿ 1.12 ಕೋಟಿ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಶಾಸಕರ ಪುತ್ರನೂ ಸೇರಿದಂತೆ 8 ಮಂದಿಯನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಧಾನಸೌಧದಲ್ಲಿರುವ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕರ ಸಂದರ್ಶಕರ ಕಚೇರಿಯಲ್ಲೇ ಸಚಿವರ ಸೋಗಿನಲ್ಲಿ 100 ಕೋಟಿ ಸಾಲ ಕೊಡಿಸುವುದಾಗಿ ಇತ್ತೀಚೆಗೆ ಡೀಲ್‌ ನಡೆದಿತ್ತು. ಆಗ ತಮಿಳುನಾಡಿನ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅವರ ಆಪ್ತ ಉದ್ಯಮಿಯೊಬ್ಬರಿಂದ ಮಾಜಿ ಶಾಸಕರ ಪುತ್ರ 1.12 ಕೋಟಿ ಲಪಟಾಯಿಸಿದ್ದ.

ಮಾಜಿ ಶಾಸಕರ ಪುತ್ರ, ಶೇಷಾದ್ರಿಪುರದ ನಿವಾಸಿ ಪಿ.ಕಾರ್ತಿಕೇಯನ್‌ ಅಲಿಯಾಸ್‌ ಕೆ.ಕೆ.ಶೆಟ್ಟಿ, ಮೊಮ್ಮಗ ಕೆ.ಸ್ವರೂಪ್‌, ಬನಶಂಕರಿಯ ಮಣಿಕಂಠ ವಾಸನ್‌ ಅಲಿಯಾಸ್‌ ಅಜಯ್‌, ತ್ಯಾಗರಾಜನಗರದ ಕೆ.ವಿ.ಸುಮನ್‌, ಆರ್‌.ಅಭಿಲಾಷ್‌ ಅಲಿಯಾಸ್‌ ರಂಜಿತ್‌, ತಮಿಳುನಾಡಿನ ಆರ್‌.ಕಾರ್ತಿಕ್‌ ಅಲಿಯಾಸ್‌ ಸೇಲ್ವಂ, ಎಂ.ಪ್ರಭು ಅಲಿಯಾಸ್‌ ರಾಮಚಂದ್ರನ್‌ ಹಾಗೂ ಗುರಪ್ಪನಪಾಳ್ಯದ ಜಾನ್‌ಮೂನ್‌ ಅಲಿಯಾಸ್‌ ಜೋಬಿನ್‌ ಬಂಧಿತರು. ತಪ್ಪಿಸಿಕೊಂಡಿರುವ ತಮಿಳುನಾಡಿನ ಇಳವರಸನ್‌ ಅಲಿಯಾಸ್‌ ಬಾಬು ಹಾಗೂ ಸುಂದರನ್‌ ಸೇರಿದಂತೆ ಇನ್ನುಳಿದವರ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.

ಈ ಆರೋಪಿಗಳ ಪೈಕಿ ಮಣಿಕಂಠನ್‌ ಅವರ ತಾಯಿ ಬ್ಯಾಂಕ್‌ ಖಾತೆಯಲ್ಲಿ 10 ಲಕ್ಷ ಮತ್ತು ಸ್ವರೂಪ್‌ ಪತ್ನಿ ಖಾತೆಯಲ್ಲಿ 30 ನಗದು ಸೇರಿದಂತೆ 40 ಲಕ್ಷ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಗೋಡಂಬಿ ವ್ಯವಹಾರಕ್ಕೆ ಉದ್ಯಮಿ ರಮೇಶ್‌ ಎಂಬುವರಿಗೆ ಸಚಿವರ ಬಳಿ ಬ್ಲಾಕ್‌ಮನಿಯಲ್ಲಿ ಕಡಿಮೆ ದರದಲ್ಲಿ 100 ಕೋಟಿ ಆರ್ಥಿಕ ನೆರವು ಕೊಡಿಸುವುದಾಗಿ ಆರೋಪಿಗಳು ನಂಬಿಸಿ ವಂಚಿಸಿದ್ದರು. ಬಳಿಕ ಮೊಬೈಲ್‌ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ವಂಚಕರನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಂಚನೆ:

ತಮಿಳುನಾಡಿನಲ್ಲಿ ದೊಡ್ಡ ಗೋಡಂಬಿ ವ್ಯಾಪಾರಿಯಾಗಿರುವ ರಮೇಶ್‌ ಅವರು, ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅವರ ಬಲಗೈ ಭಂಟರಾಗಿದ್ದಾರೆ. ಹಲವು ದಿನಗಳಿಂದ ಅವರಿಗೆ ವಿಮಾ ಏಜೆಂಟ್‌ ಇಂದಿರಾ ಎಂಬುವರ ಪರಿಚಯವಿತ್ತು. ಈ ಗೆಳೆತನದಲ್ಲಿ ಇಂದಿರಾ ಅವರಿಗೆ ರಮೇಶ್‌, ತಮ್ಮ ಉದ್ಯಮ ವಿಸ್ತರಣೆಗೆ ಸಾಲದ ಅಗತ್ಯವಿದೆ ಎಂದು ಹೇಳಿದ್ದರು. ಆಗ ಸಹಾಯ ಮಾಡುವುದಾಗಿ ಭರವಸೆ ನೀಡಿದ ಇಂದಿರಾ, ತರುವಾಯ ರಮೇಶ್‌ ಅವರಿಗೆ ತಮಿಳುನಾಡಿನ ಇರವರಸನ್‌ ಅಲಿಯಾಸ್‌ ಬಾಬು ಹಾಗೂ ಸುಂದರ ಸಂಪರ್ಕ ಕಲ್ಪಿಸಿದ್ದರು. ಈ ಬಾಬು, ತಮಿಳುನಾಡಿನಲ್ಲಿ ಉದ್ಯಮಿ ಹಾಗೂ ವ್ಯಾಪಾರಿಗಳಿಗೆ ಕರ್ನಾಟಕದಲ್ಲಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ವಂಚಿಸುವ ಜಾಲದಲ್ಲಿ ನಿರತನಾಗಿದ್ದಾನೆ.

ತನ್ನ ಸಂಪರ್ಕಕ್ಕೆ ಬಂದ ರಮೇಶ್‌ ಅವರಿಗೆ ‘ನನಗೆ ಕರ್ನಾಟಕದ ಸಚಿವರೊಬ್ಬರ ಜತೆ ಆತ್ಮೀಯ ಸ್ನೇಹವಿದೆ. ಅವರ ಬಳಿ ಬ್ಲಾಕ್‌ಮನಿ ಇದೆ. ನಿಮಗೆ ಕಡಿಮೆ ಬಡ್ಡಿಗೆ 100 ಕೋಟಿಯಷ್ಟುಕೊಡಿಸುವುದಾಗಿ ಬಾಬು ನಂಬಿಸಿದ್ದ. ಆನಂತರ ಮಾಜಿ ಶಾಸಕರ ಪುತ್ರ ಕಾರ್ತಿಕೇಯನ್‌ ಜತೆ ವಂಚನೆಗೆ ಸಂಚು ರೂಪಿಸಿದ ಬಾಬು, ರಮೇಶ್‌ ಅವರಿಗೆ ಕಾರ್ತೀಕೇಯನ್‌ನನ್ನು ಸಚಿವ ಎಂದೂ ಪರಿಚಯಿಸಿ ನಾಮ ಹಾಕಲು ನಿರ್ಧರಿಸಿದ್ದರು. ಅದರಂತೆ 2018ರ ಡಿಸೆಂಬರ್‌ 22 ರಂದು ಬೆಂಗಳೂರಿಗೆ ಕರೆತಂದು ಬಾಬು, ವಿಧಾನಸೌಧದ ವಿಧಾನಪರಿಷತ್‌ ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ಅವರ ಸಂದರ್ಶಕ ಕೊಠಡಿಯಲ್ಲಿ ಕಾರ್ತಿಕೇಯನ್‌ನನ್ನು ಸಚಿವರು ಎಂದು ಪರಿಚಯಿಸಿದ್ದ. ಈ ಸಾಲದ ಬಗ್ಗೆ ಎರಡು ಬಾರಿ ಮಾತುಕತೆ ನಡೆದು ಕೊನೆಗೆ ಜ.2ರಂದು ಒಬೆರಾಯ್‌ ಹೋಟೆಲ್‌ನಲ್ಲಿ ಅಂತಿಮ ಹಂತದ ವ್ಯವಹಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಟೆಲ್‌ನಲ್ಲಿ ಕೈಕೊಟ್ಟರು!:

ರಮೇಶ್‌ ಅವರಿಗೆ ಶೇ.1 ಬಡ್ಡಿ ದರದಲ್ಲಿ ‘ನನ್ನ ನಿಧಿಯಿಂದ 100 ಕೋಟಿ ಸಾಲ ಕೊಡುವುದಾಗಿ ಹೇಳಿದ ಕಾರ್ತಿಕೇಯನ್‌, ಇದಕ್ಕೆ ಕಮಿಷನ್‌ ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದ. ಈ ಮಾತಿಗೆ ಒಪ್ಪಿದ ಬಳಿಕ ರಮೇಶ್‌ ಅವರಿಗೆ ಕಾರ್ತಿಕೇಯನ್‌, ತನ್ನ ಮಗ ಮಣಿಕಂಠ ಹೊರಗಡೆ ಇದ್ದಾನೆ. ಆತನಿಗೆ ಹಣ ಕೊಟ್ಟು ದಾಖಲೆಗಳನ್ನು ಒಪ್ಪಿಸುವಂತೆ ಸೂಚಿಸಿದ್ದ. ಹೋಟೆಲ್‌ನಲ್ಲಿ 100 ಮೌಲ್ಯದ 5 ಸ್ಟ್ಯಾಂಪ್‌ ಪೇಪರ್‌, 50 ಮೌಲ್ಯದ 5 ಸ್ಟ್ಯಾಂಪ್‌ ಪೇಪರ್‌ ಹಾಗೂ 20 ಬೆಲೆಯ 5 ಸ್ಟ್ಯಾಂಪ್‌ ಪೇಪರ್‌ಗಳ ಮೇಲೆ ರಮೇಶ್‌ರಿಂದ ಸಹಿ ಮಾಡಿಸಿಕೊಂಡಿದ್ದರು.

ನಂತರ ಉದ್ಯಮಿಯಿಂದ 5 ಚೆಕ್‌ಗಳು ಮತ್ತು 6 ಭಾವಚಿತ್ರಗಳನ್ನು ಪಡೆದಿದ ಕಾರ್ತಿಕೇಯನ್‌, ಸಾಲ ಮಂಜೂರಾತಿಗೆ ಮುನ್ನ ಸ್ಟ್ಯಾಂಪ್‌ ಡ್ಯೂಟಿ ಶುಲ್ಕವಾಗಿ 1.12 ಕೋಟಿ ನೀಡುವಂತೆ ಸೂಚಿಸಿದ್ದ. ಅದರಂತೆ ಆ ಹೋಟೆಲ್‌ ವಾಹನ ನಿಲುಗಡೆ ಪ್ರದೇಶದಲ್ಲಿ ಆತನ ಪುತ್ರನಿಗೆ 1.12 ಕೋಟಿ ಹಸ್ತಾಂತರಿಸಿದರು. ಈ ಹಣ ಸಂದಾಯವಾದ ಬಳಿಕ ಆರೋಪಿಗಳು, ನೀವು ಇಲ್ಲೇ ಕಾಯುತ್ತಿರಿ. ನಾವು ಸಾಲದ ಹಣವನ್ನು ತಂದು ಕೊಡುತ್ತೇವೆ ಎಂದು ಹೇಳಿ ಕಾಲ್ಕಿತ್ತಿದ್ದರು.

ಎಷ್ಟುಹೊತ್ತಾದರೂ ಶೆಟ್ಟಿತಂಡ ಬಾರದೆ ಹೋದಾಗ ಅನುಮಾಗೊಂಡ ರಮೇಶ್‌, ಆರೋಪಿಗಳ ಮೊಬೈಲ್‌ಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಗ ವಂಚನೆಗೊಳಗಾಗಿರುವ ಸಂಗತಿ ಅರಿವಾಗಿ ಅವರು, ಕೊನೆಗೆ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಕೊನೆಗೆ ಪ್ರಕರಣವನ್ನು ವರ್ಗಾವಣೆ ಪಡೆದ ಕಬ್ಬನ್‌ಪಾರ್ಕ್ ಪೊಲೀಸರು ಆರೋಪಿಗಳ ಸುಳಿವು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ವಂಚನೆ ಹಣದಲ್ಲೇ ದೇಗುಲ ನಿರ್ಮಿಸಿದ!

ಈ ವಂಚನೆ ಕೃತ್ಯದ ಬಳಿಕ ಕಾರ್ತಿಕೇಯನ್‌, ತಮಿಳುನಾಡಿನ ಕರೂರಿನ ಸಮೀಪ ತನ್ನ ಹುಟ್ಟೂರು ವರವಣಲೈನಲ್ಲಿ ದೇವಾಲ ನಿರ್ಮಿಸಿದ್ದ. ಅಲ್ಲದೆ ಸಾರ್ವಜನಿಕರಿಗೆ ಬಟ್ಟೆ, ದಿನಸಿ ಹಾಗೂ ಹಣವನ್ನು ಎಗ್ಗಿಲ್ಲದೆ ಹಂಚಿ ದಾನ ಶೂರನಂತೆ ಮಿಂಚುತ್ತಿದ್ದ. ಇದೇ ಹೊತ್ತಿಗೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ವಿಧಾನಸೌಧ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಾರ್ತಿಕೇಯನ್‌ ಚಲವಲನದ ದೃಶ್ಯಗಳು ಸಿಕ್ಕಿದ್ದವು. ಬಳಿಕ ಮೊಬೈಲ್‌ ಕರೆಗಳನ್ನು ತಪಾಸಣೆ ನಡೆಸಿದಾಗ ಆತ ಕರೂರು ಸುತ್ತಮುತ್ತ ಪ್ರದೇಶದ ಸಂಪರ್ಕದಲ್ಲಿರುವ ವಿಚಾರ ತಿಳಿಯಿತು. ಕೂಡಲೇ ಪೊಲೀಸರು, ಕಾರ್ತಿಕೇಯನ್‌ ಊರಿನ ಮೇಲೆ ದಾಳಿ ನಡೆಸಿದಾಗ ತನ್ನ ತಂಡದ ಸಮೇತ ಆತ ಸಿಕ್ಕಿಬಿದ್ದ ಎಂದು ತಿಳಿದು ಬಂದಿದೆ.

10 ಸಾವಿರಕ್ಕೆ ಸರ್ಕಾರಿ ವಾಹನ!

ಕಾರ್ತಿಕೇಯನ್‌, ತಮ್ಮ ವಂಚನೆ ಗಾಳಕ್ಕೆ ಬಿದ್ದಿದ್ದ ರಮೇಶ್‌ನನ್ನು ನಂಬಿಸಲು ಥೇಟ್‌ ಸಚಿವರಂತೆ ನಟಿಸಿದ್ದಾನೆ. ಇದಕ್ಕಾಗಿ ಆತ, ಹಣ ಕೊಟ್ಟು ಸರ್ಕಾರಿ ಕಾರು ಹಾಗೂ ಕಚೇರಿಯನ್ನೇ ಬಳಸಿಕೊಂಡಿದ್ದಾನೆ. ಶಾಸಕರ ಭವನದಲ್ಲಿ ಶಾಸಕರು, ನಗರದಲ್ಲಿ ಓಡಾಡಲು ಕಡಿಮೆ ದರದಲ್ಲಿ ಕಾರುಗಳನ್ನು ವಿಧಾನಸಭೆ ಸಚಿವಾಲಯ ಒದಗಿಸುತ್ತದೆ. ಕಾರ್ತಿಕೇಯನ್‌, ರಮೇಶ್‌ನನ್ನು ಭೇಟಿ ಮಾಡುವಾಗ 10 ಸಾವಿರವನ್ನು ಕಾರು ಚಾಲಕನಿಗೆ ಕೊಟ್ಟು ಕೊಟ್ಟು ಶಾಸಕರ ಭವನದಿಂದ ವಿಧಾನಸೌಧಕ್ಕೆ ಬಂದಿದ್ದ. ಅಲ್ಲದೆ ಮೊದಲೇ ವಿಧಾನಪರಿಷತ್ತಿನ ವಿಪಕ್ಷದ ನಾಯಕರ ಕಚೇರಿ ಕೆಲಸಗಾರ ಮಳವಳ್ಳಿ ಮಹದೇವ್‌ ಎಂಬಾತನಿಗೆ 5 ಸಾವಿರ ಲಂಚ ನೀಡಿದ ಕಾರ್ತಿಕೇಯನ್‌, ಅರ್ಧ ಗಂಟೆಗೆ ವಿಪಕ್ಷ ನಾಯಕರ ಕಚೇರಿಯ ಸಂದರ್ಶಕರ ಕೊಠಡಿ ಬಳಕೆಗೆ ಒಪ್ಪಂದ ಮಾಡಿಕೊಂಡಿದ್ದ ಎಂದು ಮೂಲಗಳು ಹೇಳಿವೆ.

ನಾಲ್ಕು ಗನ್‌ಮ್ಯಾನ್‌ಗಳ ಜತೆ ಸರ್ಕಾರಿ ಕಾರಿನಲ್ಲಿ ಬಂದಿಳಿದ ಕಾರ್ತಿಕೇಯನ್‌ನನ್ನು ನೋಡಿ ರಮೇಶ್‌ ಸುಲಭವಾಗಿ ಬಲೆ ಬಿದ್ದಿದ್ದ. ಕಾರ್ತಿಕೇಯನ್‌ ತಂದೆ ಪಳನಿಯಪ್ಪನ್‌ ಅವರು 1952ರಲ್ಲಿ ಶಿವಾಜಿನಗರ ಕ್ಷೇತ್ರದ ಶಾಸಕರಾಗಿದ್ದರು. ಮಾಜಿ ಸಚಿವ ರೋಷನ್‌ ಬೇಗ್‌ ಅವರ ಬೆಂಬಲಗನಾಗಿ ಆತ ಗುರುತಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮೂರು ಪ್ರಕರಣಗಳು ಬೆಳಕಿಗೆ

ಕಡಿಮೆ ಬಡ್ಡಿಗೆ ಸಾಲ ಕೊಡಿಸುವ ನೆಪದಲ್ಲಿ ಹಲವು ಜನರಿಗೆ ಕಾರ್ತಿಕೇಯನ್‌ ತಂಡ ವಂಚಿಸಿದೆ. ಇದುವರೆಗೆ ಪ್ರತ್ಯೇಕವಾಗಿ 25, 15 ಹಾಗೂ 10 ಲಕ್ಷ ಸಾಲ ಕೊಡಿಸುವುದಾಗಿ ಮೂವರಿಗೆ ಟೋಪಿ ಹಾಕಿರುವ ಸಂಗತಿ ಗೊತ್ತಾಗಿದೆ. ಈ ಆರೋಪಿಗಳಿಂದ ಮೋಸ ಹೋದವರು ದೂರು ನೀಡಿದರೆ ಕ್ರಮ ಜರುಗಿಸುತ್ತೇವೆ ಎಂದು ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ತಿಳಿಸಿದ್ದಾರೆ.

click me!