SSLC ಎಕ್ಸಾಂ: 10 ಕಿ.ಮೀ ನಡೆದು ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು..!

By Kannadaprabha News  |  First Published Jun 26, 2020, 8:57 AM IST

ಧಾರವಾಡ ನಗರದ ಬಾಸೆಲ್‌ ಮಿಶನ್‌ ಶಾಲೆಯಲ್ಲಿ 20 ವಿದ್ಯಾರ್ಥಿಗಳನ್ನು ಹೊರಹಾಕಿದ ಸಿಬ್ಬಂದಿ| ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಎಸ್‌ಜಿಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಸಾಮಾನ್ಯ ವಿದ್ಯಾರ್ಥಿಗಳ ಜೊತೆ ಕುಳಿತಿದ್ದ ಕಂಟೈನ್ಮೆಂಟ್‌ ಜೋನ್‌ ವಿದ್ಯಾರ್ಥಿ|


ಯಾದಗಿರಿ(ಜೂ.26): ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾರಿಗೆ ಬಸ್‌ ಸೌಲಭ್ಯವಿಲ್ಲದೇ ಪರದಾಡಿದ ತಾಲೂಕಿನ ಕಂಚಗಾರ ತಾಂಡಾದ ನಾಲ್ವರು ವಿದ್ಯಾರ್ಥಿಗಳು ಗುರುವಾರ 10 ಕಿ.ಮೀ. ನಡೆದುಕೊಂಡು ಬಂದು ಪರೀಕ್ಷೆ ಬರೆದ ಘಟನೆ ನಡೆದಿದೆ. 

ನಗರದ ಚಿರಂಜೀವಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದ ಈ ವಿದ್ಯಾರ್ಥಿಗಳು, ತಮ್ಮ ಗ್ರಾಮದಿಂದ 10 ಕಿ.ಮೀ. ದೂರದ ಯರಗೋಳವರೆಗೆ ಮಾತ್ರ ಸಾರಿಗೆ ಬಸ್‌ ವ್ಯವಸ್ಥೆ ಮಾಡಿದ್ದರಿಂದ ನಿಗದಿತ ಸಮಯಕ್ಕಿಂತ ಮುನ್ನ ಕೇಂದ್ರ ತಲುಪಬೇಕಾಗಿದ್ದ ಹಿನ್ನೆಲೆಯಲ್ಲಿ ಯರಗೋಳವರೆಗೆ ನಡೆದುಕೊಂಡೆ ಬಂದು ಪರೀಕ್ಷೆ ಬರೆದಿದ್ದಾರೆ. 

Latest Videos

undefined

ಅಬ್ಬಬ್ಬಾ..! ಶಿಕ್ಷಕಿ ಮನೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿ!

20 ವಿದ್ಯಾರ್ಥಿಗಳನ್ನು ಹೊರಹಾಕಿದ ಸಿಬ್ಬಂದಿ

ಧಾರವಾಡ ನಗರದ ಬಾಸೆಲ್‌ ಮಿಶನ್‌ ಶಾಲೆಯಲ್ಲಿ ಪರೀಕ್ಷೆ ಬರೆಯಲು ಬಂದಿದ್ದ 20ಕ್ಕೂ ಹೆಚ್ಚು ಬಾಹ್ಯ ವಿದ್ಯಾರ್ಥಿಗಳು ತಮ್ಮ ಶಾಲೆಗಳ ಮುಖ್ಯ ಶಿಕ್ಷಕರ ದೃಢೀಕರಣ ಪತ್ರ ತಂದಿರಲಿಲ್ಲ. ಹೀಗಾಗಿ ಅವರನ್ನು ಕೆಲ ಹೊತ್ತು ಹೊರಹಾಕಿದ ಪ್ರಸಂಗ ನಡೆಯಿತು. ಆಗ ಶಿಕ್ಷಣ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ವಯಂ ದೃಢೀಕರಣ ಪತ್ರ ಬರೆಸಿಕೊಂಡು ಪರೀಕ್ಷೆಗೆ ಅವಕಾಶ ಕೊಡಲಾಯಿತು. ಮುಂದಿನ ಪರೀಕ್ಷೆಗೆ ದೃಢೀಕರಣ ಪತ್ರ ತಂದ ನಂತರ ಅವಕಾಶ ಮಾಡಿಕೊಂಡುವುದಾಗಿ ಅವರಿಗೆ ಎಚ್ಚರಿಕೆ ನೀಡಲಾಯಿತು.

ಸಾಮಾನ್ಯ ವಿದ್ಯಾರ್ಥಿಗಳ ಜೊತೆ ಕುಳಿತಿದ್ದ ಕಂಟೈನ್ಮೆಂಟ್‌ ಜೋನ್‌ ವಿದ್ಯಾರ್ಥಿ

ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಎಸ್‌ಜಿಎಸ್‌ಎಸ್‌ ಬಾಲಕಿಯರ ಪ್ರೌಢಶಾಲೆ ಪರೀಕ್ಷಾ ಕೇಂದ್ರದ ಕಂಟೈನ್ಮೆಂಟ್‌ ಪ್ರದೇಶದ ವಿದ್ಯಾರ್ಥಿ ಎಲ್ಲ ವಿದ್ಯಾರ್ಥಿಗಳ ಜತೆ ಪರೀಕ್ಷೆಗೆ ಕುಳಿತಿದ್ದು, ಬಳಿಕ ವಿದ್ಯಾರ್ಥಿಯನ್ನು ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಸಲಾಯಿತು.

ಕಂಟೈನ್ಮೆಂಟ್‌ ಜೋನ್‌ ವಿದ್ಯಾರ್ಥಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿತ್ತಲ್ಲದೆ, ಇದರ ಜವಾಬ್ದಾರಿಯನ್ನು ಅಧಿಕಾರಿಯೊಬ್ಬರಿಗೆ ನೀಡಲಾಗಿತ್ತು. ಆದರೆ, ವಿದ್ಯಾರ್ಥಿಯನ್ನು ಕರೆ ತಂದ ವಾಹನ ಚಾಲಕ ನಿಗದಿತ ಅವಧಿಗಿಂತ ಮೊದಲೇ ಆಗಮಿಸಿದ್ದರಿಂದ ಎಲ್ಲರ ಜತೆ ಸ್ಕ್ರೀನಿಂಗ್‌ ಮಾಡಿಸಿಕೊಂಡ ವಿದ್ಯಾರ್ಥಿ ಎಲ್ಲ ವಿದ್ಯಾರ್ಥಿಗಳ ಜೊತೆಯಲ್ಲೇ ಪರೀಕ್ಷೆಗೆ ಕುಳಿತಿದ್ದ. ಇತ್ತ ಇನ್ನೂ ವಿದ್ಯಾರ್ಥಿ ಬಂದಿಲ್ಲ ಎಂದು ಕಾಯುತ್ತ ನಿಂತಿದ್ದ ಅಧಿಕಾರಿಗೆ ಆತಂಕವಾಗಿದ್ದು, ಕೊನೆಗೆ ವಿದ್ಯಾರ್ಥಿ ಆಗಲೇ ಕೇಂದ್ರದಲ್ಲಿದ್ದಾನೆ ಎಂದು ತಿಳಿದು ಆತನನ್ನು ಪ್ರತ್ಯೇಕ ಕೋಣೆಗೆ ಕಳಿಸಿ, ಪರೀಕ್ಷೆ ಬರೆಸಲಾಯಿತು.
 

click me!