ದೇವೇಗೌಡ, ಕುಮಾರಸ್ವಾಮಿಯವ್ರ ಆರೋಗ್ಯ ಕೆಡಿಸಿದ್ದೇ ಚಲುವರಾಯಸ್ವಾಮಿ: ಮಾಜಿ ಸಚಿವ ಪುಟ್ಟರಾಜು ಕಿಡಿ

By Kannadaprabha NewsFirst Published Feb 2, 2024, 6:47 AM IST
Highlights

ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಆರೋಗ್ಯ ಕೆಡಿಸಿದವರು ಚಲುವರಾಯಸ್ವಾಮಿಯೇ ಹೊರತು ಇನ್ಯಾರೂ ಅಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇರವಾಗಿ ಆರೋಪಿಸಿದರು.

ಮಂಡ್ಯ (ಫೆ.2): ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಆರೋಗ್ಯ ಕೆಡಿಸಿದವರು ಚಲುವರಾಯಸ್ವಾಮಿಯೇ ಹೊರತು ಇನ್ಯಾರೂ ಅಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇರವಾಗಿ ಆರೋಪಿಸಿದರು.

ಧರ್ಮಸಿಂಗ್ ಅವರು ಅಧಿಕಾರದಿಂದ ಕೆಳಗಿಳಿದ ಸಮಯದಲ್ಲಿ ಬಸ್‌ನಲ್ಲಿ ಶಾಸಕರನ್ನು ತುಂಬಿಕೊಂಡು ಹೋದಾಗಲೇ ದೇವೇಗೌಡರ ಆರೋಗ್ಯ ಕೆಟ್ಟಿತು. 2018ರಲ್ಲಿ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅವರ ಆರೋಗ್ಯ ಕೆಡಿಸಿದಿರಿ. ಇದಲ್ಲದೇ, ಸಿದ್ದರಾಮಯ್ಯನವರು ದಳ ಬಿಟ್ಟು ಹೊರಹೋಗಿದ್ದೂ ನಿಮ್ಮಿಂದಲೇ. ಅದಕ್ಕೆ ನಾನೇ ಸಾಕ್ಷಿ. ನಾನು ದೇವೇಗೌಡರಿಗೆ ಚಾಡಿ ಹೇಳುತ್ತೇನೆಂದು ನನ್ನನ್ನು ಹೊಡೆಸುವುದಕ್ಕೂ ತಯಾರಿದ್ದಿರಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

ಮಂಡ್ಯ ಗಲಾಟೆ: ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ ಎತ್ತಂಗಡಿ, ಡಿಐಜಿ ಅಮಿತ್ ಸಿಂಗ್ ನೇಮಕ

ನೀವು ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ನೀವು ಹಿಂದೆ ಏನಾಗಿದ್ದಿರಿ, ಯಾರಿಂದ ರಾಜಕೀಯದಲ್ಲಿ ಬೆಳವಣಿಗೆ ಸಾಧಿಸಿದಿರಿ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಾಲಿಗೆಯನ್ನು ಬಿಗಿಹಿಡಿದು ಮಾತನಾಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿ ದೊಡ್ಡ ನಾಯಕನಾಗುತ್ತೇನೆಂದು ಭಾವಿಸಿದ್ದರೆ ಅದು ಕೇವಲ ಭ್ರಮೆಯಷ್ಟೇ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ನೀವು ಕೆರಗೋಡಿನ ಹನುಮಧ್ವಜ ಹಾರಾಟ ವಿವಾದವನ್ನು ಆರಂಭದಲ್ಲೇ ಬಗೆಹರಿಸಬಹುದಾಗಿತ್ತು. ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದಕ್ಕೆ ಏಕೆ ಬಿಟ್ಟಿರಿ. ನೀವೇ ಗ್ರಾಮಕ್ಕೆ ಹೋಗಿ ಊರಿನ ಜನರನ್ನು ಸಮಾಧಾನಪಡಿಸಬಹುದಿತ್ತು. ಆ ಕೆಲಸವನ್ನೇಕೆ ಮಾಡಲಿಲ್ಲ. ಜವಾಬ್ದಾರಿಯನ್ನು ಮರೆತು ಕುಳಿತಿದ್ದರಿಂದಲೇ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುವುದಕ್ಕೆ ನೀವೂ ಕಾರಣರಾಗಿದ್ದೀರಿ ಎಂದು ಚಲುವರಾಯಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದರು.

ಕಾಂಗ್ರೆಸ್ ಹಿಂದಿನಿಂದಲೂ ದೇಶ ಒಡೆಯುವ ಕೆಲಸ ಮಾಡುತ್ತಿದೆ: ಈಶ್ವರಪ್ಪ ವಾಗ್ದಾಳಿ

ಸ್ಥಳೀಯ ಶಾಸಕ ರವಿಕುಮಾರ್ ಗಣಿಗ ಅವರಿಗೂ ಜವಾಬ್ದಾರಿ ಇಲ್ಲ. ಹುಚ್ಚುಚ್ಚಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು. ಉದ್ಘಾಟನೆಗೆ ಆಹ್ವಾನಿಸಲಿಲ್ಲವೆಂಬ ಕಾರಣವನ್ನು ಮುಂದಿಟ್ಟುಕೊಂಡು ಗಲಭೆ ಸೃಷ್ಟಿಸಿದ್ದು ಸರಿಯಲ್ಲ. ಅಂದು ಕುಮಾರಸ್ವಾಮಿ ಅವರಿಗೂ ಆಹ್ವಾನವಿತ್ತು. ಆದರೆ, ಶ್ರೀರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಅಯೋಧ್ಯೆಗೆ ತೆರಳಿದ್ದರಿಂದ ಇಲ್ಲಿಗೆ ಬರುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸಮಜಾಯಿಷಿ ನೀಡಿದರು.

ಅಂದು ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಬರುತ್ತಿರಲಿಲ್ಲ. ಲಾಠಿಪ್ರಹಾರ ನಡೆಸಿ ಪೊಲೀಸರು ಅಮಾಯಕ ಜನರ ಮೇಲೆ ದೌರ್ಜನ್ಯ ನಡೆಸಿರುವ ವಿಷಯ ತಿಳಿದು ಒಂದು ಗಂಟೆಯಲ್ಲಿ ಮಂಡ್ಯಕ್ಕೆ ಬಂದರು ಎಂದರು.

click me!