ವಾಲ್ಮೀಕಿ ಹಣ ವರ್ಗಾವಣೆ ಹಗರಣ: ಸಚಿವ ನಾಗೇಂದ್ರ ರಾಜೀನಾಮೆಗೆ ಕಾರಜೋಳ ಆಗ್ರಹ

By Kannadaprabha News  |  First Published May 30, 2024, 10:22 AM IST

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತವಾಗಿ ತನಿಖೆಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.


ಬೆಂಗಳೂರು(ಮೇ.30):  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತವಾಗಿ ತನಿಖೆಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಬುಧವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ವಿಚಾರದಲ್ಲಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಇಡೀ ಪ್ರಕರಣವನ್ನು ಖಂಡಿಸಿ ಬಿಜೆಪಿ ಉಗ್ರ ಹೋರಾಟ ನಡೆಸಲಿದ್ದು, ಪ್ರತಿಪಕ್ಷ ನಾಯಕರು, ಪಕ್ಷದ ರಾಜ್ಯಾಧ್ಯಕ್ಷರು ಹೋರಾಟದ ರೂಪುರೇಷೆ ರೂಪಿಸಲಿದ್ದಾರೆ ಎಂದರು.

Latest Videos

undefined

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 80-85 ಕೋಟಿ ಲೂಟಿ ಆರೋಪ: ಅವ್ಯವಹಾರಕ್ಕೆ ಬೆದರಿ ಅಧಿಕಾರಿ ಆತ್ಮಹತ್ಯೆ!

ಸರ್ಕಾರದ ತನಿಖಾ ಸಂಸ್ಥೆಗಳಿಂದ ಸಮಗ್ರ, ನಿಷ್ಪಕ್ಷಪಾತ ತನಿಖೆ ಮಾಡಲು ಅಸಾಧ್ಯ. ಆದ್ದರಿಂದ ಕೇಂದ್ರ ಸರ್ಕಾರದ ಏಜೆನ್ಸಿಗಳ ಮೂಲಕ ತನಿಖೆ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಸಚಿವರ ಮೌಖಿಕ ಆದೇಶದನ್ವಯ ಹಣ ವರ್ಗಾವಣೆ ಮಾಡಿದ್ದಾಗಿ ಡೆತ್‌ನೋಟ್‌ ಬರೆದಿದ್ದಾರೆ. ಆದರೂ, ಎಫ್ಐಆರ್‌ನಲ್ಲಿ ಸಚಿವರ ಹೆಸರು ಯಾಕೆ ಬಂದಿಲ್ಲ? ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಕಿಡಿಕಾರಿದರು.

ಬ್ಯಾಂಕ್ ಖಾತೆಯು ವ್ಯವಸ್ಥಾಪಕ ನಿರ್ದೇಶಕರ ಮತ್ತು ಲೆಕ್ಕಾಧಿಕಾರಿಯ ಜಂಟಿ ಖಾತೆಯಾಗಿರುತ್ತದೆ. ಮಾರ್ಚ್‌ನಲ್ಲಿ ಹಣ ವರ್ಗಾವಣೆಯಾಗಿದೆ. ಮಾ. 4ರಂದು 25 ಕೋಟಿ ರು., 6ರಂದು 25 ಕೋಟಿ ಕೋಟಿ ರು. ಮತ್ತು 21ರಂದು 44 ಕೋಟಿ ಕೋಟಿ ರು. ವರ್ಗಾವಣೆ ಆಗಿದೆ. ಜಂಟಿ ಖಾತೆ ಇದ್ದಾಗ ಹೇಗೆ ವರ್ಗಾವಣೆಯಾಗಿದೆ? ಸರ್ಕಾರವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸತ್ಯವನ್ನು ಮುಚ್ಚಿಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಖಜಾನೆಯನ್ನೇ ಲೂಟಿ ಮಾಡಿದ ದೊಡ್ಡ ಹಗರಣ ಇದಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದು ಹಗಲುದರೋಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರೆಗಳ ವಿವರ ತನಿಖೆ ಅಗತ್ಯ: 

ಮಾಜಿ ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕ ಚಂದ್ರಶೇಖರನ್‌ ಆತಹತ್ಯೆ ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಅಧಿಕಾರಿಗಳ ದೂರವಾಣಿ ಕರೆಗಳ ವಿವರವನ್ನು ತನಿಖೆಗೆ ಒಳಪಡಿಸಬೇಕು. ಮೃತ ಚಂದ್ರಶೇಖರ್‌ ಬರೆದಿರುವ ಡೆತ್‌ನೋಟ್‌ನಲ್ಲಿ ಕೆಲವು ಆಘಾತಕಾರಿ ಅಂಶಗಳು ಹೊರಬಿದ್ದಿವೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೂ ಬಾರದೆ 87 ಕೋಟಿ ರು. ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಪಾತ್ರದ ಬಗ್ಗೆ ಅವರ ದೂರವಾಣಿ ಕರೆಗಳ ವಿವರಗಳನ್ನು ತನಿಖೆ ನಡೆಸಿದಾಗ ಮಾತ್ರ ಸತ್ಯಾಂಶ ಹೊರಬರುತ್ತದೆ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರ ಎಸ್‌ಸಿ, ಎಸ್‌ಟಿಗೆ ಸೇರಿದ 11,000 ಕೋಟಿ ರೂ. ಹಣ ಗ್ಯಾರಂಟಿಗಳಿಗೆ ಬಳಸಿಕೊಂಡಿದೆ; ಆರ್. ಅಶೋಕ್

ಪ್ರಕರಣದ ಕುರಿತಂತೆ ಸರ್ಕಾರ ಎಫ್‌ಐಆರ್‌ ದಾಖಲಿಸುವ ಮುನ್ನವೇ ಸಿಐಡಿ ತನಿಖೆಗೆ ಆದೇಶಿಸಿದೆ. ಇದು ಸರ್ಕಾರದ ಮೂಗಿನಡಿಯೇ ನಡೆಯುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ. ಯಾವುದೇ ಒಂದು ಖಾತೆಯನ್ನು ತೆರೆಯಬೇಕಾದರೆ ಹಣಕಾಸು ಇಲಾಖೆಯ ಅನುಮತಿ ಇರಬೇಕು. ಇಲ್ಲಿ ಅವಕಾಶವನ್ನೇ ಕೊಡದಿದ್ದಾಗ ಹೇಗೆ ಖಾತೆಯನ್ನು ತೆರೆಯಲಾಯಿತು? ಅಷ್ಟು ದೊಡ್ಡ ಮೊತ್ತದ ಹಣ ವ್ಯವಸ್ಥಾಪಕ ನಿರ್ದೇಶಕರಿಗೆ ಗೊತ್ತಿಲ್ಲದಂತೆ ವರ್ಗಾವಣೆಯಾಗಿದೆ ಎಂದರೆ ಸಚಿವ ನಾಗೇಂದ್ರ ಅವರ ಗಮನಕ್ಕೆ ಹೋಗಿಲ್ಲವೇ? ಇಲಾಖೆಯಲ್ಲಿ ನಡೆಯುವ ವ್ಯವಹಾರಗಳು ಅವರಿಗೆ ಗೊತ್ತಿಲ್ಲವೆಂದರೆ ಇನ್ನು ಹೇಗೆ ನಿರ್ವಹಣೆ ಮಾಡುತ್ತಾರೆ? ಎಂದು ತರಾಟೆಗೆ ತೆಗೆದುಕೊಂಡರು.

ಸಚಿವ ನಾಗೇಂದ್ರ ಅವರು ದಲಿತರಿಗೆ ಮೋಸ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತೀ ಇಲಾಖೆಯಲ್ಲೂ ಕಮಿಷನ್‌ ಕೊಡದೇ ಯಾವ ಕೆಲಸಗಳೂ ನಡೆಯುತ್ತಿಲ್ಲ. ಎಲ್ಲರೂ ವಸೂಲಿಗೆ ಇಳಿದಿದ್ದಾರೆ. ಈ ಎಲ್ಲಾ ವಿಚಾರ ಗೊತ್ತಿದ್ದರೂ ಮುಖ್ಯಮಂತ್ರಿ ಅಸಹಾಯಕ ಸ್ಥಿತಿಗೆ ಬಂದಿದ್ದಾರೆ ಎಂದು ಟೀಕಿಸಿದರು.

click me!