
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಫೆ.07): ರಾಜ್ಯ ರಾಜಕಾರಣದಲ್ಲಿ ಉಂಟಾಗುತ್ತಿರೋ ರಾಜಕೀಯ ಬೆಳವಣಿಗೆ ಮಧ್ಯೆ ನಾಳೆ ರಾಜ್ಯದ ದೊರೆ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡನೆಗೆ ಮುಂದ್ದಾಗಿದ್ದಾರೆ.
ಇತ್ತ ಸಿಎಂ ಬಜೆಟ್ ಮೇಲೆ ಇದೀಗ ಬಾಗಲಕೋಟೆ ಜಿಲ್ಲೆಯ ಜನರ ಕಾತುರ ಹೆಚ್ಚಾಗಿದೆ. ಅಭಿವೃದ್ಧಿಗಾಗಿ ಪತ್ರ ಸಮರ ಸಾರಿದ್ದ ಸಿದ್ದರಾಮಯ್ಯ ಇದೀಗ ಬಜೆಟ್‌ಗೂ ಮುನ್ನ ಸ್ವಕ್ಷೇತ್ರದ ಜಿಲ್ಲೆಯ ಅಭಿವೃದ್ಧಿಗಾಗಿ ನಾಲ್ಕು ಪತ್ರಗಳನ್ನ ಸಿಎಂಗೆ ಬರೆದಿದ್ದು, ಆ ಪತ್ರಗಳಿಗೆ ನಾಳೆಯ ಬಜೆಟ್‌ನಲ್ಲಿ ಉತ್ತರ ಸಿಗುತ್ತಾ ಅಂತ ಜಿಲ್ಲೆಯ ಜನರು ಜಾತಕಪಕ್ಷಿಯಂತೆ ಕಾಯುವಂತಾಗಿದೆ.
ಬಜೆಟ್‌ನಲ್ಲಿ ಸಿದ್ದರಾಮಯ್ಯ ಆಯ್ಕೆಯಾದ ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆಗೆ ಹರಿದು ಬರುತ್ತಾ ಅನುದಾನ?, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದು ಪತ್ರಕ್ಕೆ ಮಾನ್ಯತೆ ಸಿಗುತ್ತೆ ಅಂತ ಜಾತಕಪಕ್ಷಿಯಂತೆ ಕಾಯ್ದು ಕುಳಿತಿರೋ ಜನ. ಹೌದು. ಇಂತಹವೊಂದು ಪರಿಸ್ಥಿತಿ ಇದೀಗ ಬಾಗಲಕೋಟೆ ಜಿಲ್ಲೆಯ ಜನರ ಪಾಲಿಗೆ ಮೂಡಿದೆ.
ಜಿಲ್ಲೆಯ ಬಾದಾಮಿಯಿಂದ ಆಯ್ಕೆಯಾಗಿರೋ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ತರಲು ಮುಂದಾಗಿದ್ದಾರೆ. ಬಜೆಟ್‌ಗೂ ಮುನ್ನ ನಾಲ್ಕು ಪತ್ರಗಳನ್ನು ನೇರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬರೆಯುವುದರ ಮೂಲಕ ಪ್ರವಾಸೋದ್ಯಮ, ಕಾಲೇಜುಗಳ ಸ್ಥಾಪನೆ, ಜವಳಿ ಪಾರ್ಕ ನಿರ್ಮಾಣ, ಸಣ್ಣ ನೀರಾವರಿ ಇಲಾಖೆ ಮೂಲಕ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಸೇರಿದಂತೆ ಅನೇಕ ವಿಷಯಗಳ ಕುರಿತು ಪತ್ರ ಬರೆದು ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಬಿಡುಗಡೆಗೆ ಕೋರಿದ್ದಾರೆ.
ಇನ್ನು ಸಮ್ಮಿಶ್ರ ಸರ್ಕಾರದಲ್ಲಿ ಕೇವಲ ಮಂಡ್ಯ, ಮೈಸೂರು, ಬೆಂಗಳೂರು ಭಾಗಗಳಿಗೆ ಮಾತ್ರ ಬಜೆಟ್‌ನಲ್ಲಿ ಅನುದಾನ ಸಿಗಬಾರದು ಅನ್ನೋದು ಜಿಲ್ಲೆಯ ಜನರ ವಾದ. ಈ ಮಧ್ಯೆ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾಗಿರೋ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣವಿಟ್ಟು ಆಲಮಟ್ಟಿ ಹಿನ್ನೀರು ವ್ಯಾಪ್ತಿಯ ಹಳ್ಳಿಗಳ ಸಂತ್ರಸ್ಥರಿಗೆ ಸೂಕ್ತ ಪುನರ್ವಸತಿ ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ.
ಈ ಮಧ್ಯೆ ಕುಮಾರಸ್ವಾಮಿ ಇದರ ಬಗ್ಗೆ ಕಾಳಜಿ ಹೊಂದದೆ ಕೇಂದ್ರದತ್ತ ಬೊಟ್ಟು ಮಾಡಿ ಈ ಯೋಜನೆಯನ್ನ ರಾಷ್ಟ್ರೀಯ ಸಮಸ್ಯೆ ಅಂತ ಘೋಷಿಸಬೇಕೆಂದು ಪ್ರಧಾನಿಗಳಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ ಹಾಗೆ ನಡೆದುಕೊಳ್ಳದೇ ಮುಖ್ಯಮಂತ್ರಿಗಳು ಮುತವರ್ಜಿ ವಹಿಸಿ ಕೃಷ್ಣಾ ಮೇಲ್ದಂಡೆ ಯೋಜನೆಗೂ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ಬಿಡುಗಡೆಗೊಳಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ಸಿದ್ದರಾಮಯ್ಯ ಬರೆಯೋ ಪತ್ರಗಳು ಕೇವಲ ರಾಜಕೀಯಕ್ಕೆ ಆಗಬಾರದು ಅದು ಜಾರಿಗೊಳ್ಳುವಂತಾಗಬೇಕೆನ್ನುತ್ತಾರೆ ಜಿಲ್ಲೆಯ ಜನ.
ಒಟ್ಟಿನಲ್ಲಿ ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸೋ ಬಜೆಟ್ ಮೇಲೆ ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆಯ ಜನ್ರ ಕುತೂಹಲ ಹೆಚ್ಚಿದ್ದು, ಇಷ್ಟಕ್ಕೂ ಬಜೆಟ್‌ನಲ್ಲಿ ಸಿದ್ದರಾಮಯ್ಯ ಪತ್ರಗಳಿಗೆ ಬೆಲೆ ಸಿಗುತ್ತಾ ಅಥವಾ ಸಿಎಂ ತಮ್ಮ ಹಠ ಸಾಧಿಸಿ ತಮ್ಮ ಸ್ವಕ್ಷೇತ್ರಗಳಿಗೆ ಮಾತ್ರ ಬಂಪರ್ ಆಫರ್ ನೀಡ್ತಾರಾ ಅಂತ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ