
ಬೆಂಗಳೂರು(ಸೆ.01): ಅರ್ಹರಿಗೆ ಮೀಸಲಾತಿ ದೊರೆಯಬೇಕು ಎಂದರೆ ಪ್ರತಿ 10 ವರ್ಷಕ್ಕೊಮ್ಮೆ ಜಾತಿ ಗಣತಿ ನಡೆಸಬೇಕು. ಆದರೆ, ಈ ಸರ್ಕಾರ ಸಿದ್ಧರೂಪದಲ್ಲಿರುವ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು ಅಂಗೀಕರಿಸಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಜಾತಿ ಗಣತಿ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
1931ರಲ್ಲಿ ಬ್ರಿಟಿಷ್ ಸರ್ಕಾರ ಜಾತಿಗಣತಿ ನಡೆಸಿತ್ತು. ತೊಂಬತ್ತು ವರ್ಷಗಳ ಹಿಂದಿನ ಜಾತಿ ಜನಗಣತಿ ವರದಿ ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದರಿಂದ ಅರ್ಹರಿಗೆ ಮೀಸಲಾತಿ ದೊರೆಯಲು ಹೇಗೆ ಸಾಧ್ಯ? ಸ್ವಾತಂತ್ರ್ಯಾ ನಂತರ ಎಲ್ಲಾ ಜಾತಿ, ವರ್ಗಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಅವಕಾಶಗಳು, ಮೀಸಲಾತಿ ಸಿಗುತ್ತಿಲ್ಲ. ಇದನ್ನು ಸರಿಪಡಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 180 ಕೋಟಿ ರು. ಖರ್ಚು ಮಾಡಿಸಿ ಜಾತಿ ಜನಗಣತಿ ಮಾಡಿಸಿದ್ದೇನೆ. ಈ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಜಾತಿ ಗಣತಿ: ಯಾರೂ ಬೇಕಾದ್ರೂ ಪ್ರಧಾನಿ ಭೇಟಿ ಆಗಲಿ ಎಂದ ಸಿಎಂ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಪ್ರಧಾನಿ ಮೋದಿ ಅವರ ಬಳಿಗೆ ನಿಯೋಗ ಕರೆದೊಯ್ದು ಜಾತಿ ಜನಗಣತಿ ಬೇಡಿಕೆ ಮುಂದಿಟ್ಟಿದ್ದಾರೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯುವ ರೀತಿಯಲ್ಲೇ ಜಾತಿ ಗಣತಿ ನಡೆದರೆ ಒಳ್ಳೆಯದು. ನಮ್ಮ ಸರ್ಕಾರದ ಅವಧಿಯಲ್ಲಿ ನಡೆಸಿದ ರಾಜ್ಯದ ಜಾತಿ ಜನಗಣತಿ ವರದಿ ಸರಿಯಾಗಿದೆ. ಹಾಗಾಗಿ ಅದನ್ನು ಅನುಷ್ಠಾನಗೊಳಿಸಲು ಒತ್ತಾಯಿಸುತ್ತಿದ್ದೇನೆ. ಈ ಸಂಬಂಧ ಮುಂದಿನ ಅಧಿವೇಶನದಲ್ಲೂ ಹೋರಾಟ ನಡೆಸುತ್ತೇನೆ ಎಂದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2ಎ ಸೇರಿದಂತೆ ಯಾವುದೇ ಪ್ರವರ್ಗಕ್ಕೆ ಯಾವ ಜಾತಿ ಸೇರಿಸಬೇಕು, ಯಾವುದನ್ನು ಸೇರಿಸಬಾರದು ಎಂಬುದನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮಾತ್ರ ಮಾಡಬೇಕು. ಈ ಆಯೋಗ ಇರುವಾಗ ಸುಭಾಷ್ ಆಡಿ ನೇತೃತ್ವದ ಸಮಿತಿ ಸೇರಿದಂತೆ ಬೇರೆ ಯಾವುದೇ ಸಮಿತಿಗಳಿಗೆ ಮಹತ್ವ ಇರುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ