ಗೋಹತ್ಯೆ ನಿಷೇಧ ಷರತ್ತುಗಳ ಬಗ್ಗೆ ಕುಮಾರಸ್ವಾಮಿ ಆತಂಕ

By Kannadaprabha NewsFirst Published Dec 11, 2020, 11:19 AM IST
Highlights

ರೈತನಿಗೆ ಹೊರೆಯಾಗುವ ಜಾನುವಾರು ರಕ್ಷಣೆ ಸರ್ಕಾರವೇ ಮಾಡಲಿ| ಕಾಯ್ದೆಯಲ್ಲಿನ ಸಮಸ್ಯೆ ಬಗೆಹರಿಸದಿದ್ದರೆ ಹೈನುಗಾರಿಕೆಗೆ ಹೊಡೆತ| ರೈತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಸಾಕಷ್ಟು ಸನ್ನಿವೇಶಗಳನ್ನೂ ಬಲವಂತವಾಗಿ ಸೃಷ್ಟಿ: ಎಚ್‌.ಡಿ. ಕುಮಾರಸ್ವಾಮಿ| 

ಬೆಂಗಳೂರು(ಡಿ.11): ಗೋವುಗಳಷ್ಟೇ ರೈತನೂ ನಮಗೆ ಪೂಜನೀಯನಾಗಿದ್ದು, ರೈತನಿಗೆ ಹೊರೆಯಾಗುವ ಜಾನುವಾರುಗಳ ರಕ್ಷಣೆಯನ್ನೂ ಸರ್ಕಾರವೇ ಮಾಡಬೇಕು. ಅಲ್ಲದೇ, ಗೋಹತ್ಯಾ ನಿಷೇಧ ಕಾಯ್ದೆಯಲ್ಲಿನ ಕೆಲವು ಅಂಶಗಳಿಂದ ಹೈನುಗಾರಿಕೆಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಗೋಹತ್ಯಾ ನಿಷೇಧ ಕಾಯ್ದೆಯಲ್ಲಿನ ಅಂಶಗಳ ಬಗ್ಗೆ ಹಲವಾರು ಆತಂಕ, ರೈತರು ಎದುರಿಸಬೇಕಾದ ಹಲವು ಸಮಸ್ಯೆಗಳನ್ನು ವಿಶ್ಲೇಷಿಸಿ, ಇದಕ್ಕೆ ಸೂಕ್ತ ಪರಿಹಾರ, ಮಾಗೋರ್‍ಪಾಯಗಳನ್ನು ಸೂಚಿಸದಿದ್ದರೆ ರೈತನಿಗೆ ಸಂಕಷ್ಟ ಎದುರಾಗಲಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ರೈತ ತಾನು ಪೂಜಿಸಿ ಪೋಷಿಸುವ ಮತ್ತು ಜೀವನಾಧಾರವನ್ನಾಗಿ ನಂಬಿರುವ ಗೋವು ಸರ್ಕಾರ ಜಾರಿಗೊಳಿಸಿರುವ ಕಾಯ್ದೆಯಿಂದಾಗಿ ಸಮಸ್ಯೆಯಾಗಬಾರದು. ತಾನು ಸಾಕಿದ ಹಸು ಗಂಡು ಕರು ಹಾಕಿದಾಗ, ಹಸುವಿಗೆ ವಯಸ್ಸಾದಾಗ, ಕಾಯಿಗೆ ಬಿದ್ದಾಗ ಅದರ ನಿರ್ವಹಣೆ ಕಷ್ಟ. ಈಗಾಗಲೇ ಸಂಕಷ್ಟದಲ್ಲಿರುವ ರೈತನಿಗೆ ಈ ಹೊರೆ ಜೀವನ್ಮರಣದ ಪ್ರಶ್ನೆಯಾಗಲೂಬಹುದು ಎಂಬುದನ್ನು ಸರ್ಕಾರ ಮರೆತಂತಿದೆ ಎಂದು ಅವರು ಟ್ವೀಟರ್‌ನಲ್ಲಿ ಹೇಳಿದ್ದಾರೆ.

ಅಧಿಕಾರಕ್ಕೆ ಬಂದ್ರೆ ಮೂರೂ ಕಾಯ್ದೆ ವಾಪಸ್‌: ಸಿದ್ದರಾಮಯ್ಯ

ಸದ್ಯ ಸರ್ಕಾರ ತಂದಿರುವ ಕಾಯ್ದೆಯು ರೈತರು ಗಂಡು ಕರುಗಳನ್ನು, ವಯಸ್ಸಾದ ರಾಸುಗಳನ್ನು, ರೋಗಕ್ಕೀಡಾದ ಹಸುಗಳನ್ನು ಪೋಷಿಸಲೇಬೇಕಾದ ಷರತ್ತಿಗೆ ದೂಡುತ್ತದೆ. ಪ್ರಾಯೋಗಿಕವಲ್ಲದ ಷರತ್ತುಗಳ ಮೂಲಕ ಸರ್ಕಾರ ರೈತರ ಮೇಲೆ ಹೆಚ್ಚಿನ ಒತ್ತಡ ಹೇರಲು ಪ್ರಯತ್ನಿಸಿದರೆ, ರೈತರು ಹೈನುಗಾರಿಕೆಯಿಂದ ದೂರ ಸರಿಯಬಹುದು. ಆಗ ಹಾಲು ಉತ್ಪಾದನೆಗೆ ಹೊಡೆತ ಬೀಳಲಿದೆ. ಜಾನುವಾರುಗಳನ್ನು ಸೂಕ್ತ ಪ್ರಾಧಿಕಾರದ ಪರವಾನಗಿ ಪಡೆದು ವಧೆ ಮಾಡಬಹುದು. ಇದಕ್ಕೆ ಪಶು ವೈದ್ಯಾಧಿಕಾರಿಯ ಪ್ರಮಾಣ ಪತ್ರ ಬೇಕು ಎಂದು ಹೇಳಲಾಗಿದೆ. ಪ್ರಮಾಣ ಪತ್ರ, ಅನುಮತಿ ಪಡೆಯುವ ಪ್ರಕ್ರಿಯೆ ದಂಧೆಯ ರೂಪ ತಾಳದೇ ರೈತರ ಶೋಷಣೆ ನಡೆಯುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಜಾನುವಾರುಗಳನ್ನು ಸಾಗಿಸಲು ಪಶುಸಂಗೋಪನಾ ಇಲಾಖೆಯ ಅನುಮತಿ ಪಡೆಯಬೇಕು ಎಂಬುದು ಮುಂದೊಂದು ದಿನ ಲೈಸನ್ಸ್‌ ರಾಜ್‌ ಪದ್ಧತಿಗೆ ಕಾರಣವಾಗಬಹುದು, ಅಧಿಕಾರಿಗಳು ಇದರಲ್ಲಿ ಭ್ರಷ್ಟಾಚಾರ ನಡೆಸದೇ ಇರಲಾರರು ಎಂದು ಹೇಳಲು ಸಾಧ್ಯವೇ? ರೈತ ತಾನು ಮಾರಾಟ ಮಾಡಿದ ಜಾನುವಾರು ವಧಾಸ್ಥಳಕ್ಕೆ ಹೋಗುತ್ತದೆ ಎಂಬುದನ್ನು ಅಂದಾಜಿಸಲು ಹೇಗೆ ಸಾಧ್ಯ? ಈ ನಿಯಮಗಳು ರೈತ ಸರ್ಕಾರ ಕಚೇರಿಗಳಿಗೆ ಅಲೆಯುವಂತೆ ಮಾಡುವುದರಲ್ಲಿ ಅನುಮಾನ ಇಲ್ಲ. ಕೊನೆಗೆ ಇದು ಹೈನುಗಾರಿಕೆಗೆ ಪೆಟ್ಟು ಕೊಡುತ್ತದೆ ಎಂದಿದ್ದಾರೆ.

ಪೊಲೀಸರು, ಅಧಿಕಾರಿಗಳಿಗೆ ರೈತರ ಡೈರಿ ಪರಿಶೀಲನೆಯ ಅವಕಾಶ ನೀಡಲಾಗಿದೆ. ಇದರಿಂದ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುವ ಸಾಧ್ಯತೆಗಳಿವೆ. ರೈತರಲ್ಲಿ ಭಯದ ವಾತಾವರಣವೂ ಮೂಡುತ್ತದೆ. ಈ ನಿಯಮವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಇದು ಹಳ್ಳಿಗಳ ಸೌಹಾರ್ದ ವಾತಾವರಣವನ್ನೇ ಹಾಳು ಮಾಡಬಹುದಲ್ಲವೇ? ರೈತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಸಾಕಷ್ಟು ಸನ್ನಿವೇಶಗಳನ್ನೂ ಬಲವಂತವಾಗಿ ಸೃಷ್ಟಿಮಾಡುತ್ತಿದೆ ಎಂಬುದನ್ನು ಸರ್ಕಾರ ಗಮನಿಸಲೇಬೇಕು ಎಂದು ಎಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
 

click me!