ಒಂದು ತಿಂಗಳಿನಲ್ಲಿ ಬರೋಬ್ಬರಿ 7 ಜಾನುವಾರುಗಳನ್ನು ಹುಲಿ ಕೊಂದು ತಿಂದಿದೆ. ಹೀಗಾಗಿ ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಮತ್ತು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿರುವ ಹುಲಿಗಳ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು : ಕೊಡಗು ಜಿಲ್ಲೆಯಲ್ಲಿ ವನ್ಯ ಜೀವಿ ಹಾಗೂ ಮಾನವ ಸಂಘರ್ಷ ಬಹಳ ಹಿಂದಿನಿಂದಲೂ ತಪ್ಪಿದ್ದಲ್ಲ. ಅದರಲ್ಲೂ ಕಳೆದ ಕೆಲವು ವರ್ಷಗಳ ಈಚೆಗಂತು ಅದು ಮತ್ತಷ್ಟು ಮಿತಿ ಮೀರಿದೆ. ಒಂದೆಡೆ ಮಾನವ ಹಾಗೂ ಮಾನವನ ಆಸ್ತಿಪಾಸ್ತಿಗಳ ಮೇಲೆ ಆನೆಗಳ ದಾಳಿ ನಡೆದರೆ ಇದೀಗ ಜನ, ಜಾನುವಾರಗಳ ಮೇಲೆ ಹುಲಿಗಳ ದಾಳಿ ಮಿತಿ ಮೀರಿದೆ. ಕೇವಲ ಒಂದೇ ಒಂದು ತಿಂಗಳಿನಲ್ಲಿ ಬರೋಬ್ಬರಿ 7 ಜಾನುವಾರುಗಳನ್ನು ಹುಲಿ ಕೊಂದು ತಿಂದಿದೆ. ಹೀಗಾಗಿ ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಮತ್ತು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿರುವ ಹುಲಿಗಳ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.
undefined
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ, ಆನೆ ಚೌಕೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಮತ್ತಿಗೋಡು ಸಾಕಾನೆ ಶಿಬಿರದ ಆನೆಗಳಾದ ಮೃಗಾಲಯ ಅಭಿಮನ್ಯು, ಅಶೋಕ ಎರಡು ಸಾಕಾನೆಗಳನ್ನು ಬಳಸಿಕೊಂಡು ಅರಣ್ಯ ಇಲಾಖೆಯ 25 ಕ್ಕೂ ಹೆಚ್ಚು ಸಿಬ್ಬಂದಿ ಎರಡು ದಿನಗಳಿಂದ ಹುಲಿಗಾಗಿ ನಿರಂತರ ಹುಡುಕಾಟ ನಡೆಸುತ್ತಿದ್ದಾರೆ.
ಕಳೆದ ಒಂದೇ ತಿಂಗಳಲ್ಲಿ ಏಳು ಜಾನುವಾರಗಳ ಕೊಂದಿರುವ ಹುಲಿ ಯಾವುದೂ ಎಂಬುದನ್ನು ಪತ್ತೆ ಮಾಡುವುದಕ್ಕಾಗಿ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ 61 ಯು ಹೆಸರಿನ ಹುಲಿ ಚಿತ್ರಣ ಸೆರೆಯಾಗಿದೆ. ಹೀಗಾಗಿ ಬಾಳೆಲೆ, ಆನೆಚೌಕೂರು ಸೇರಿದಂತೆ ಸುತ್ತಮುತ್ತಲಿನ ಬರೋಬ್ಬರಿ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಆರ್ಎಫ್ಓ ದೇವರಾಜು ನೇತೃತ್ವದ ತಂಡ ಹುಲಿಗಾಗಿ ಕೂಂಬಿಂಗ್ ನಡೆಸುತ್ತಿದೆ. ಕಾಡು, ಗಿಡಗಂಟಿ ಎನ್ನುವುದನ್ನು ಲೆಕ್ಕಿಸದೆ ಸಾಕಾನೆಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸದ್ದಿಲ್ಲದೆ ಕಾಡಿನೊಳಗೆ ಹುಡುಕಾಡುತ್ತಿದ್ದಾರೆ.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಕೂಡ ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಇದ್ದು ಹುಲಿ ಸೆರೆಗೆ ಪ್ರಯತ್ನಿಸುತ್ತಿದ್ದಾರೆ. ಅರಣ್ಯದ ಹಂಚಿನಲ್ಲಿರುವ ಹಲವು ಗ್ರಾಮಗಳು ಈ ಹುಲಿಯ ಆತಂಕದಲ್ಲಿ ದಿನ ನಿತ್ಯದ ಬದುಕು ದೂಡುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ. ತೋಟ, ಗದ್ದೆಗಳಿಗೆ ನಮ್ಮ ದನ ಕರುಗಳನ್ನು ಮೇಯಿಸಲು ಬಿಡಲು ಸಾಧ್ಯವಾಗುತ್ತಿಲ್ಲ. ದನಕರುಗಳ ಮೇಲೆ ಅಟ್ಯಾಕ್ ಆದಾಗ ನಾವು ಬಿಡಿಸಲು ಹೋಗುವಂತಿಲ್ಲ. ಬಿಡಿಸಲು ಹೋದರೆ ನಾವು ಬದಕಲು ಸಾಧ್ಯವೇ.? ತೋಟಗಳಿಗೆ ಕೆಲಸಕ್ಕಾಗಿ ಕಾರ್ಮಿಕರು ಬರುತ್ತಿಲ್ಲ. ಹೀಗಾಗಿ ಅರಣ್ಯ ಇಲಾಖೆಗೆ ದೂರು ನೀಡಿದ ಮೇಲೆ ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹೇಗಾದರೂ ಮಾಡಿ ಅದನ್ನು ಸೆರೆ ಹಿಡಿದಲ್ಲಿ ನಮಗೆ ನೆಮ್ಮದಿಯಾಗಲಿದೆ ಎಂದು ಸ್ಥಳೀಯರಾದ ಗಣೇಶ್ ಅವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಬಾಳೆಲೆ, ಶ್ರೀಮಂಗಲ, ವೆಸ್ಟ್ ನೆಮ್ಮೆಲೆ, ಆನೆಚೌಕೂರು ಸೇರಿದಂತೆ ಹಲವೆಡೆ ಹುಲಿಗಳ ದಾಳಿ ನಿರಂತರವಾಗಿ ನಡೆಯುತ್ತಿವೆ. ಶ್ರೀಮಂಗಲ, ವೆಸ್ಟ್ ನೆಮ್ಮೆಲೆ ಭಾಗದಲ್ಲಿ ಹುಲಿ ಸೆರೆಗಾಗಿ ಬೋನು ಇರಿಸಿದ್ದರೆ, ಬಾಳೆಲೆ ಭಾಗದಲ್ಲಿ ಆನೆಗಳ ಬಳಸಿ ಕೂಂಬಿಂಗ್ ನಡೆಸಲಾಗುತ್ತಿದೆ. ಏನೇ ಆಗಲಿ ಕೊಡಗು ಜಿಲ್ಲೆಯಲ್ಲಿ ಒಂದೆಡೆ ಆನೆಗಳ ದಾಳಿ ನಡೆಯುತ್ತಿದ್ದರೆ, ಮತ್ತೊಂದೆಡೆ ಹುಲಿಗಳ ದಾಳಿಯ ಆತಂಕದಲ್ಲಿ ಜನರು ಬದುಕುವಂತಾಗಿದೆ.