
ಬೆಂಗಳೂರು (ಜೂ.27) ಬೇಳೆಕಾಳು, ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವಾಗಲೇ, ‘ಆಹಾರ ಧಾನ್ಯಗಳ ಬೆಲೆ ಏರಿಕೆ ತಡೆಯುವ ಕೆಲಸ ಕೇಂದ್ರ ಸರ್ಕಾರದ್ದಾಗಿದೆ. ಆ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತದೆ ಎಂದು ನಾವು ಎದುರು ನೋಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಬೆಲೆ ಏರಿಕೆ ತಡೆಯಬೇಕಾಗಿರುವುದು ಯಾರು, ಕೇಂದ್ರ ಸರ್ಕಾರ ಅಲ್ಲವೇ? ಎಂದು ಮರು ಪ್ರಶ್ನಿಸಿದರು.
ಟೊಮೆಟೋ ಸೇರಿದಂತೆ ಹಲವು ತರಕಾರಿ ಬೆಲೆಗಳು ಶತಕ ದಾಟಿವೆ. ಅಲ್ಲದೆ ಬೇಳೆಕಾಳು ದರ ಕೂಡ ದ್ವಿಶತಕ ದಾಟಿದ್ದು, ಯದ್ವಾತದ್ವಾ ಏರತೊಡಗಿವೆ. ಕೋಳಿ ಮಾಂಸ, ಮೊಟ್ಟೆಕೂಡ ದುಬಾರಿಯಾಗಿದೆ. ಈ ಬಗ್ಗೆ ಜನರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬೆಲೆ ಏರಿಕೆ ತಡೆಯುವಂತೆ ಆಗ್ರಹ ಕೂಡ ಮಾಡುತ್ತಿದ್ದಾರೆ.
ಬಾರದ ಮುಂಗಾರು ಮಳೆ: ಶತಕ ಬಾರಿಸಿದ ತರಕಾರಿ ಬೆಲೆ, ಗ್ರಾಹಕರ ಜೇಬಿಗೆ ಕತ್ತರಿ..!
ದೇಶದ ಬಹುತೇಕ ರಾಜ್ಯಗಳಲ್ಲಿ ಟೊಮೆಟೋ .100ಕ್ಕೆ ಜಂಪ್
ನವದೆಹಲಿ: ಕೆಲವೇ ವಾರಗಳ ಹಿಂದೆ 20ರಿಂದ 30 ರು.ನಷ್ಟಿದ್ದ ಟೊಮೆಟೋ ಬೆಲೆ ದೇಶದ ಬಹುತೇಕ ರಾಜ್ಯಗಳಲ್ಲಿ ಇದೀಗ 100 ರು.ಗೆ ತಲುಪಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ 110 ರು. ಗಡಿ ದಾಟುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಬೆಂಗಳೂರಿನಲ್ಲಿ ಕೇಜಿಗೆ 125 ರು.ವರೆಗೂ ಏರಿಕೆಯಾಗಿದ್ದು, ಅಗತ್ಯ ಪ್ರಮಾಣದಲ್ಲಿ ಟೊಮೆಟೋ ಮಾರುಕಟ್ಟೆಗೆ ಬಾರದೇ ಹೋದರೆ ಇದು 150 ರು.ಗೆ ತಲುಪಬಹುದು ಎಂದು ಮಾರುಕಟ್ಟೆತಜ್ಞರು ತಿಳಿಸಿದ್ದಾರೆ. ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳೇ ಕಾರಣ ಎಂದು ಕಾಂಗ್ರೆಸ್ ಟೀಕಿಸಿದೆ.
Good News: ಬೇಳೆ ಕಾಳುಗಳ ಬೆಲೆ ತಗ್ಗಿಸಲು ಮುಂದಾದ ಕೇಂದ್ರ ಸರ್ಕಾರ
ತೊಗರಿ ಬೆಲೆ ಏರಿಕೆ ತಡೆಯಲು ಹೆಚ್ಚುವರಿ ಬೇಳೆ ಮಾರುಕಟ್ಟೆಗೆ
ನವದೆಹಲಿ: ತೊಗರಿ ಬೇಳೆ ಬೆಲೆ ದೇಶದ ವಿವಿಧೆಡೆ ಕೇಜಿಗೆ 200 ರು. ಗಡಿಯತ್ತ ಜಿಗಿಯುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ತನ್ನ ಬಳಿ ಇರುವ ಹೆಚ್ಚುವರಿ ಸರಕನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ದರ ಏರಿಕೆ ತಡೆಯಲು ಹೊರಟಿದೆ. ಕೇಂದ್ರೀಯ ದಾಸ್ತಾನಿನಲ್ಲಿರುವ ಹೆಚ್ಚುವರಿ ಬೇಳೆಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸೂಚಿಸಿದೆ. ಜತೆಗೆ ತೊಗರಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ