2 ವಾರ ಕಳೆದರೂ ವಿತರಣೆಯಾಗದ ಆಹಾರ ಧಾನ್ಯ: ಎಫ್‌ಸಿಐನಿಂದ ಇನ್ನೂ ಪೂರೈಕೆ ಇಲ್ಲ

Kannadaprabha News   | Kannada Prabha
Published : Jun 15, 2025, 07:57 AM IST
RAtion Shops

ಸಾರಾಂಶ

ತಾಂತ್ರಿಕ ಸಮಸ್ಯೆಯಿಂದ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಸಗಟು ಮಳಿಗೆಗಳಿಗೆ ಎತ್ತುವಳಿಯಾಗದೆ ಪಡಿತರ ಹಂಚಿಕೆಯಲ್ಲಿ ವ್ಯತ್ಯಯವಾಗಿದೆ.

ಬೆಂಗಳೂರು (ಜೂ.15): ಅನ್ನಭಾಗ್ಯ ಯೋಜನೆಯಡಿ ವಿತರಣೆಯಾಗಬೇಕಿದ್ದ ಪಡಿತರ ಆಹಾರ ಧಾನ್ಯ ಪ್ರಸಕ್ತ ತಿಂಗಳಿನಲ್ಲಿ ಇನ್ನೂ ಫಲಾನುಭವಿಗಳ ಕೈ ಸೇರಿಲ್ಲ. ತಾಂತ್ರಿಕ ಸಮಸ್ಯೆಯಿಂದ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಸಗಟು ಮಳಿಗೆಗಳಿಗೆ ಎತ್ತುವಳಿಯಾಗದೆ ಪಡಿತರ ಹಂಚಿಕೆಯಲ್ಲಿ ವ್ಯತ್ಯಯವಾಗಿದೆ.

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 4.11 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 4.34 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಉಚಿತವಾಗಿ 2.17 ಲಕ್ಷ ಮೆಟ್ರಿಕ್‌ ಟನ್‌ ಹಂಚಿಕೆ ಮಾಡಿದರೆ, ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ 5 ಕೆ.ಜಿ.ಯಂತೆ ಒಟ್ಟು 2.17 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಎಫ್‌ಸಿಐನಿಂದ ಪ್ರತಿ ಕೆಜಿಗೆ 24 ರು.ನಂತೆ ಖರೀದಿಸಿ ಉಚಿತವಾಗಿ ವಿತರಿಸುತ್ತಿದೆ. ಅಂತ್ಯೋದಯ ಕಾರ್ಡ್​ಗೆ 20 ಕೆ.ಜಿ. ಅಕ್ಕಿ, 15 ಕೆ.ಜಿ. ರಾಗಿ ಸೇರಿ ಒಟ್ಟು 35 ಕೆ.ಜಿ. ನೀಡಲಾಗುತ್ತಿದೆ. ಬಿಪಿಎಲ್‌ ಕಾರ್ಡುದಾರರಿಗೆ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ.

ಪ್ರತಿ ತಿಂಗಳು 1ನೇ ತಾರೀಖು ಎಫ್‌​ಸಿಐನಿಂದ ಸಗಟು ಮಳಿಗೆಗಳಿಗೆ ಅಕ್ಕಿ, ಜೋಳ, ರಾಗಿ ಎತ್ತುವಳಿ ಮಾಡಲಾಗುತ್ತಿತ್ತು. ಆ ನಂತರ ಸಗಟು ಮಳಿಗೆಗಳಿಂದ ಎತ್ತುವಳಿ ಮಾಡುವ ನ್ಯಾಯಬೆಲೆ ಅಂಗಡಿಗಳು, ಕಾರ್ಡ್​ದಾರರಿಗೆ ಪಡಿತರ ವಿತರಿಸಲಾಗುತ್ತಿತ್ತು. ಪ್ರಸಕ್ತ ತಿಂಗಳಲ್ಲಿ ಎರಡು ವಾರ ಕಳೆದರೂ ಪಡಿತರ ಹಂಚಿಕೆಯಾಗಿಲ್ಲ. ಜೊತೆಗೆ, ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ​ ಎತ್ತುವಳಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆರೋಪಿಸಿದೆ.

ಫೆಬ್ರವರಿಯಿಂದ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಡಿಬಿಟಿ ಮೂಲಕ ಕೊಡುತ್ತಿದ್ದ ಹಣವನ್ನು ಸ್ಥಗಿತಗೊಳಿಸಿದ ಬಳಿಕ ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಕೆಲ ದಿನ ವಿಳಂಬವಾಗಿತ್ತು. ಮೇ ತಿಂಗಳ ಹೊತ್ತಿಗೆ ಪರಿಸ್ಥಿತಿ ಸರಿಯಾಗಿತ್ತು ಎಂದು ಭಾವಿಸಲಾಗಿತ್ತಾದರೂ ಈ ತಿಂಗಳು ಮತ್ತೆ ವಿಳಂಬವಾಗುತ್ತಿದೆ. ಇದಕ್ಕೆ ಎಫ್‌ಸಿಐ ಮತ್ತು ರಾಜ್ಯ ಸರ್ಕಾರದ ನಡುವಿನ ಹಣಕಾಸಿನ ಕೊಡುಕೊಳ್ಳುವಿಕೆಯಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಯೇ ಕಾರಣ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಸಚಿವರಿಗೆ ಪತ್ರ: ಪ್ರಸಕ್ತ ತಿಂಗಳ ಪಡಿತರ ಎತ್ತುವಳಿಗೆ ಸಂಬಂಧಿಸಿ ಆಗುತ್ತಿರುವ ವಿಳಂಬದ ಕುರಿತು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದಿಂದ ಪತ್ರ ಬರೆದು ಗಮನ ಸೆಳೆಯಲಾಗಿದೆ. ತಿಂಗಳ 14 ದಿನ ಕಳೆದರೂ ಎಫ್‌ಸಿಐ ಗೋದಾಮಿನಿಂದ ಸಗಟು ಮಳಿಗೆಗಳಿಗೆ ಪಡಿತರ ಹಂಚಿಕೆಯಾಗಿಲ್ಲ. ಇದರಿಂದ ನಿತ್ಯ ಪಡಿತರ ಕಾರ್ಡ್‌ದಾರರು ನ್ಯಾಯಬೆಲೆ ಅಂಗಡಿಗಳಿಗೆ ಬಂದು ಹೋಗುತ್ತಿದ್ದಾರೆ. ಅಧಿಕಾರಿಗಳು ಕೂಡ ಯಾವಾಗ ಪಡಿತರ ಹಂಚಿಕೆ ಮಾಡಲಾಗುತ್ತಿದೆ ಎಂಬ ಉತ್ತರ ನೀಡುತ್ತಿಲ್ಲ. ಪೋನ್‌ ಕರೆಗಳಿಗೂ ಸ್ಪಂದಿಸುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌