ಕಬ್ಬಿನ ಒಟ್ಟಾರೆ ಆದಾಯ ಪರಿಗಣಿಸಿ ರೈತರಿಗೆ ದರ ನಿಗದಿ: ಸಚಿವ ಶಂಕರ ಪಾಟೀಲ್‌

By Govindaraj S  |  First Published Dec 21, 2022, 10:34 AM IST

ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮಿನ ನಂತರ ಸಕ್ಕರೆ ಹಾಗೂ ಕಬ್ಬಿನ ಉಪ ಉತ್ಪನ್ನಗಳ ಒಟ್ಟಾರೆ ಆದಾಯ ಪರಿಗಣಿಸಿ ರೈತರಿಗೆ ಪಾವತಿಸಬೇಕಾದ ಅಂತಿಮ ಕಬ್ಬಿನ ದರ ನಿರ್ಧರಿಸಲಾಗುವುದು ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಹೇಳಿದರು. 


ವಿಧಾನ ಪರಿಷತ್‌ (ಡಿ.21): ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮಿನ ನಂತರ ಸಕ್ಕರೆ ಹಾಗೂ ಕಬ್ಬಿನ ಉಪ ಉತ್ಪನ್ನಗಳ ಒಟ್ಟಾರೆ ಆದಾಯ ಪರಿಗಣಿಸಿ ರೈತರಿಗೆ ಪಾವತಿಸಬೇಕಾದ ಅಂತಿಮ ಕಬ್ಬಿನ ದರ ನಿರ್ಧರಿಸಲಾಗುವುದು ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಹೇಳಿದರು. ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌ ಹಾಗೂ ಪಿ.ಆರ್‌.ರಮೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಬ್ಬಿಗೆ ಎಫ್‌ಆರ್‌ಪಿಯಂತೆ 3050 ರು.ನಿಗದಿ ಮಾಡಲಾಗಿದ್ದರೂ, ರಾಜ್ಯದಲ್ಲಿನ ಅನೇಕ ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿಗಿಂತ ಹೆಚ್ಚು ಹಣ ನೀಡುತ್ತಿವೆ. ಇತ್ತೀಚೆಗೆ ಕಬ್ಬಿನ ಉಪ ಉತ್ಪನ್ನವಾದ ಎಥೆನಾಲ್‌ ಉತ್ಪಾದನೆಗೆ ಪ್ರತಿ ಟನ್‌ಗೆ 50 ರು. ಹೆಚ್ಚುವರಿಗಾಗಿ ಪಾವತಿಸಲು ಆದೇಶಿಸಲಾಗಿದೆ ಎಂದರು.

ಕಬ್ಬಿನಿಂದ ಸಕ್ಕರೆ ಜೊತೆಗೆ ಉಪ ಉತ್ಪನ್ನಗಳಾದ ಎಥೆನಾಲ್‌, ಮೊಲಾಸಿಸ್‌ ಹಾಗೂ ಇಂಧನ ಮಾರಾಟದಿಂದ ಬರುವ ಆದಾಯ ಲೆಕ್ಕಕ್ಕೆ ತೆಗೆದುಕೊಂಡು ನಿರ್ದಿಷ್ಟಪಡಿಸಿದ ಸೂತ್ರದ ಪ್ರಕಾರ ಲಾಭಾಂಶ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ ಪ್ರಸ್ತುತ ಇರುವ 92 ಸಕ್ಕರೆ ಕಾರ್ಖಾನೆಗಳ ಪೈಕಿ 72 ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು, 34 ಕಾರ್ಖಾನೆಗಳಲ್ಲಿ ಡಿಸ್ಟಲರಿ/ಎಥೆನಾಲ್‌ ಉತ್ಪಾದನಾ ಘಟಕಗಳಿವೆ. ಇವುಗಳಿಂದ ನಿತ್ಯ 4650 ಕೆಎಲ್‌ಪಿಡಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ. 62 ಸಕ್ಕರೆ ಕಾರ್ಖಾನೆಗಳಲ್ಲಿ ಸಹ ವಿದ್ಯುತ್‌ ಉತ್ಪಾದನಾ ಘಟಕಗಳಿದ್ದು, ಇವುಗಳು ಪ್ರತಿ ದಿನ 1743 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೊಂದಿರುತ್ತದೆ ಎಂದು ವಿವರಿಸಿದರು.

Tap to resize

Latest Videos

ಸುವರ್ಣಸೌಧ ಬಳಿ ಸಾರಿಗೆ ನೌಕರರ ಅಹೋರಾತ್ರಿ ಧರಣಿ: ನಿರ್ವಾಹಕಿ ಜಯಶ್ರೀ ಅಸ್ವಸ್ಥ

ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತಿವೆ ಎಂಬ ದೂರುಗಳು ಬಹಳ ವರ್ಷದಿಂದ ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಇಲಾಖೆಯಿಂದ ಇತ್ತೀಚೆಗೆ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿ ಪರಿಶೀಲಿಸಲಾಗಿದೆ. ಇನ್ನುಮುಂದೆಯೂ ದಿಢೀರ್‌ ಭೇಟಿ ನೀಡಿ ಪರಿಶೀಲಿಸುವ ಕೆಲಸ ಮಾಡಲಾಗುವುದು ಎಂದರು. ಇದಕ್ಕೂ ಮುನ್ನ ಮಾತನಾಡಿದ ಪ್ರಕಾಶ್‌ ರಾಥೋಡ್‌ ಅವರು ಬೇರೆ ರಾಜ್ಯಗಳಲ್ಲಿ ಕಬ್ಬಿನ ದರ ಹೆಚ್ಚಿಗೆ ಇದೆ, ಆದರೆ ಕರ್ನಾಟಕದಲ್ಲಿ ದರ ಕಡಿಮೆ ಇದೆ. ಹಾಗಾಗಿ ಸರ್ಕಾರ ಹೆಚ್ಚು ಮಾಡಬೇಕು ಎಂದು ಆಗ್ರಹಿಸಿದರು. ಪಿ.ಆರ್‌.ರಮೇಶ್‌ ಅವರು, ಎಥೆನಾಲ್‌ ಉತ್ಪಾದನೆಯಿಂದ ಸಕ್ಕರೆ ಕಾರ್ಖಾನೆಗೆ ಹೆಚ್ಚು ಲಾಭವಿದೆ. ಆದ್ದರಿಂದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಎಫ್‌ಆರ್‌ಪಿ ದರ ಪರಿಶೀಲಿಸಲು ಮನವಿ: ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರವನ್ನು ಪುನರ್‌ ಪರಿಶೀಲಿಸಲು ಒತ್ತಾಯಿಸಿ ವಿವಿಧ ರಾಜ್ಯಗಳ ಸಂಸದರು, ರೈತ ಮುಖಂಡರ ನಿಯೋಗವು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಸೇರಿ, ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡಿತು. ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಕಬ್ಬಿಗೆ ಎಫ್‌ಆರ್‌ಪಿ ದರ ನಿಗದಿ ಮಾಡುವಾಗ ಸಕ್ಕರೆ ಇಳುವರಿ ಆಧಾರದಂತೆ ಹಣ ಪಾವತಿ ಮಾಡುತ್ತಿರುವುದು ದಕ್ಷಿಣ ಭಾರತ ರಾಜ್ಯಗಳ ರೈತರಿಗೆ ಅನ್ಯಾಯವಾಗುತ್ತಿದೆ. 

ಪೊಲೀಸ್ ಬಿಗಿ ಭದ್ರತೆಯಲ್ಲಿ ಬೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

ಪ್ರಸಕ್ತ ಸಾಲಿನಲ್ಲಿ ಇಳುವರಿ ಮಾನದಂಡ 10:25ಕ್ಕೆ ಏರಿಕೆ ಮಾಡಿರುವುದು ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ ಕೂಡಲೇ ಸಕ್ಕರೆ ಇಳುವರಿ ಮಾನದಂಡವನ್ನು 8.5ಕ್ಕೆ ಇಳಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಇದೇ ಸಾಲಿನಲ್ಲಿ ಎಫ್‌ಆರ್‌ಪಿ ದರವನ್ನು ಕ್ವಿಂಟಲ್‌ಗೆ 305 ನಿಗದಿ ಮಾಡಿರುವುದನ್ನು ಪುನರ್‌ ಪರಿಶೀಲನೆ ನಡೆಸಿ 350 ರೂ.ಗೆ ಏರಿಕೆ ಮಾಡಬೇಕು. ರಸಗೊಬ್ಬರದ ಬೆಲೆ ಏರಿಕೆ, ಕಬ್ಬು ಕಟಾವು, ಸಾಗಾಣಿಕೆ ವೆಚ್ಚ, ಕಬ್ಬಿನ ಬೀಜದ ಬೆಲೆ ಏರಿಕೆಗೆ ಅನುಗುಣವಾಗಿ ಎಫ್‌ಆರ್‌ಪಿ ಏರಿಕೆ ಮಾಡಿಲ್ಲ ಹಾಗಾಗಿ ಪುನರ್‌ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಂಸದರಾದ ಸುಮಲತಾ ಅಂಬರೀಶ್‌, ಎಲ್.ಹನುಮಂತಯ್ಯ ಸೇರಿ, ದಕ್ಷಿಣ ರಾಜ್ಯಗಳ ರೈತರು, ಮುಖಂಡರು ನಿಯೋಗದಲ್ಲಿದ್ದರು.

click me!