ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ನಡೆಸುವ ಪರೀಕ್ಷೆಗಳು ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲೇ ಇರಬೇಕೆಂಬ ಕನ್ನಡ ಪರ ಹೋರಾಟಗಾರರ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಇದೇ ಪ್ರಥಮ ಬಾರಿಗೆ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಎಸ್‌ಎಸ್‌ಸಿ ಮುಂದಾಗಿದೆ.
ಬೆಂಗಳೂರು (ಜ.20): ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ನಡೆಸುವ ಪರೀಕ್ಷೆಗಳು ಕನ್ನಡ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲೇ ಇರಬೇಕೆಂಬ ಕನ್ನಡ ಪರ ಹೋರಾಟಗಾರರ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ಇದೇ ಪ್ರಥಮ ಬಾರಿಗೆ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಎಸ್‌ಎಸ್‌ಸಿ ಮುಂದಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ವಿವಿಧ ಪ್ರವೇಶ ಪರೀಕ್ಷೆಯಲ್ಲಿ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದ ಬಗ್ಗೆ ಕನ್ನಡಪರ ಹೋರಾಟಗಾರರು, ಲೇಖಕರು, ಸಾಹಿತಿಗಳು ತೀವ್ರ ಆಕ್ರೋಶ ಹೊರಹಾಕಿದ್ದರು. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವ ಸಿಬ್ಬಂದಿ ನೇಮಕಾತಿ ಆಯೋಗದ ವಿರುದ್ಧ ಕಾನೂನು ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿತ್ತು.
undefined
ಸ್ವಿಜರ್‌ಲ್ಯಾಂಡ್ ರೀತಿ ಕೊಡಗು, ಚಿಕ್ಕಮಗ್ಳೂರು ಅಭಿವೃದ್ಧಿ: ಸಿಎಂ ಬೊಮ್ಮಾಯಿ
ಇದೀಗ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು, ಇಲಾಖೆಗಳು, ಕಚೇರಿಗಳಲ್ಲಿ ನೇಮಕ ಮಾಡಲು ಸಿಬ್ಬಂದಿ ನೇಮಕಾತಿ ಆಯೋಗವು ಮಲ್ಟಿಟಾಸ್ಕಿಂಗ್ ಸ್ಟಾಫ್ (ನಾನ್ ಟೆಕ್ನಿಕಲ್) ಹಾಗೂ ಹವಾಲ್ದಾರ್ ಹುದ್ದೆಗಳ ಪರೀಕ್ಷೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. 10880 ಎಂಟಿಎಸ್ ಹುದ್ದೆಗಳಿಗೆ ಹಾಗೂ 529 ಸಿಬಿಐಸಿ ಮತ್ತು ಸಿಬಿಎನ್‌ನ ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಜ.18ರಿಂದ ಫೆ.17ರವರೆಗೆ ಪರೀಕ್ಷೆಗೆ ನೋಂದಣಿ ಪಡೆಯಲು ಅವಕಾಶ ನೀಡಲಾಗಿದೆ.
ಈ ಹುದ್ದೆಗಳಿಗೆ ಏಪ್ರಿಲ್ ತಿಂಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದ್ದು, ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಇತರ ಪ್ರಾದೇಶಿಕ ಭಾಷೆಗಳಾಗಿವೆ.
ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡಿರುವುದಕ್ಕೆ ಕನ್ನಡಪರ ಹೋರಾಟಗಾರ ಅರುಣ್ ಜಾವಗಲ್ ಸಂತಸ ವ್ಯಕ್ತಪಡಿಸಿದ್ದು, ಕನ್ನಡಪರ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಇರುತ್ತಿದ್ದ ಪರೀಕ್ಷೆ ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ 15 ಭಾಷೆಯಲ್ಲಿ ನಡೆಸಲಾಗುತ್ತಿದೆ. ಇದು ಮೊದಲ ಯಶಸ್ಸು. ಆಯಾ ರಾಜ್ಯದ ಹುದ್ದೆಗಳಿಗೆ ಆಯಾ ರಾಜ್ಯದವರನ್ನೇ ಆಯ್ಕೆ ಮಾಡಬೇಕು ಎನ್ನುವ ಹೋರಾಟವನ್ನು ಮುಂದುವರೆಸಬೇಕಿದೆ ಎಂದು ಹೇಳಿದ್ದಾರೆ.
ಕನ್ನಡಪ್ರಭದೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಈ ಹಿಂದೆ ರೈಲ್ವೆ ಇಲಾಖೆಯಲ್ಲೂ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಬೇಕಿತ್ತು. ಆ ನಂತರ ಕರವೇ ಹೋರಾಟದಿಂದ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿತ್ತು. ಇದೀಗ ಕನ್ನಡ ಪರ ಹೋರಾಟಗಾರರ ಹೋರಾಟದ ದೆಸೆಯಿಂದ ಎಸ್‌ಎಸ್‌ಸಿಗೆ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ. ಆದರೂ ಬ್ಯಾಂಕಿಂಗ್ ಸೇರಿದಂತೆ ಇತರೆ ಹುದ್ದೆಗಳಿಗೂ ಕೇಂದ್ರ ಸರ್ಕಾರ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. ಈ ಮೂಲಕ ಕನ್ನಡಿಗರಿಗೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹುದ್ದೆ ಗಳಿಸಲು ಸಹಕರಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಜಾಲತಾಣಗಳ ಅತಿ ಬಳಕೆ ಬೇಡ: ಸಿಎಂ ಬೊಮ್ಮಾಯಿ
ಮೊದಲ ಬಾರಿಗೆ ಕನ್ನಡಕ್ಕೆ ಅವಕಾಶ
- ವಿವಿಧ ಕೇಂದ್ರ ಸರ್ಕಾರಿ ನೌಕರಿಗೆ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಪರೀಕ್ಷೆ
- ಇದುವರೆಗೆ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಮಾತ್ರ ಇರುತ್ತಿದ್ದ ಪರೀಕ್ಷಾ ಪ್ರಶ್ನೆಪತ್ರಿಕೆ
- ಇದಕ್ಕೆ ಕನ್ನಡಪರ ಹೋರಾಟಗಾರರು, ಕನ್ನಡ ಸಾಹಿತ್ಯ ಪರಿಷತ್ತಿನಿಂದಲೂ ತೀವ್ರ ವಿರೋಧ
- ಮಣಿದ ಕೇಂದ್ರ ಸರ್ಕಾರ: ಇದೇ ಮೊದಲ ಬಾರಿಗೆ ಕನ್ನಡ ಸೇರಿ 13 ಭಾಷೆಗಳಿಗೆ ಅವಕಾಶ
- ಕನ್ನಡದಲ್ಲೂ 10,880 ಎಂಟಿಎಸ್ ಹುದ್ದೆ, 529 ಸಿಬಿಐಸಿ-ಸಿಬಿಎನ್ ಹವಾಲ್ದಾರ್ ಪರೀಕ್ಷೆ