ಸತತ 4 ದಿನಗಳಿಂದ ಬೆಂಕಿಯ ಕೆನ್ನಾಲಿಗೆಗೆ ದೇಶದ ಪ್ರಸಿದ್ಧ ಹುಲಿ ಸಂರಕ್ಷಿತಾರಣ್ಯದಲ್ಲಿ ಅಪಾರ ಹಾನಿ: ಸರೀಸೃಪಗಳು ಬಲಿ ಬಂಡೀಪುರ ಕಾಡಲ್ಲಿ ಈ ಪ್ರಮಾಣದ ಬೆಂಕಿ ಇದೇ ಮೊದಲು | ಬೆಂಕಿ ನಂದಿಸಲು 500 ಅರಣ್ಯ ಸಿಬ್ಬಂದಿಯಿಂದ ಹರಸಾಹಸ
ಚಾಮರಾಜನಗರ[ಫೆ.25]: ಕಳೆದ ನಾಲ್ಕು ದಿನಗಳಿಂದ ವ್ಯಾಪಿಸಿರುವ ಬೆಂಕಿಯ ಕೆನ್ನಾಲಗೆಗೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 3500 ಹೆಕ್ಟೇರ್ ಅರಣ್ಯ ಸುಟ್ಟು ಕರಕಲಾಗಿದೆ. ಅಪರೂಪದ ಜೀವ ಪ್ರಭೇದಗಳ ಆವಾಸಸ್ಥಾನವಾಗಿರುವ ಗೋಪಾಲಸ್ವಾಮಿ ಬೆಟ್ಟ ವಲಯವಂತೂ ಸ್ಮಶಾನದಂತಾಗಿದೆ.
ಸತತ ಬೆಂಕಿಗೆ ಬಂಡೀಪುರ, ಮದ್ದೂರು ಮತ್ತು ಕುಂದಕರೆ ಕಾಡು ಕೂಡ ಭಸ್ಮವಾಗಿದ್ದು, ಭಾನುವಾರ ಗೋಪಾಲಸ್ವಾಮಿ ಬೆಟ್ಟ, ಮದ್ದೂರು ಮತ್ತು ಬಂಡೀಪುರ ವಲಯದಲ್ಲಿ ಬೆಂಕಿಯ ರುದ್ರನರ್ತನ ಆರಂಭವಾಗಿದೆ. ದಟ್ಟಹೊಗೆ, ಬೆಂಕಿಯ ತಾಪಕ್ಕೆ ಈ ಅರಣ್ಯವ್ಯಾಪ್ತಿಯಲ್ಲಿದ್ದ ಬಹುತೇಕ ಪ್ರಾಣಿಗಳು ದಿಕ್ಕಾಪಾಲಾಗಿ ಓಡಿಹೋಗಿವೆ. ಸುತ್ತಲೂ ಆವರಿಸಿಕೊಂಡ ಬೆಂಕಿಯಿಂದಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದ ಸಣ್ಣಪುಟ್ಟ ಪ್ರಾಣಿಗಳು, ಸರೀಸೃಪಗಳು ಸುಟ್ಟುಕರಕಲಾದ ಹೃದಯ ಕಲಕುವ ದೃಶ್ಯ ಅಲ್ಲಲ್ಲಿ ಕಣ್ಣಿಗೆ ಬೀಳುತ್ತವೆ.
ವನ್ಯಸಂಕುಲಕ್ಕೆ ಬೆಂಕಿ.. ನೆರವಿಗೆ ಧಾವಿಸಿದ ದಚ್ಚು, ವಿಜಯ್, ಗಣೇಶ್
ಬೆಂಕಿ ನಂದಿಸಲು 500 ಮಂದಿ:
ಮೊದಲಿಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುಂದಕೆರೆ ವಲಯದಲ್ಲಿ ಗುರುವಾರ ಬೆಂಕಿ ಕಾಣಿಸಿ ಕೊಂಡಿತ್ತು. ನಂತರ ಶುಕ್ರವಾರ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ, ಶನಿವಾರ ಗೋಪಾಲಸ್ವಾಮಿ, ಮದ್ದೂರು ಮತ್ತು ಬಂಡೀಪುರ ವಲಯದಲ್ಲಿ ಬೆಂಕಿಯ ರುದ್ರನರ್ತನವೇ ಆಯಿತು. ಶನಿವಾರ ರಾತ್ರಿಯಿಡಿ 500ಕ್ಕೂ ಹೆಚ್ಚು ಮಂದಿ ಅರಣ್ಯ ಇಲಾಖೆ ಸಿಬ್ಬಂದಿ, ಸ್ವಯಂ ಸೇವಕರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಪಟ್ಟ ಶ್ರಮದಿಂದಾಗಿ ಭಾನುವಾರ ಬೆಳಗಿನ ವೇಳೆ ಬೆಂಕಿ ಹತೋಟಿಗೆ ಬಂದು ಒಂದಷ್ಟು ನೆಮ್ಮದಿ ಮೂಡಿಸಿತ್ತು. ಆದರೆ, ಬಿಸಿಲಿನ ಜಳ ಮತ್ತು ಗಾಳಿಯಿಂದಾಗಿ ಭಾನುವಾರ ಮತ್ತೆ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಲ್ಲದೆ, ಮದ್ದೂರು ಮತ್ತು ಬಂಡೀಪುರ ವಲಯಕ್ಕೂ ವ್ಯಾಪಿಸಿದೆ
ಬಂಡೀಪುರದಲ್ಲಿ ಕಾಡ್ಗಿಚ್ಚು: 3000 ಎಕರೆ ಕಾಡು ಭಸ್ಮ, ಇಲ್ಲಿವೆ ಫೋಟೋಗಳು
ಕೆಂಡ ಹಾಸಿದೆ, ಕಪ್ಪು ಹೊದ್ದಿದೆ:
950 ಚ.ಕಿ.ಮೀಗೂ ಹೆಚ್ಚು ವ್ಯಾಪ್ತಿಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸತತ ಮೂರ್ನಾಲ್ಕು ದಿನದಿಂದ ಉರಿದ ಬೆಂಕಿಯಿಂದಾಗಿ ಹಚ್ಚಹಸಿರಿಂದ ನಳನಳಿಸುತ್ತಿದ್ದ ಕಾನನ ಈಗ ಕೆಂಡ ಹಾಸಿದಂತಾಗಿದೆ. ಗಾಳಿ ಬೀಸಿದರೆ ಸಾಕು ಆ ಕೆಂಡ ಬೆಂಕಿಯ ಜ್ವಾಲೆಯಾಗಿ ಹಬ್ಬುತ್ತಿದೆ. ಕೆಲದಿನಗಳಿಂದ ಒಣಗಿದ ಹುಲ್ಲಿನಿಂದ ಆವೃತವಾಗಿದ್ದ ಕಾಡೀಗ ಕಪ್ಪು ಹೊದಿಕೆ ಹಾಸಿದಂತೆ ಕಾಣಿಸುತ್ತಿದೆ.
1 ವಾರ ಸಫಾರಿ ಇಲ್ಲ:
ಬೆಂಕಿಯ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ 1 ವಾರ ಸಫಾರಿ ನಿಷೇಧಿಸಲಾಗಿದೆ. ಗೋಪಾಲಸ್ವಾಮಿ ಬೆಟ್ಟ ಪ್ರವೇಶಕ್ಕೂ ಕೆಲಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಗೋಪಾಲ ಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.
ಪ್ರಾಣಿಗಳು ಬಲಿ
ಬಂಡೀಪುರ ವ್ಯಾಪ್ತಿಯಲ್ಲಿ ಭೀಕರ ಕಾಡ್ಗಿಚ್ಚಿಗೆ 3500 ಹೆಕ್ಟೇರ್ ಅರಣ್ಯ ಬೆಂಕಿಗಾಹುತಿಯಾಗಿದ್ದರೂ ಪ್ರಾಣಿಗಳ ಪ್ರಾಣ ಹಾನಿ ಅಷ್ಟೊಂದು ಆದಂತಿಲ್ಲ. ಈ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಹುಲಿ, ಆನೆ, ಕರಡಿ, ಜಿಂಕೆ, ಕಾಡೆಮ್ಮೆ ಮತ್ತು ನವಿಲು, ತೋಳಗಳು ಸೇರಿ ಉಳಿದ ಪ್ರಾಣಿಗಳು ಈಗಾಗಲೇ ಬೆಂಕಿಯ ಪ್ರತಾಪ ಕಂಡು ಕಾಲ್ಕಿತ್ತಿವೆ. ದಿಕ್ಕಾಪಾಲಾಗಿ ಓಡುವ ವೇಳೆ ನಾಲ್ಕೂ ಕಡೆಗಳಿಂದ ಸುತ್ತುವರಿದ ಬೆಂಕಿಯ ಕೆನ್ನಾಲಗೆಗೆ ಮೊಲ, ಹಕ್ಕಿಗಳು, ಸರೀ ಸೃಪಗಳು ಜೀವಂತ ಶವವಾಗಿರುವುದು ಅಲ್ಲಲ್ಲಿ ಕಾಣಸಿಗುತ್ತವೆ.
-ದೇವರಾಜು ಕಪ್ಪಸೋಗೆ