
ಬೆಂಗಳೂರು (ಆ.19): ಸಾಮಾಜಿಕ ಜಾಲತಾಣದಲ್ಲಿ ಜಾತಿ ಆಧಾರಿತ ಪ್ರಚೋದನಕಾರಿ ಮಾತುಗಳನ್ನಾಡಿ ಸಮಾಜದಲ್ಲಿ ಅಶಾಂತಿ ಮೂಡಿಸಿದ ಆರೋಪದ ಮೇಲೆ ವಕೀಲ ಜಗದೀಶ್ ಅವರ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಜುನಾಥ್ ಎಂಬುವರು ನೀಡಿದ ದೂರಿನನ್ವಯ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 ಮತ್ತು 299 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋದಲ್ಲಿ ಜಗದೀಶ್ ಅವರು ಒಂದು ನಿರ್ದಿಷ್ಟ ಜಾತಿಯ ವಿರುದ್ಧ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವುದು ಕಂಡುಬಂದಿದೆ.
ಇಂತಹ ಹೇಳಿಕೆಗಳು ಸಮಾಜದಲ್ಲಿ ವಿಭಜನೆ ಮತ್ತು ದ್ವೇಷಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದು, ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಘಟನೆ ಸೈಬರ್ ಕ್ರೈಮ್ ಮತ್ತು ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಜನವರಿ ತಿಂಗಳಲ್ಲಿ ಜೈಲಿಗೆ ಹೋಗಿದ್ದ ಜಗದೀಶ್:
ಬಿಗ್‌ಬಾಸ್ ರಿಯಾಲಿಟಿ ಶೋ ಖ್ಯಾತಿಯ ವಕೀಲ ಜಗದೀಶ್ ಕಳೆದ ಜನವರಿ ತಿಂಗಳಲ್ಲಿ ಬಂಧನ ಆಗಿದ್ದರು. ತೇಜಸ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಜಗದೀಶ್ ಅವರನ್ನು ಬಂಧಿಸಲಾಗಿತ್ತು. ಕೋಡಿಗೇಹಳ್ಳಿಯಲ್ಲಿ ನಡೆದ ಗಲಾಟೆಯಲ್ಲಿ ಜಗದೀಶ್ ಅವರ ಗನ್‌ಮ್ಯಾನ್ ಕಾನೂನುಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಉತ್ತರ ಪ್ರದೇಶದಲ್ಲಿ ಮಾತ್ರ ಗುಂಡು ಹಾರಿಸಿರುವ ಬಂದೂಕಿನ ಪರವಾನಿಗೆ ಪಡೆಯಲಾಗಿತ್ತು. ಇದೇ ಗನ್ ಬಳಸಿ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ತೇಜಸ್ ಎಂಬವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೋಡಿಗೇಹಳ್ಳಿಯಲ್ಲಿ ಅಣ್ಣಮ್ಮ ತಾಯಿ ಕೂರಿಸುವ ವಿಚಾರಕ್ಕೂ ಗಲಾಟೆ ವೇಳೆ ಸ್ಥಳೀಯ ಜನರು ಜಗದೀಶ್ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಹ ವೈರಲ್ ಆಗಿತ್ತು. ಹಲ್ಲೆಯಿಂದ ವಕೀಲ್ ಜಗದೀಶ್ ಮೂಗಿಗೆ ಗಂಭೀರ ಗಾಯವಾಗಿತ್ತು. ಇದಕ್ಕೂ ಮೊದಲು ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಯ ಭದ್ರತಾ ಸಿಬ್ಬಂದಿ ಜೊತೆ ಲಾಯರ್ ಜಗದೀಶ್ ಕಿರಿಕ್ ಮಾಡಿಕೊಂಡಿದ್ದರು. ಭದ್ರತಾ ಸಿಬ್ಬಂದಿ ಮೇಲೆ ಜಗದೀಶ್ ಹಲ್ಲೆಗೆ ಮುಂದಾಗಿರುವ ದೃಶ್ಯಗಳು ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಲಾಯರ್ ಜಗದೀಶ್ ಸೇರಿದಂತೆ ಒಟ್ಟು ನಾಲ್ಕು ಜನರ ಬಂಧನ ಆಗಿತ್ತು. ಇದಾದ ನಂತರ ಮೂರು ತಿಂಗಳು ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
11 ಕ್ರಿಮಿನಲ್ ಕೇಸ್ ಇವೆ ಎಂದ ಶಾಸಕ ವಿಶ್ವನಾಥ್:
ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ವಕೀಲ ಜಗದೀಶ್ ಭೂ ಹಗರಣ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಾಸಕ ವಿಶ್ವನಾಥ್ ಅವರು, ವಕೀಲ ಜಗದೀಶ್ ಮೇಲೆ 11 ಕ್ರಿಮಿನಲ್ ಕೇಸುಗಳಿವೆ. ಅವರು 3 ತಿಂಗಳು ಜೈಲಿಗೆ ಹೋಗಿ ಬಂದಿದ್ದಾರೆ. ನನ್ನ ಬಗ್ಗೆ ಅವಹೇಳನ ಮಾಡಿದ್ದಕ್ಕೆ ದೂರು ದಾಖಲಿಸಲಾಗುವುದು. ನನ್ನ ವಿರುದ್ಧ ಮಾಡಲಾಗಿರುವ ಭೂ ಹಗರಣದ ಬಗ್ಗೆ ಒಂದೇ ಒಂದು ಸಾಕ್ಷಿ ಕೊಟ್ಟರೆ ರಾಜಕೀಯ ನಿವೃತ್ತಿ ಕೊಡುತ್ತೇನೆ. ಇಲ್ಲವಾದರೆ, ಅವರು ನಾಯಿ ತರಹ ನಮ್ಮ ತೋಟ ಕಾಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ