ಫಾರ್ಮ್‌ಹೌಸ್‌ನಲ್ಲಿ ಹೆಣ್ಣು ಭ್ರೂಣಗಳ ಹತ್ಯೆ ದಂಧೆ!

Kannadaprabha News   | Kannada Prabha
Published : Oct 24, 2025, 06:04 AM IST
mohali news team of three involved in human trafficking of infants arrested asc

ಸಾರಾಂಶ

ಮಂಡ್ಯ ಪ್ರಕರಣ ಮಾಸುವ ಮುನ್ನವೇ, ಮೈಸೂರು ಜಿಲ್ಲೆಯ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಲಿಂಗ ಪತ್ತೆಯ ಜಾಲವೊಂದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ದೀಪಾವಳಿ ಹಬ್ಬದಂದು ಪತ್ತೆ ಹಚ್ಚಿದ್ದಾರೆ.

ಮೈಸೂರು : ಮಂಡ್ಯ ತಾಲೂಕು ಹಾಡ್ಯ-ಹುಳ್ಳೇನಹಳ್ಳಿ ನಡುವಿನ ಆಲೆಮನೆಯೊಂದರ ಕೊಠಡಿಯಲ್ಲಿ ಅಕ್ರಮವಾಗಿ ಹೆಣ್ಣು ಭ್ರೂಣ ಲಿಂಗ ಪತ್ತೆ ಕಾರ್ಯ ನಡೆಯುತ್ತಿದ್ದ ಪ್ರಕರಣ ಮಾಸುವ ಮುನ್ನವೇ, ಪಕ್ಕದ ಮೈಸೂರು ಜಿಲ್ಲೆಯ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಲಿಂಗ ಪತ್ತೆಯ ಜಾಲವೊಂದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ದೀಪಾವಳಿ ಹಬ್ಬದಂದು ಪತ್ತೆ ಹಚ್ಚಿದ್ದಾರೆ.

ಮೈಸೂರು ತಾಲೂಕಿನ ಹುನಗನಹಳ್ಳಿ ಹುಂಡಿ ಸಮೀಪದ ಐಷಾರಾಮಿ ಫಾರಂಹೌಸ್‌ನಲ್ಲಿ ಭ್ರೂಣಲಿಂಗ ಪತ್ತೆ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸರು ಬುಧವಾರ ದಾಳಿ ನಡೆಸಿದ್ದು, ಮಹಿಳೆ ಸೇರಿದಂತೆ 4 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಭ್ರೂಣ ಲಿಂಗ ಪತ್ತೆಗೆ 25 ಸಾವಿರ ರು. ಪಡೆಯುತ್ತಿದ್ದರು. ಮಗು ಗಂಡೋ ಅಥವಾ ಹೆಣ್ಣೋ ಎಂದು ಹೇಳುತ್ತಿದ್ದರು. ಹೆಣ್ಣು ಭ್ರೂಣವಾದರೆ, ಹತ್ಯೆ ಮಾಡಲು 30 ಸಾವಿರ ರು. ಹಣ ಪಡೆಯುತ್ತಿದ್ದರು. ಖಾಸಗಿ ಆಸ್ಪತ್ರೆಯಿಂದ ಸ್ಕ್ಯಾನಿಂಗ್‌ ಯಂತ್ರ ತಂದು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಭ್ರೂಣಲಿಂಗ ಪತ್ತೆ ದಂಧೆ ನಡೆಸುತ್ತಿದ್ದ ನರ್ಸ್ ಶ್ಯಾಮಲಿ, ಈಕೆಯ ಸಹೋದರ ಗೋವಿಂದರಾಜ್, ಭ್ರೂಣಲಿಂಗ ಪತ್ತೆಗಾಗಿ ಬಂದಿದ್ದ ಮಹಿಳೆಯರ ಪತಿಯರಾದ ಕೆ.ಆರ್.ನಗರದ ಭೇರ್ಯ ಗ್ರಾಮದ ಹರೀಶ್‌ ನಾಯಕ ಮತ್ತು ಮೈಸೂರು ತಾಲೂಕು ಕೆ.ಸಾಲುಂಡಿ ಗ್ರಾಮದ ಶಿವಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಾದ ಶ್ಯಾಮಲಿ ಪತಿ ಕಾರ್ತಿಕ್, ಏಜೆಂಟ್ ಪುಟ್ಟರಾಜು ಮತ್ತು ಇತರರು ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ದಾಳಿ ವೇಳೆ, ಗರ್ಭಿಣಿಯರ ಪರೀಕ್ಷೆಗೆ ಬಳಸುತ್ತಿದ್ದ ವೈದ್ಯಕೀಯ ಉಪಕರಣಗಳು, ಲಾಕರ್‌ನಲ್ಲಿ ಇರಿಸಿದ್ದ 3 ಲಕ್ಷ ರು.ಗಳು, ಗರ್ಭಿಣಿಯರಿಂದ ಹಣ ಪಡೆದ ಮಾಹಿತಿಯೊಳಗೊಂಡ ಡೈರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಹಲವಾರು ಮಂದಿ ಪರೀಕ್ಷೆಗೆ ಒಳಗಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಾರ್ಯಾಚರಣೆ ನಡೆದದ್ದು ಹೇಗೆ?:

ಮೈಸೂರು-ಬನ್ನೂರು ರಸ್ತೆಯ ಸುತ್ತಮುತ್ತಲ ಗ್ರಾಮಗಳಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವ ಮಾಹಿತಿ ಮೇರೆಗೆ ಕಳೆದ ಎರಡು ತಿಂಗಳಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಭಾಗದಲ್ಲಿ ಕಣ್ಗಾವಲು ಇರಿಸಿದ್ದರು. ಬಳಿಕ, ಹುನಗನಹಳ್ಳಿ ಎಲ್ಲೆಯಲ್ಲಿರುವ ಹಿಸ್‌ ಹೋಲಿನೆಸ್‌–ಸ್ವಾಮಿ ಶಿವಾನಂದ ಪರಮಹಂಸ ನಿಲಯ ಫಲಕವಿದ್ದ ಬಂಗಲೆಯ ಮೊದಲ ಮಹಡಿಯಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿದೆ ಎಂಬುದು ತಿಳಿದು ಬಂದಿತ್ತು.

ಈ ಹಿನ್ನೆಲೆಯಲ್ಲಿನ ರಾಜ್ಯ ಆರೋಗ್ಯ ಇಲಾಖೆ ಡಿಡಿ ವಿವೇಕ್ ದೊರೈ, ಮಂಡ್ಯ ಡಿಎಚ್‌ಒ ಮೋಹನ್, ಮೈಸೂರು ಡಿಎಚ್‌ಒ ಕುಮಾರಸ್ವಾಮಿ ಮತ್ತು ಮಂಡ್ಯ ಕುಟುಂಬ ಕಲ್ಯಾಣ ಅಧಿಕಾರಿ ಬೆಟ್ಟಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಇದಕ್ಕಾಗಿ ಮೆಲ್ಲಹಳ್ಳಿ ವೃತ್ತದಲ್ಲಿ ಗರ್ಭಿಣಿಯ ಸೋಗಿನಲ್ಲಿದ್ದ ಪುಟ್ಟಸಿದ್ದಮ್ಮ ಎಂಬುವರನ್ನು ಬಳಸಿಕೊಳ್ಳಲಾಯಿತು.

ಏಜೆಂಟ್‌ ಸ್ವಾಮಿ ಎಂಬಾತ ಪುಟ್ಟಸಿದ್ದಮ್ಮ ಎಂಬುವರಿಂದ 30 ಸಾವಿರ ರು. ಪಡೆದು, ಕಾರಿನಲ್ಲಿ ಗೋವಿಂದರಾಜು ಎಂಬುವರೊಂದಿಗೆ ಬಂಗಲೆಗೆ ಕಳುಹಿಸಿಕೊಟ್ಟ. ಮಾರ್ಗ ಮಧ್ಯೆ ರೂಪಾ ಹಾಗೂ ಉಮಾ ಎಂಬ ಮಹಿಳೆಯರು ಕಾರು ಹತ್ತಿಕೊಂಡರು. ಉಮಾ ಎಂಬುವರಿಂದಲೂ ಆರೋಪಿಗಳು 25 ಸಾವಿರ ಪಡೆದಿದ್ದರು. ರೂಪಾ ಅವರ ಪತಿ ಹರೀಶ್‌ ನಾಯಕ, ಉಮಾ ಅವರ ಪತಿ ಶಿವಕುಮಾರ್ ಅವರೂ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು 30 ಸಾವಿರ ಹಣ ನೀಡಿದ್ದರು.

ಬಳಿಕ, ಕಾರು ನರ್ಸ್‌ ಶ್ಯಾಮಲಿ ಅವರ ಮನೆಗೆ ಬಂತು. ಅಲ್ಲಿಂದ ಬನ್ನೂರಿನ ಖಾಸಗಿ ಎಸ್‌.ಕೆ.ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಈ ವೇಳೆ, ದಾಳಿ ನಡೆಸಲಾಯಿತು. ವಿಚಾರಣೆ ವೇಳೆ, ಗಂಡ ಕಾರ್ತಿಕ್ ಮತ್ತು ‍ಪುಟ್ಟರಾಜು ಎಂಬುವರೊಂದಿಗೆ ಸೇರಿಕೊಂಡು ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಕಾರ್ಯ ನಡೆಸುತ್ತಿರುವುದಾಗಿ ಶ್ಯಾಮಲಿ ತಿಳಿಸಿದ್ದಾರೆ. 

ಗ್ರಾಮೀಣ ಗರ್ಭಿಣಿಯರೇ ಟಾರ್ಗೆಟ್:ಆರೋಪಿ ಶ್ಯಾಮಲಿ ಬನ್ನೂರಿನ ಎಸ್.ಕೆ. ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಶ್ಯಾಮಲಿ, ಆಕೆಯ ಪತಿ ಕಾರ್ತಿಕ್, ಸಹೋದರ ಗೋವಿಂದರಾಜು, ಏಜೆಂಟ್ ಪುಟ್ಟರಾಜು ಮೂಲಕ ಗಿರಾಕಿಗಳಿಗೆ ಬಲೆ ಬೀಸುತ್ತಿದ್ದರು. ಈ ತಂಡವು ಗ್ರಾಮೀಣ ಭಾಗದ ಗರ್ಭಿಣಿಯರನ್ನು ಟಾರ್ಗೆಟ್ ಮಾಡಿದ್ದು, ಸಾವಿರಾರು ಹಣ ಪಡೆದು ಸ್ಕ್ಯಾನಿಂಗ್ ಮಾಡಿ, ಹೊಟ್ಟೆಯಲ್ಲಿರುವ ಮಗು ಗಂಡೋ ಅಥವಾ ಹೆಣ್ಣೋ ಎಂದು ಹೇಳುತ್ತಿದ್ದರು. ನಂತರ, ಹೆಣ್ಣು ಮಗುವಾದರೆ ಗರ್ಭಪಾತ ಮಾಡಿಸುತ್ತಿದ್ದರು. ಇದಕ್ಕೆ ವೈದ್ಯರೊಬ್ಬರು ಸಹಕರಿಸುತ್ತಿದ್ದರು ಎನ್ನಲಾಗಿದೆ.

ಆರೋಪಿಗಳು ಭ್ರೂಣ ಲಿಂಗ ಪತ್ತೆಗೆ 25 ಸಾವಿರ ಮತ್ತು ಭ್ರೂಣ ಹತ್ಯೆ 30 ಸಾವಿರ ರೂ. ಪಡೆಯುತ್ತಿದ್ದರು. ಗರ್ಭಿಣಿಯರ ಕುಟುಂಬಸ್ಥರು, ಪತಿಯವರೊಂದಿಗೆ ಮೊದಲೇ ಹಣದ ವ್ಯವಹಾರ ನಡೆಸಿ ನಂತರ ಪರೀಕ್ಷೆಗೆ ಒಳಪಡಿಸುತ್ತಿದ್ದರು. ಆಸ್ಪತ್ರೆಯಿಂದ ಕಾರಿನಲ್ಲಿ ಸ್ಕ್ಯಾನಿಂಗ್ ಮಷಿನ್ ತಂದು ಭ್ರೂಣ ಪತ್ತೆ ಮಾಡುತ್ತಿದ್ದರು ಎಂದು ಗೊತ್ತಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನರ್ಸ್ ಒಬ್ಬರ ಮುಂದಾಳತ್ವದಲ್ಲಿ ಅಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಆಕೆ ಬನ್ನೂರಿನ ಎಸ್‌.ಕೆ.ಆಸ್ಪತ್ರೆ ಉದ್ಯೋಗಿ. ದಾಳಿ ನಡೆದ ಜಾಗದಲ್ಲಿ ಎಷ್ಟು ದಿನಗಳಿಂದ ಭ್ರೂಣ ಪತ್ತೆ ನಡೆಯುತ್ತಿತ್ತು ಹಾಗೂ ಇಲ್ಲಿಯವರೆಗೆ ಎಷ್ಟು ಭ್ರೂಣ ಹತ್ಯೆ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

- ಡಾ.ಪಿ.ಸಿ. ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ, ಮೈಸೂರು.

- ಮೈಸೂರು ತಾಲೂಕಿನ ಹುನಗನಹಳ್ಳಿ ಹುಂಡಿ ಸಮೀಪದ ಐಷಾರಾಮಿ ಫಾರ್ಮ್‌ಹೌಸ್‌ನಲ್ಲಿ ದಂಧೆ

- ಭ್ರೂಣ ಗಂಡೋ? ಹೆಣ್ಣೋ? ಎಂಬುದನ್ನು ಹೇಳಲು 25 ಸಾವಿರ ರ. ಪಡೆಯುತ್ತಿದ್ದ ದಂಧೆಕೋರರು

- ಹೆಣ್ಣು ಭ್ರೂಣ ಪತ್ತೆಯಾದರೆ ಕೊಲ್ಲಲು 30 ಸಾವಿರ ರು. ವಸೂಲಿ. ಖಾಸಗಿ ಆಸ್ಪತ್ರೆ ನರ್ಸ್‌ ಭಾಗಿ

- ಖಾಸಗಿ ಆಸ್ಪತ್ರೆಯಿಂದ ಸ್ಕ್ಯಾನಿಂಗ್‌ ಯಂತ್ರ ತಂದು ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಗ್ಯಾಂಗ್‌

- 2 ತಿಂಗಳಿನಿಂದ ನಿಗಾ ವಹಿಸಿ, ಮಹಿಳೆಯೊಬ್ಬರನ್ನು ಕಳುಹಿಸಿ ಪತ್ತೆ ಹಚ್ಚಿದ ಸರ್ಕಾರಿ ಅಧಿಕಾರಿಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!