ತಮಿಳುನಾಡಿನಲ್ಲಿ ಕೃಷಿ ಹೊಂಡದಲ್ಲಿ ಈಜುಕಲಿಸಲು ಹೋದ ತಂದೆ ಮತ್ತು ಮಗ ದುರಂತವಾಗಿ ಸಾವನ್ನಪ್ಪಿದ್ದಾರೆ. ಮದ್ಯಪಾನ ಮಾಡಿ ಮಗನಿಗೆ ಈಜು ಕಲಿಸಲು ಹೋದಾಗ ಆಳಕ್ಕೆ ಇಳಿದು ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ.
ಆನೇಕಲ್ / ತಮಿಳುನಾಡು (ಮಾ.31): ಅಪ್ಪ ತನ್ನ ಮಗನಿಗೆ ಈಜು ಕಲಿಸಬೇಕೆಂದು ಜಮೀನಿನಲ್ಲಿ ಇದ್ದ ಕೃಷಿ ಹೊಂಡದಲ್ಲಿ ಕರೆದೊಯ್ದಿದ್ದಾನೆ. ಆದರೆ, ಈಜು ಕಲಿಸುವಾಗ ಕೃಷಿ ಹೊಂಡದ ಆಳಕ್ಕೆ ಹೋಗಿದ್ದು, ನಿಯಂತ್ರಣ ಸಿಗದೆ ಮಗನ ಸಮೇತ ಅಪ್ಪನೂ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಇದೀಗ ಅಪ್ಪ-ಮಗ ಇಬ್ಬರೂ ಕೃಷಿ ಹೊಂಡದಲ್ಲಿ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಅಪ್ಪನೆಂದರೆ ಆಕಾಶ, ಅಪ್ಪನೇ ಆಸರೆ ಎಂದೆಲ್ಲಾ ಹಾಡಿನಲ್ಲಿ ಹೊಗಳುತ್ತೇವೆ. ಆದರೆ, ಇಲ್ಲೊಬ್ಬ ಅಪ್ಪ ಮದ್ಯಪಾನ ಮಾಡಿ ತನ್ನ ಮಗನಿಗೆ ಆಳವಾದ ಕೃಷಿ ಹೊಂಡದಲ್ಲಿ ಈಜು ಕಲಿಸಲು ಮುಂದಾಗಿದ್ದಾನೆ. ಇದೀಗ ನೀರಿನಲ್ಲಿ ಮುಳುಗಿ ಇಬ್ಬರೂ ಸಾವಿಗೀಡಾಗಿದ್ದಾರೆ. ಈ ಘಟನೆ ಕರ್ನಾಟಕದ ಗಡಿಭಾಗ ತಮಿಳುನಾಡಿನ ಸೂಳಗಿರಿ ಸಮೀಪದ ನಂಜಾಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮುನಿರತ್ನಂ(32) ಹಾಗೂ ಸಂತೋಷ್ ಕುಮಾರ್(11) ಎಂದು ಗುರುತಿಸಲಾಗಿದೆ.
ಮುನಿರತ್ನಂ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಇನ್ನು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದೇ ಕುಟುಂಬ ಸಮೇತರಾಗಿ ಜಮೀನಿನ ಬಳಿ ಹೋಗಿದ್ದರು. ಈ ವೇಳೆ ಮುನಿರತ್ನಂ ಮದ್ಯಪಾನ ಮಾಡಿದ್ದು, ಮಗನಿಗೆ ಕೃಷಿ ಹೊಂಡದಲ್ಲಿ ಈಜು ಹೇಳಿಕೊಡುವುದಾಗಿ ಕರೆದುಕೊಂಡು ಹೋಗಿದ್ದಾನೆ. ಅಪ್ಪನೇ ಈಜು ಕಲಿಸುತ್ತಾರೆಂದರೆ ಯಾವ ಮಕ್ಕಳು ಬೇಡ ಎನ್ನುತ್ತಾರೆ ಹೇಳಿ. ಅಪ್ಪ ಕರೆದ ತಕ್ಷಣವೇ ಮಗನೂ ಕೂಡ ಅಂಗಿ ಬಿಚ್ಚಿ ನೀರಿಗೆ ಜಿಗಿದಿದ್ದಾನೆ. ಕೆಲವು ಕ್ಷಣಗಳ ಕಾಲ ಮಗನಿಗೆ ಈಜು ಕಲಿಸಿದ್ದಾನೆ. ಈಜು ಕಲಿಸುತ್ತಾ ಕೃಷಿ ಹೊಂಡದ ಆಳದ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅಪ್ಪನಿಗೆ ಹೊಂಡದ ತಳಭಾಗದಲ್ಲಿದ್ದ ಕೆಸರು ಕಾಲಿಗೆ ಅಂಟಿದ್ದು, ಮೇಲೆ ಬರಲು ಕಷ್ಟವಾಗಿದೆ. ಆಗ ಮಗನೂ ಕೂಡ ಮುಳುಗಲು ಆರಂಭಿಸಿದ್ದಾನೆ.
ಇದನ್ನೂ ಓದಿ: ನಾಳೆಯಿಂದ ಹಾಲು, ಮೊಸರು, ನೀರು, ಕರೆಂಟ್ ಎಲ್ಲಾನೂ ದುಬಾರಿ! ಏನ್ಮಾಡೋದು ಬಡಜನರ ಕಿಸೆಯಲ್ಲಿ ದುಡ್ಡೇ ಇಲ್ಲಾರೀ!
ಒಂದೆಡೆ ಅಪ್ಪನಿಗೆ ಮೇಲೆ ಬರಲಾಗುತ್ತಿಲ್ಲ, ಮತ್ತೊಂದೆಡೆ ಮಗ ಮುಳುಗುವ ಭಯದಲ್ಲಿ ಅಪ್ಪನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಇದರಿಂದ ಇಬ್ಬರೂ ಪ್ರಾಣ ಉಳಿಸಿಕೊಳ್ಳಲು ಪರದಾಡಿ ನೀರಿನಲ್ಲಿಯೇ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಇವರ ಮೃತ ದೇಹಗಳು ಹೊಂಡದಲ್ಲಿ ಇರುವುದನ್ನು ಕಂಡು ಸ್ಥಳೀಯ ಮುಳುಗು ತಜ್ಞರ ಸಹಾಯದಿಂದ ಮೃತ ದೇಹಗಳನ್ನು ಹೊರಗೆ ತೆಗೆಸಿದ್ದಾರೆ. ಸ್ಥಳೀಯ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಮೃತ ದೇಹಗಳನ್ನು ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಡ ಕುಟುಂಬಕ್ಕೆ ಆಸರೆಯಾಗಿದ್ದ ಅಪ್ಪ ಹಾಗೂ ವಂಶದ ಕುಡಿ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಪ್ರಬಲ ಭೂಕಂಪದ ಬೆನ್ನಲ್ಲೇ ಕೆಲ ತೀರ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ