ಕೇಂದ್ರದಿಂದ ರಾಜ್ಯದ ವಿಷಯದಲ್ಲಿ ಹಸ್ತಕ್ಷೇಪ: ಮಾಜಿ ಸಿಎಂ ಸಿದ್ದು ಕಿಡಿ

By Kannadaprabha NewsFirst Published May 13, 2020, 7:55 AM IST
Highlights

ಎಪಿಎಂಸಿ ಕಾಯ್ದೆ ಸುಗ್ರೀವಾಜ್ಞೆ ರೈತರಿಗೆ ಮಾರಕ: ಸಿದ್ದು| ಎಂಎನ್‌ಸಿಗಳಿಗೆ ಅನಕೂಲ ಮಾಡಿಕೊಡುವ ಸಂಚು ಇದು|  ಕೇಂದ್ರದಿಂದ ರಾಜ್ಯದ ವಿಷಯದಲ್ಲಿ ಹಸ್ತಕ್ಷೇಪ| ಕೇಂದ್ರ, ರಾಜ್ಯದ ಪ್ರಯತ್ನಕ್ಕೆ ಖಂಡನೆ

ಬೆಂಗಳೂರು(ಮೇ.13): ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದ್ದು ಇದು ರೈತರ ಪಾಲಿಗೆ ಮಾರಕವಾಗಲಿದೆ. ಈ ಕೂಡಲೇ ಇಂತಹ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಮೇ 5ರಂದು ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಎಪಿಎಂಸಿ ಕಾಯಿದೆ ತಿದ್ದುಪಡಿ ಕುರಿತು ಮಾದರಿ ಪತ್ರ ಕಳುಹಿಸುತ್ತೇವೆ. ಅದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತನ್ನಿ ಎಂದು ಹೇಳಿದೆ. ರಾಜ್ಯಗಳಿಗೆ ಇಂತಹ ನಿರ್ದೇಶನ ನೀಡುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಪಿಎಂಸಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ತಿರಸ್ಕಾರ!

‘ಇದು ಬಹುರಾಷ್ಟ್ರೀಯ ಕಂಪೆನಿಗಳಿಗೆ (ಎಂಎನ್‌ಸಿ) ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ನಡೆಸಿರುವ ಸಂಚು. ಆ ಕಂಪನಿಗಳಿಗೆ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಈ ಕೆಲಸಕ್ಕೆ ಕೈ ಹಾಕಿದೆ. ಕಾಯಿದೆ ತಿದ್ದುಪಡಿ ಮೂಲಕ ಬೆಳೆಗಳ ಬೆಲೆಗಳ ನಿಗದಿ ಮಾರುಕಟ್ಟೆಒಳಗೆ ತೀರ್ಮಾನ ಆಗುವುದಿಲ್ಲ. ಹೊರಗಡೆ ತೀರ್ಮಾನವಾಗಿ ರೈತರನ್ನು ಕೊಳ್ಳೆ ಹೊಡೆಯುತ್ತಾರೆ. ಹೀಗಾಗಿ ಇದು ರೈತರಿಗೆ ಮಾರಕ’ ಎಂದು ವಿರೋಧ ವ್ಯಕ್ತಪಡಿಸಿದರು.

‘2017ರಲ್ಲೇ ಜಾರಿಗೆ ಪ್ರಯತ್ನಿಸಿದ್ದರೂ ವಿರೋಧ ಬಂದಿದ್ದರಿಂದ ಸುಮ್ಮನಾದರು. ಇದೀಗ ಮತ್ತೆ ಎಂಎನ್‌ಸಿಗಳ ಒತ್ತಡಕ್ಕೆ ಮಣಿಯುತ್ತಿದ್ದಾರೆ. ರೈತರಿಗೆ ಸಂಬಂಧಿಸಿದ ಕಾನೂನು ಮಾಡುವಾಗ ವಿಧಾನಸಭೆಯಲ್ಲಿ, ಸಾರ್ವಜನಿಕವಾಗಿ ಚರ್ಚೆ ಆಗಬೇಕು. ಏಕಾಏಕಿ ಆದೇಶ ಹೊರಡಿಸಿದರೆ ಹೇಗೆ? ಸಂವಿಧಾನ ಪ್ರಕಾರ ಇದು ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯ. ನಿರ್ಧಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯಗಳ ವಿವೇಚನೆಗೆ ಬಿಡಬೇಕು. ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ಯತ್ನಿಸಿದರೆ ತೀವ್ರವಾಗಿ ವಿರೋಧಿಸುತ್ತೇವೆ’ ಎಂದು ಎಚ್ಚರಿಸಿದರು.

ಕೊರೋನಾಗೆ ಬಗ್ಗೆ ಭಯ ಪಡದ ಜನ: ವಾಹನಗಳ ಓಡಾಟಕ್ಕಿಲ್ಲ ಬ್ರೇಕ್‌

ರಾಜ್ಯದಿಂದ ರೈತರಿಗೆ ತೀವ್ರ ಅನ್ಯಾಯ:

ಕೊರೋನಾ ಅವಧಿಯಲ್ಲೂ ರಾಜ್ಯ ಸರ್ಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ತಾವು ಬೆಳೆದ ಬೆಳೆಗಳನ್ನು ಕೇಳುವವರಿಲ್ಲದೆ ರೈತ ಸಮುದಾಯ ಕಂಗಾಲಾಗಿದೆ. ಈ ಸಂದರ್ಭದಲ್ಲಿ ಕಾಯಿದೆಗೆ ತಿದ್ದುಪಡಿ ತರಲು ಹೊರಟಿರುವುದು ಅವರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇನ್ನು ರಾಜ್ಯ ಸರ್ಕಾರವು ರೈತರು ಬೆಳೆದ ತರಕಾರಿ, ಹೂ, ಭತ್ತ, ಜೋಳ, ಮೆಕ್ಕೆ ಜೋಳ, ಈರುಳ್ಳಿ, ತೊಗರಿ ಸೇರಿದಂತೆ ಆನೇಕ ಬೆಳೆಗಳನ್ನು ಖರೀದಿ ಮಾಡಲೇ ಇಲ್ಲ. ಹಾಪ್‌ಕಾಮ್ಸ್‌, ಎಪಿಎಂಸಿ ಮೂಲಕ ಖರೀದಿ ಮಾಡಿ ರೈತರಿಗೆ ಮಾರುಕಟ್ಟೆಎಪಿಎಂಸಿ ಮೂಲಕ ಖರೀದಿ ಮಾಡಿ, ರೈತರಿಗೆ ಮಾರುಕಟ್ಟೆವ್ಯವಸ್ಥೆ ಕಲ್ಪಿಸಿ ಎಂದರೆ ಕೇಳಲಿಲ್ಲ. ಬಹುತೇಕ ರೈತರು ಖರೀದಿ ಮಾಡುವವರಿಲ್ಲದೆ ತಾವು ಬೆಳೆದ ಬೆಳೆಗಳನ್ನು ಬೀದಿಗೆ ಸುರಿಯುತ್ತಿದ್ದಾರೆ ಎಂದರು.

click me!