ಕೃಷಿ ಕ್ಷೇತ್ರದಲ್ಲಿ ರೈತರು ಹೇಗೆ ಲಾಭ ಗಳಿಸಬೇಕೆಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ಕೊಟ್ಟಿದ್ದಾರೆ. ಅದು ಈ ಕೆಳಗಿನಂತಿದೆ ನೋಡಿ.
ದಾವಣಗೆರೆ, (ಸೆ.12): ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ವ್ಯವಸಾಯ ಮಾಡಿದರೆ ಅತ್ಯುತ್ತಮ ಲಾಭ ಗಳಿಸಬಹುದು. ಈ ನಿಟ್ಟಿನಲ್ಲಿ ರೈತರು ಯೋಚನೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಹೊನ್ನಾಳಿ ವಿಧಾನಸಭೆ ಕ್ಷೇತ್ರದಲ್ಲಿ ಮುಖ್ಯಮುಂತ್ರಿ ಗೋವಿಂದ ಕಾರಜೋಳ ಅವರ ಜತೆಗೂಡಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಲ್ಲರಿಗೂ ಗೊತ್ತಿರುವಂತೆ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ತಂತ್ರಜ್ಞಾನ ಆಭಿವೃದ್ಧಿಯಾಗುತ್ತಿದೆ. ಈ ತಂತ್ರಜ್ಞಾನವನ್ನು ಕೃಷಿ ಉತ್ಪಾದನೆಗೆ ಅನ್ವಯ ಮಾಡಿಕೊಂಡರೆ ಉತ್ತಮ ಲಾಭ ಗಳಿಸಲು ಸಾಧ್ಯವಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಅಭಿವೃದ್ಧಿಯ ವೇಗ ಹೆಚ್ಚಾಗಿದ್ದು, ಹೊನ್ನಾಲಿ ಕ್ಷೇತ್ರದಲ್ಲಿಯೇ ಅದನ್ನು ಗಮನಿಸಬಹುದು ಎಂದು ಉಪ ಮುಖ್ಯಮಂತ್ರಿ, ಇನ್ನು ಮುಂದೆ ಯಾವುದೇ ಯೋಜನೆ ತೆವಳುತ್ತಾ ಸಾಗುವುದಿಲ್ಲ. ಕಾಲಮಿತಿಯೊಳಗೆ ಎಲ್ಲವೂ ಕಾರ್ಯಗತವಾಗುತ್ತವೆ ಎಂದು ತಿಳಿಸಿದರು.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಆ ದಿಕ್ಕಿನಲ್ಲಿ ಎಲ್ಲ ಸಚಿವರು, ಶಾಸಕರು, ಅಧಿಕಾರಿಗಳು ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಿಕ್ಕಿನಲ್ಲಿಯೇ ಹೊನ್ನಾಳಿ ವಿಧಾನಸಭೆ ಕ್ಷೇತ್ರದಲ್ಲಿಯೂ ಕೆಲಸಗಳು ನಡೆಯುತ್ತಿವೆ ಎಂದು ಡಿಸಿಎಂ ಹೇಳಿದರು.
ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಭೈರತಿ ಬಸವರಾಜು, ಸಂಸದ ಸಿದ್ದೇಶ್ವರ್, ದೀಪಾ ಜಗದೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.