ದಿಢೀರನೇ ರಾಜ್ಯ ಸರ್ಕಾರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆಯ ಸಮಯ ಕಡಿತ ಮಾಡಿದ್ದಲ್ಲದೇ ಸಮಯವನ್ನು ಬದಲಾವಣೆ ಮಾಡಿರುವುದರಿಂದ ರೈತರು ಬೆಳೆ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಅ.19): ದಿಢೀರನೇ ರಾಜ್ಯ ಸರ್ಕಾರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆಯ ಸಮಯ ಕಡಿತ ಮಾಡಿದ್ದಲ್ಲದೇ ಸಮಯವನ್ನು ಬದಲಾವಣೆ ಮಾಡಿರುವುದರಿಂದ ರೈತರು ಬೆಳೆ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಮಧ್ಯರಾತ್ರಿಯಿಂದ ಪಂಪ್‌ಸೆಟ್ ವಿದ್ಯುತ್ ಪೂರೈಕೆಯ ಆದೇಶ ಮಾಡುತ್ತಿದ್ದಂತೆ ರೈತ ಸಮುದಾಯ ಆಕ್ರೋಶ ವ್ಯಕ್ತಪಡಿಸಿ, ಅಲ್ಲಲ್ಲಿ ಪ್ರತಿಭಟನೆ ಮಾಡಿದ್ದರಿಂದ ಕೊಂಚ ಬದಲಾವಣೆ ಮಾಡಿ, ಈಗ ಬೆಳಗಿನ ಜಾವ 3-4 ಗಂಟೆಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ, ಅನಿವಾರ್ಯವಾಗಿ ರೈತರು ತಮ್ಮ ಬೆಳೆ ಕಾಪಾಡಿಕೊಳ್ಳಲು ಕತ್ತಲಲ್ಲಿಯೇ ನೀರು ಕಟ್ಟಲು ಹೋಗುತ್ತಿದ್ದಾರೆ.
undefined
ಈ ಹಿಂದೆ 4ರಿಂದ 11 ಗಂಟೆಯವರೆಗೂ ವಿದ್ಯುತ್ ಪೂರೈಕೆಯಾಗುತ್ತಿತ್ತು. ಆದರೆ, ಈಗ 4 ಗಂಟೆಯಿಂದ ಕೇವಲ 9 ಗಂಟೆಯವರೆಗೂ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ನಸುಕಿನಜಾವ ಮೂರು ಗಂಟೆಗೆ ಎದ್ದು ಹೋಗಿ ರೈತರು ಹೊಲದಲ್ಲಿ ಕರೆಂಟ್ ಕಾಯುತ್ತಾ ಕತ್ತಲಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಬಳಿಕ ವಿದ್ಯುತ್ ಬಂದ ಮೇಲೆ ನೀರು ಕಟ್ಟುತ್ತಿದ್ದಾರೆ. ಕೊಪ್ಪಳ ತಾಲೂಕಿನ ಯತ್ನಟ್ಟಿ ಗ್ರಾಮದ ರುದ್ರಪ್ಪ ತಡರಾತ್ರಿಯಲ್ಲಿ ವಿದ್ಯುತ್ ಬಂದಿದ್ದರಿಂದ ಅಷ್ಟೊತ್ತಿನಲ್ಲೇ ಹೋಗಿ ನೀರು ಕಟ್ಟುತ್ತಿರುವ ದೃಶ್ಯ ಕಂಡು ಬಂದಿತು.
ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ 15000 ಕೋಟಿ ಹೂಡಿಕೆ: ಸಚಿವ ಎಂ.ಬಿ.ಪಾಟೀಲ್
ಬಳಿಕ ಮಾತನಾಡಿದ ಅವರು, ಇಂಥ ಸ್ಥಿತಿ ಯಾರಿಗೂ ಬರಬಾರದು ಬಿಡ್ರಿ ಎನ್ನುತ್ತಾರೆ. ಕತ್ತಲಲ್ಲಿಯಾದರೂ ಬಂದು ನೀರು ಕಟ್ಟಿಕೊಳ್ಳುತ್ತೇವೆ, ಬಿರುಬಿಸಿಲಿನಲ್ಲಿಯಾದರೂ ನೀರು ಕಟ್ಟಿಕೊಳ್ಳುತ್ತೇವೆ. ಆದರೆ, ಕೇವಲ ಐದು ಗಂಟೆಯಲ್ಲಿ ಹೇಗೆ ಬೆಳೆ ಉಳಿಸಿಕೊಳ್ಳುವುದು? ಅದು ಆಗಾಗ ಲೋಡ್ ಶೆಡ್ಡಿಂಗ್ ಆಗುವುದರಿಂದ ನಾಲ್ಕು ಗಂಟೆಯೂ ಸಮರ್ಪಕವಾಗಿ ವಿದ್ಯುತ್ ಇರುವುದಿಲ್ಲ ಎನ್ನುತ್ತಾರೆ.
ಇದು, ಕೇವಲ ಒಬ್ಬ ರೈತನ ಗೋಳು ಅಲ್ಲ. ವಿದ್ಯುತ್ ಸ್ಥಗಿತ ಮಾಡಿದ್ದರಿಂದ ರೈತರು ರೋಸಿ ಹೋಗಿದ್ದಾರೆ. ಹೇಗಾದರೂ ಹಾಕಿದ ಬೆಳೆ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಆದರೂ ನೀರು ಸಾಲದೇ ಬೆಳಗಳು ಒಣಗುತ್ತಿವೆ. ಈಗೀಗಂತೂ ವಿದ್ಯುತ್ ಅವಧಿ ಕಡಿತ ಮಾಡಿದ ಮೇಲೆ ಇನ್ನಷ್ಟು ಸಮಸ್ಯೆಯಾಗುವುದಂತೂ ಸತ್ಯ ಎನ್ನುತ್ತಾರೆ ಬೇಳೂರು ಗ್ರಾಮದ ಗ್ಯಾನಪ್ಪ. ಹಾಕಿದ ನಾಲ್ಕು ಎಕರೆ ಈರುಳ್ಳಿಗೆ ನೀರು ತುರ್ತಾಗಿ ಬೇಕು. ಆದರೆ, ಈ ಕಡಿಮೆ ಅವಧಿ ವಿದ್ಯುತ್‌ನಲ್ಲಿ ನೀರು ಪೂರೈಕೆ ಮಾಡಲು ಆಗುತ್ತಿಲ್ಲ. ಎನ್ನುತ್ತಾರೆ.
ಜಿಲ್ಲಾದ್ಯಂತ ಸುಮಾರು 66 ಸಾವಿರ ಐಪಿಸೆಟ್‌ಗಳಿದ್ದು, ಪಂಪ್‌ಸೆಟ್ ಆಧಾರಿತ ನೀರಾವರಿ ಮಾಡುವ ರೈತರ ಸಂಖ್ಯೆಯೇ 22 ಸಾವಿರ ಇದೆ. ಈ ವರ್ಷ ಬರ ಇರುವುದರಿಂದ ತೀವ್ರ ಸಮಸ್ಯೆಯಾಗಿದೆ. ಈಗ ವಿದ್ಯುತ್ ಸಹ ಕಡಿತ ಮಾಡಿದರೆ ಜೀವನ ಮಾಡುವುದಾದರೂ ಹೇಗೆ? ಹಾಕಿದ ಬೆಳೆಗಳಿಗಾದರೂ ಈ ಮೊದಲಿನಂತೆ ವಿದ್ಯುತ್ ಪೂರೈಕೆ ಮಾಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ನಾವು ಏಳು ಗಂಟೆ ವಿದ್ಯುತ್ ಇರುತ್ತದೆ ಎಂದು ಅದಕ್ಕೆ ಅನುಗುಣವಾಗಿ ಬೆಳೆ ಹಾಕಿಕೊಂಡಿದ್ದೇವೆ. ಈಗ ದಿಢೀರ್ ವಿದ್ಯುತ್ ಕಡಿತ ಮಾಡಿದರೆ ಹೇಗೆ ಎನ್ನುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ರೈತರು.
ಕರೆಂಟ್ ಸಮಸ್ಯೆಯಿಂದ ಜೀನ್ಸ್ ಉದ್ಯಮ ಸಂಕಷ್ಟ: ಅತಂತ್ರ ಸ್ಥಿತಿಯಲ್ಲಿ ಕಾರ್ಮಿಕರ ಬದುಕು!
ನಮನ್ನು ದೇವರೇ ಕಾಪಾಡಬೇಕು. ಹಾಕಿದ ಬೆಳೆಯನ್ನು ಈಗ ಕೊಡುತ್ತಿರುವ ಐದು ಗಂಟೆಯ ವಿದ್ಯುತ್‌ನಲ್ಲಿ ಕಾಪಾಡಿಕೊಳ್ಳಲು ಸಾಧ್ಯವೇ ಇಲ್ಲ.
-ಸಿದ್ದಪ್ಪ, ಬೇಳೂರು ರೈತ