ಮೋದಿ ಪ್ರಧಾನಿಯಾದ ಮೇಲೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದರೂ ಆ ದೇಶ ಇನ್ನೂ ಪಾಠ ಕಲಿಯದೆ ಚೀನಾ ದೇಶದ ಜೊತೆ ಸೇರಿ ಎರಡು ದೇಶಗಳು ಕುತಂತ್ರ ಬುದ್ಧಿ ಪ್ರದರ್ಶಿಸುತ್ತಿವೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಹೊನ್ನಾಳಿ(ಜು.27): ದಿ. ಪ್ರಧಾನಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಭಾರತ ಕಾರ್ಗಿಲ್ ಯುದ್ಧದಲ್ಲಿ ಜಯಭೇರಿ ಬಾರಿಸಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ವಿಜಯೋತ್ಸವದ ದಿನವಾದ ಇಂದು ನಾವೆಲ್ಲರೂ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯೊಂದಿಗೆ ವೀರ ಯೋಧರ ಸ್ಮರಣೆ ಮಾಡಬೇಕು ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.
ಭಾನುವಾರ ನ್ಯಾಮತಿ ತಾಲೂಕಿನ ಕುದುರೆಕೊಂಡ, ಯರಗನಾಳ, ರಾಮೇಶ್ವರ, ಆರುಂಡಿ, ಕೆಂಚಿಕೊಪ್ಪ ಸೊರಟೂರು, ಮಾದನಬಾವಿ, ದಾನಿಹಳ್ಳಿ, ಎಚ್.ಕಡದಕಟ್ಟೆಸೇರಿದಂತೆ 19 ಗ್ರಾಮಗಳಲ್ಲಿ ಒಟ್ಟು 5.67 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೋದಿ ಪ್ರಧಾನಿಯಾದ ಮೇಲೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದರೂ ಆ ದೇಶ ಇನ್ನೂ ಪಾಠ ಕಲಿಯದೆ ಚೀನಾ ದೇಶದ ಜೊತೆ ಸೇರಿ ಎರಡು ದೇಶಗಳು ಕುತಂತ್ರ ಬುದ್ಧಿ ಪ್ರದರ್ಶಿಸುತ್ತಿವೆ. ಕೊರೋನಾ ವೈರಸ್‌ನಿಂದಾಗಿ ಚೀನಾ ಜಗತ್ತಿನ ಬಹುತೇಕ ದೇಶಗಳ ದೃಷ್ಟಿಯಲ್ಲಿ ಅಪರಾಧಿ ಸ್ಥಾನದಲ್ಲಿದೆ. ಭಾರತ ಒಂದು ಪುಣ್ಯಭೂಮಿಯಾಗಿದ್ದು ರಾಜತಾಂತ್ರಿಕವಾಗಿ ಚಾಣಕ್ಯರಾಗಿರುವ ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ಭೂ ಸುಧಾರಣಾ ಕಾಯ್ದೆ: ಆಹಾರ ಭದ್ರತೆಗೆ ಪೆಟ್ಟು!
ಕೋವಿಡ್ ಜಾಗೃತಿ ಮೂಡಿಸುವುದರೊಂದಿಗೆ ಅವಳಿ ತಾಲೂಕುಗಳಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿ ಸಾಧಿಸುವಲ್ಲಿ ನಾನು ಯಶಸ್ವಿಯಾಗಿದ್ದೇನೆ ವಾರದ ನಾಲ್ಕು ದಿನಗಳ ಕಾಲ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಮ್ಮಿಕೊಳ್ಳುವ ಜತೆಗೆ ಜನತೆಗೆ ಮಾಸ್ಕ್ ವಿತರಿಸಿ ಕೊರೋನಾ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಹೇಳಿದರು. ಕೊರೋನಾ ದೇಶಕ್ಕೆ ಕಾಲಿಟ್ಟದಿನದಿಂದ ನಾನು ಕಡು ಬಡವರಿಗೆ ಆಹಾರದ ಕಿಟ್ , ಮಾಸ್ಕ್ ವಿತರಣೆಯನ್ನು ಮಾಡುತ್ತಾ ಬಂದಿದ್ದೇನೆ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಮುಂದೆ ಸಾಗಬೇಕಿದೆ ಎಂದು ನುಡಿದರು.
ಸಾರ್ಥಕ ಸಾಧನೆಯ ವರ್ಷ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ನಾಡಿನ ಜನತೆ ತೃಪ್ತಿಪಡುವಂತ ಪಾರದರ್ಶಕ ಆಡಳಿತ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ. ನೆರೆ ಹಾಗೂ ಕೊರೋನಾ ಸಂಕಷ್ಟಕಾಲದಲ್ಲಿ ಆತಂಕ ಪಡದೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿರುವ ಸಾಲಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲಿಗರಾಗಿ ನಿಲ್ಲುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ದೀಪಾಜಗದೀಶ್, ಸದಸ್ಯ ಉಮಾರಮೇಶ್, ಎಂ.ಆರ್. ಮಹೇಶ್, ನ್ಯಾಮತಿ ತಾಪಂ ಅಧ್ಯಕ್ಷ ಎಸ್.ಪಿ.ರವಿಕುಮಾರ್, ಉಪಾಧ್ಯಕ್ಷ ಡಿ.ಮರಿಕನ್ನಪ್ಪ, ಸದಸ್ಯ ಸಿದ್ದಲಿಂಗಪ್ಪ ಗ್ರಾಮಸ್ಥರು ಉಪಸ್ಥಿತರಿದ್ದರು.