ಭೂ ಸುಧಾರಣಾ ಕಾಯ್ದೆ: ಆಹಾರ ಭದ್ರತೆಗೆ ಪೆಟ್ಟು| ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ!’ ಅಭಿಯಾನದಲ್ಲಿ ಪ್ರಕಾಶ್ ಕಮ್ಮರಡಿ ಆತಂಕ
ಬೆಂಗಳೂರು(ಜು.27): ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಈ ನೆಲದ ಸಂಸ್ಕೃತಿ, ಅರ್ಥಪೂರ್ಣ ಬದುಕು ವಿನಾಶವಾಗುವ ಜತೆಗೆ ಆಹಾರ ಸ್ವಾವಲಂಬನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಭಾನುವಾರ ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ!’ ಅಭಿಯಾನ ಸಂಬಂಧ ರಾಗಿ ಕಣ ಸಂತೆ ಆಯೋಜಿಸಿದ್ದ ಸಂವಾದದಲ್ಲಿ ‘ಭೂ ಸುಧಾರಣೆ ಕಾಯ್ದೆ 1961 -ತಿದ್ದುಪಡಿ’ಯಿಂದ ಆಗುವ ಪರಿಣಾಮಗಳು, ಕೃಷಿಯೇತರರಿಗೆ ಆಗುವ ಅನುಕೂಲಗಳು, ಹೋರಾಟದ ರೂಪುರೇಷೆಗಳ ಕುರಿತಂತೆ ಚರ್ಚೆ ನಡೆಯಿತು.
ಕೃಷಿ ಸಂಸ್ಕೃತಿ ನಾಶವಾಗುವ ಅಪಾಯ ಕಾದಿದೆ..!
ಈ ವೇಳೆ ಮಾತನಾಡಿದ ಅವರು, ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಇದು ರೈತರ ಆದಾಯ, ದೇಶದ ಆಹಾರ ಭದ್ರತೆಗೆ ಮಾರಕವಾಗಲಿದೆ. ನಮ್ಮಲ್ಲಿ ಶೇ.61ರಷ್ಟುಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಉಳ್ಳವರು, ಭೂ ಮಾಫಿಯಾ ಒತ್ತಡಗಳನ್ನು ತಡೆಯುವ ಶಕ್ತಿ ಬಡ ರೈತರಿಗಿಲ್ಲ. ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ ಸುಮಾರು 50 ಲಕ್ಷ ಎಕರೆ ಆಹಾರ ಉತ್ಪಾದನೆ ಕೈಗೊಳ್ಳುವ ಅಮೂಲ್ಯ ಭೂಮಿ ರೈತರ ಕೈತಪ್ಪಿದೆ. ಈಗ ಈ ಕಾಯ್ದೆ ತಿದ್ದುಪಡಿಯಿಂದ ಆಹಾರ ಸ್ವಾವಲಂಬನೆಗೆ ಪೆಟ್ಟು ಬೀಳಲಿದೆ ಎಂದು ಡಾ.ಪ್ರಕಾಶ್ ಕಮ್ಮರಡಿ ಹೇಳಿದರು.
ರೈತರು ಭೂ ವಂಚಿತರಾಗಲಿದ್ದಾರೆ:
ಲೇಖಕಿ ಹಾಗೂ ಹೋರಾಟಗಾರ್ತಿ ವಿ.ಗಾಯತ್ರಿ ಮಾತನಾಡಿ, ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ಕ್ಕೆ ತಿದ್ದುಪಡಿ ತಂದು ಕಲಂ 79 (ಎ,ಬಿ,ಸಿ) ತೆಗೆದು ಹಾಕಿರುವುದು ದುರಂತ. ಯಾವುದೇ ಭೂಮಿ ಬರಡಲ್ಲ. ಎಲ್ಲವೂ ಉತ್ಪಾದನಾ ಶೀಲವಾದುದು. ಸರ್ಕಾರದ ನೀತಿಯಿಂದಾಗಿ ರೈತರು ಭೂ ವಂಚಿತರಾಗಲಿದ್ದಾರೆ. ಸರ್ಕಾರ ರೈತರಿಗೆ ಬದುಕಲು ದಾರಿ ತೋರಿಸಬೇಕೆ ಹೊರತು, ಆ ಭೂ ವಂಚಿತರಾಗಿಸುವುದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭೂಸುಧಾರಣೆ, ಎಪಿಎಂಸಿ ಕಾಯ್ದೆ ವಿರೋಧಿಸಿ ಶಿವಮೊಗ್ಗದಲ್ಲಿ ರೈತರ ಪ್ರತಿಭಟನೆ
ಈವರೆಗೆ ಕಾಯ್ದೆ ತಿದ್ದುಪಡಿ ಸಂಬಂಧ ಸಂಪೂರ್ಣ ವಿರೋಧಾಭಾಸ ಹೇಳಿಕೆಗಳನ್ನು ಸರ್ಕಾರ ನೀಡುತ್ತಾ ಬಂದಿದೆ. ನೂರಕ್ಕೆ ಮುಕ್ಕಾಲು ಭಾಗ ಮಳೆಯಾಶ್ರಿತ ರೈತರಿದ್ದಾರೆ. ಕಪ್ಪು ಹಣವನ್ನು ಬಿಳಿಯಾಗಿಸುವ ಹುನ್ನಾರ ಸರ್ಕಾರದ ನೀತಿಯಲ್ಲಿ ಅಡಗಿದೆ. ಕೆಲ ರೈತರು ಭೂಮಿ ಮಾರಾಟ ಮಾಡುವ ಇಚ್ಛೆಯುಳ್ಳವರಾಗಿರಬಹುದು. ಆದರೆ, ಬಹುಪಾಲು ರೈತರು ಇರುವ ಭೂಮಿಯನ್ನು ಮಾರುವ ಬದಲು ಕೊಳ್ಳುವ ತುರ್ತಿನಲ್ಲಿದ್ದಾರೆ. ಇಂಥ ರೈತರ ಕನಸುಗಳು ಸರ್ಕಾರದ ನಿರ್ಧಾರದಿಂದ ನುಚ್ಚುನೂರಾಗಲಿದೆ ಎಂದರು.
ರೈತರ ಭೂಮಿಯನ್ನು ಮೊದಲು ರೈತರೇ ಖರೀದಿಸುವಂತಾಗಬೇಕು. ನಮ್ಮ ಭೂಮಿ ಇತರರ ಪಾಲಾಗಬಾರದು ಎಂಬ ಉದ್ದೇಶದಿಂದ ಈ ಅಭಿಯಾನ ರೂಪಿಸಲಾಗಿದೆ. ಈ ಕಾಯ್ದೆ ಕುರಿತಂತೆ ಸಾಮಾಜಿಕ ಜಾಲತಾಣಗಳು, ವಾಟ್ಸಾಪ್, ಟ್ವಿಟರ್ ಮೂಲಕವೂ ಜಾಗೃತಿ ಮೂಡಿಸಲಾಗುವುದು. ಪ್ರತಿ ಗ್ರಾಮ ಗ್ರಾಮಗಳಲ್ಲಿ ರೈತರನ್ನು ಒಗ್ಗೂಡಿಸಿ ಹೋರಾಟ ರೂಪಿಸಲಾಗುವುದು ಎಂದರು.
ಆ.15ರಂದು ಕರಾಳ ದಿನ ಆಚರಣೆ:
ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಈಗಾಗಲೇ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಹಲವೆಡೆ ಭೂ ಖರೀದಿಗೆ ಉದ್ಯಮಿಗಳು ಆಸಕ್ತಿ ತೋರುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಯೂ ಹೆಚ್ಚುತ್ತಿದೆ. ನಾವು ಸಹ ಆ.15ರಂದು ಕರಾಳ ದಿನ ಆಚರಿಸಲು ಸಜ್ಜಾಗುತ್ತಿದ್ದೇವೆ. ರೈತ ಒಕ್ಕೂಟಗಳು, ವಿವಿಧ ಪ್ರಗತಿಪರ ಸಂಘಟನೆಗಳು ಜನರಲ್ಲಿ ಈ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಬೇಕು. ಎಲ್ಲಾ ಸಂಘಟನೆಗಳ ಒಗ್ಗಟ್ಟಿನಿಂದ ಜಿಲ್ಲಾವಾರು ಹೋರಾಟಕ್ಕೆ ಸಜ್ಜಾಗಬೇಕು. ಹಾಗಾದರೆ ಮಾತ್ರ ಸರ್ಕಾರದ ಕಣ್ಣು ತೆರೆಸುವುದು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.