
ಮುಧೋಳ : ಎಕ್ಸಿಸ್ ಬ್ಯಾಂಕ್ ರೈತರಿಗೆ ಕೋಲ್ಕತಾ ಕೋರ್ಟ್‌ನಿಂದ ಬಂಧನ ವಾರಂಟ್ ಹೊರಡಿಸಿರುವ ವಿವಾದ ಹಸಿರಿರುವಾಗಲೇ, ಇದೀಗ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಇಂಡಿಯನ್ ಬ್ಯಾಂಕ್ ಸಾಲ ಪಡೆದಿದ್ದ ರೈತನೊಬ್ಬನಿಗೆ ಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ರವಿಶಂಕರ ಕುಸುಗಲ್ ಎಂಬ ರೈತನಿಗೆ ಬೆಂಗಳೂರಿನಲ್ಲಿರುವ ಸಾಲ ವಸೂಲಾತಿ ಕೋರ್ಟ್ ನಿಂದ ನ.18ರಂದು ಸಮನ್ಸ್ ನೀಡಲಾಗಿದೆ.
ಕಂಗೆಟ್ಟಿರುವ ರೈತ ರವಿಶಂಕರ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸಮನ್ಸ್‌ನಿಂದಾಗಿ ತಾವು ಮಾನಸಿಕವಾಗಿ ತೊಂದರೆ ಅನುಭವಿಸುವಂತಾಗಿದ್ದು, ಮುಖ್ಯಮಂತ್ರಿಗಳಾಗಲಿ, ಜಿಲ್ಲಾಧಿಕಾರಿಗಳಾಗಲಿ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.
ರೈತ ರವಿಶಂಕರ 2010ರಲ್ಲಿ ಬೆಳೆಸಾಲ ಮತ್ತು ನೀರಾವರಿಗಾಗಿ ಗ್ರಾಮದ ಇಂಡಿಯನ್ ಬ್ಯಾಂಕ್‌ನಲ್ಲಿ .16.62 ಲಕ್ಷ ಸಾಲ ಪಡೆದಿದ್ದರು. ನಂತರ 2015ರವರೆಗೆ .8 ರಿಂದ 10 ಲಕ್ಷವರೆಗೆ ಬಡ್ಡಿ ಸಮೇತ ಸಾಲವನ್ನು ಮರುಪಾವತಿ ಮಾಡಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಬರಗಾಲ ಮತ್ತು ಕಾರ್ಖಾನೆಯಿಂದ ಕಬ್ಬಿನ ಬೆಲೆ ಪಾವತಿಯಾಗದ ಕಾರಣ ಮರುಪಾವತಿ ಮಾಡಲು ಸಾಧ್ಯವಾಗಿಲ್ಲ.
ಮೂರು ತಿಂಗಳ ಹಿಂದೆ ರೈತ ರವಿಶಂಕರ್‌ಗೆ ಇದೇ ರೀತಿ ಸಮನ್ಸ್ ಬಂದಾಗ, ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದರು. ಸಿಎಂ ಕಚೇರಿಯಿಂದಲೂ ಮಾರುತ್ತರ ಕೂಡ ಬಂದಿದ್ದು ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ದೊರೆತಿತ್ತು. ಆದರೆ ಇದೀಗ ಮತ್ತೆ ಕೋರ್ಟ್ ಸಮನ್ಸ್ ಬಂದಿರುವುದು ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ