
ಬೆಂಗಳೂರು (ಮೇ.30) ಕರ್ನಾಟಕ ರಾಜ್ಯ ರಾಜಕಾರಣ ಕಳೆದ ಕೆಲ ದಿನಗಳಿಂದ ದೇಶದಲ್ಲಿ ಸದ್ದು ಮಾಡಿದೆ. ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲೆಡೆ ಸಂಭ್ರಮಾಚರಣೆ ಜೋರಾಗಿದೆ. ಶಾಸಕಾಂಗಪಕ್ಷದ ಸಭೆ ಬಳಿಕ ನಾಯಕರ ಹೊರಬಂದ ಬೆನ್ನಲ್ಲೇ ಅಭಿಮಾನಿಗಳು ಡಿಕೆ, ಡಿಕೆ ಎಂದು ಘೋಷಣೆ ಕೂಗಿದ್ದಾರೆ. ರಾಜ್ಯದ ಹಲವೆಡೆ ಡಿಕೆ ಶಿವಕುಮಾರ್ ಸಿಎಂ ಘೋಷಣೆ ಬೆನ್ನಲ್ಲೇ ಬೈಕ್ ರ್ಯಾಲಿ ಸೇರಿದಂತೆ ಹಲವು ರೀತಿಯ ಸಂಭ್ರಮಾಚರಣೆ ಶುರುವಾಗಿದೆ.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನಾಯಕರು ಸೇರಿದಂತೆ ಡಿಕೆ ಶಿವಕುಮಾರ್ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ನಡೆಸಿದ್ದಾರೆ. ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ವಿಜಯೋತ್ಸವ ನಡೆದಿದೆ. ಡಿಕೆಶಿ ಫ್ಲೆಕ್ಸ್ ಗಳಿಗೆ ಕ್ಷೀರಾಭಿಷೇಕ , ಡಿಕೆಶಿ ಫೋಟೋಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಲಾಗಿದೆ. ಇನ್ನು ಪಟಾಕಿ ಸಿಡಿಸಿ, ಡಿಕೆ ಶಿವಕುಮಾರ್ ಪರ ಜಯಘೋಷಗಳನ್ನು ಹಾಕಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್ ಆಡಳಿತದಲ್ಲಿ ಕರ್ನಾಟಕ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುತ್ತಿರುವ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಡಿಕೆ ಶಿವಕುಮಾರ್ ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ. ಬಳ್ಳಾರಿಯಲ್ಲಿ ಬೈಕ್ ರ್ಯಾಲಿ ನಡೆಸಿದ್ದಾರೆ. ಇದೇ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಬೆಂಗಳೂರಿನ ವಿಧಾನಸ ಸೌಧ ಮುಂಭಾಗ, ರಾಜಭವನ ಮುಂಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ಡಿಕೆ ಶಿವಕುಮಾರ್ ಪರ ಘೋಷಣೆಗಳು ಮೊಳಗುತ್ತಿದೆ. ಇತ್ತ ಡಿಕೆ ಶಿವಕುಮಾರ್ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೇಟಿಯಾಗಿದ್ದಾರೆ. ಬಳಿಕ ಸರ್ಕಾರ ರಚನೆಗೆ ಅನುಮತಿ ಕೋರಿ ಪತ್ರ ನೀಡಿದ್ದಾರೆ. ಸೋಮವಾರ ಡಿಕೆ ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣಚವನ ಸ್ವೀಕರಿಸಲಿದ್ದಾರೆ. ಡಿಕೆ ಶಿವಕುಮಾರ್ ಜೊತೆ 10 ಮಂತ್ರಿಗಳು ಪ್ರಮಾಣಚವನ ಸ್ವೀಕರಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ಸಚಿವ ಸಂಪುಟ ಸರ್ಕಸ್ ನಡೆಯುತ್ತಿದೆ. ಡಿಕೆ ಶಿವಕುಮಾರ್ ಈಗಾಗಲೇ 10 ಶಾಸಕರ ಹೆಸರನ್ನು ಹೈಕಮಾಂಡ್‌ಗೆ ನೀಡಿದ್ದಾರೆ ಎನ್ನಲಾಗಿದೆ. ಮೊದಲ ಹಂತದಲ್ಲಿ 10 ಶಾಸಕರು ಪ್ರಮಾಣಚನ ಸ್ವೀಕರಿಸಲಿದ್ದಾರೆ. ರಾಜ್ಯಸಭೆ ಚುನಾವಣೆ ಬಳಿಕ ಎರಡನೇ ಹಂತದ ಸಂಪುಟ ವಿಸ್ತರಣೆಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ