ನರೇಗಾ: ಕುಟುಂಬದ ವೈಯಕ್ತಿಕ ಕಾಮಗಾರಿ ಮಿತಿ ಡಬಲ್‌!

By Kannadaprabha News  |  First Published Oct 26, 2023, 7:47 AM IST

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳಾ ಪ್ರಧಾನ ಕುಟುಂಬಗಳು, ಅಂಗವಿಕಲ ಕುಟುಂಬಗಳು, ಭೂ-ಸುಧಾರಣಾ ಫಲಾನುಭವಿಗಳು, ವಸತಿ ಯೋಜನೆಗಳ ಫಲಾನುಭವಿಗಳು, ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು ಈ ಯೋಜನೆಗೆ ಅರ್ಹರು.


ಲಿಂಗರಾಜು ಕೋರಾ

ಬೆಂಗಳೂರು(ಅ.26): ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರತಿ ನೋಂದಾಯಿತ ಕುಟುಂಬಗಳು ಪಡೆಯಬಹುದಾದ ವೈಯಕ್ತಿಕ ಕಾಮಗಾರಿಗಳ ಗರಿಷ್ಠ ಮೊತ್ತವನ್ನು ದ್ವಿಗುಣಗೊಳಿಸಿ ಸರ್ಕಾರ ಆದೇಶಿಸಿದೆ. ಈವರೆಗೆ ಇದ್ದ ಕಾಮಗಾರಿ ಮಿತಿ ಗರಿಷ್ಠ 2.5 ಲಕ್ಷ ರುಗಳನ್ನು ಐದು ಲಕ್ಷ ರು.ಗೆ ಹೆಚ್ಚಿಸಲಾಗಿದೆ. ಇದರಿಂದ ಪ್ರತಿ ಅರ್ಹ ಕುಟುಂಬ ಜೀವಿತಾವಧಿಯಲ್ಲಿ ಗರಿಷ್ಠ 5 ಲಕ್ಷ ರು. ಮೊತ್ತದವರೆಗೆ ಈ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಬಹುದಾಗಿದೆ.

Tap to resize

Latest Videos

ಯೋಜನೆಯಡಿ ದನ, ಕುರಿ, ಹಂದಿ ಕೊಟ್ಟಿಗೆ, ಕೋಳಿ ಶೆಡ್‌, ಇಂಗು ಗುಂಡಿ, ಕೃಷಿ ಹೊಂಡ ನಿರ್ಮಾಣ, ತೆಂಗು, ಅಡಿಕೆ, ದ್ರಾಕ್ಷಿ, ದಾಳಿಂಬೆ ಇನ್ನಿತರೆ ತೋಟಗಾರಿಕಾ ಬೆಳೆಯನ್ನು ಹೊಸದಾಗಿ ನಿರ್ಮಿಸುವುದು, ಇರುವ ತೋಟವನ್ನು ಪುನಶ್ಚೇತನಗೊಳಿಸುವುದು ಸೇರಿದಂತೆ ನರೇಗಾ ಯೋಜನೆಯಡಿ ಬರುವ 89 ವೈಯಕ್ತಿಕ ಕಾಮಗಾರಿಗಳ ಪೈಕಿ ಗ್ರಾಮೀಣ ಭಾಗದ ಪ್ರತಿ ಕುಟುಂಬ ಗರಿಷ್ಠ 5 ಲಕ್ಷ ರು. ಮೊತ್ತದ ವರೆಗೆ ವಿವಿಧ ಕಾಮಗಾರಿಗಳನ್ನು ಪಡೆಯಬಹುದಾಗಿದೆ. ಉದಾಹರಣೆಗೆ ಕೋಳಿ ಶೆಡ್‌ಗೆ 60 ಸಾವಿರ, ತೆರೆದ ಬಾವಿ ನಿರ್ಮಾಣಕ್ಕೆ 1.20 ಲಕ್ಷ, ಡ್ರಾಗನ್‌ ಫ್ರೂಟ್‌ ಬೆಳೆ ಬೆಳೆಯಲು 1.54 ಲಕ್ಷ ರು. (1 ಹೆಕ್ಟೇರ್‌ಗೆ), ಸೀಬೆ ಬೆಳೆಗೆ 1.31 ಲಕ್ಷ ರು.(1 ಹೆಕ್ಟೇರ್‌ಗೆ) ಹೀಗೆ ಗರಿಷ್ಟ 5 ಲಕ್ಷ ರು. ವರೆಗಿನ ಕಾಮಗಾರಿಗಳನ್ನು ಒಂದೇ ಕುಟುಂಬ ಪಡೆಯಬಹುದು.

ಅಧಿಕಾರಿಗಳ ನಿರ್ಲಕ್ಷ್ಯ, ಯಾದಗಿರಿಯಲ್ಲಿ ನರೇಗಾ ಕೆಲಸಕ್ಕಾಗಿ ಮಹಿಳೆಯರ ಅಲೆದಾಟ

ಕೇಂದ್ರ ಸರ್ಕಾರ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಗರಿಷ್ಠ ಎರಡು ಲಕ್ಷ ರು. ಮೊತ್ತದವರೆಗೆ ವೈಯಕ್ತಿಕ ಕಾಮಗಾರಿಗಳನ್ನು ನೀಡಲು ಮಿತಿ ನಿಗದಿಪಡಿಸಿದ್ದರೂ ಮಿತಿಯನ್ನು ಹೆಚ್ಚಿಸುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೈಯಕ್ತಿಕ ಕಾಮಗಾರಿಗಳ ಗರಿಷ್ಠ ಮಿತಿಯನ್ನು 5 ಲಕ್ಷ ರು.ಗಳಿಗೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಇಲಾಖೆಯು ಗರಿಷ್ಠ ಮಿತಿ ಹೆಚ್ಚಿಸಿ ಆದೇಶ ಹೊರಡಿಸಿದೆ.

ಯಾರ್‍ಯಾರು ಅರ್ಹರು-ಷರತ್ತುಗಳೇನು?

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳಾ ಪ್ರಧಾನ ಕುಟುಂಬಗಳು, ಅಂಗವಿಕಲ ಕುಟುಂಬಗಳು, ಭೂ-ಸುಧಾರಣಾ ಫಲಾನುಭವಿಗಳು, ವಸತಿ ಯೋಜನೆಗಳ ಫಲಾನುಭವಿಗಳು, ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು ಈ ಯೋಜನೆಗೆ ಅರ್ಹರು.
ಪ್ರತಿ ಕುಟುಂಬವು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಗಳನ್ನು ಪಡೆದುಕೊಳ್ಳಬಹುದಾಗಿದೆ. ಅರ್ಹ ಕುಟುಂಬಗಳು ವೈಯಕ್ತಿಕ ಕಾಮಗಾರಿಗಳನ್ನು ಪಡೆಯಲು ಸರ್ಕಾರ ಎರಡು ಷರತ್ತುಗಳನ್ನು ವಿಧಿಸಿದೆ. ಫಲಾನುಭವಿಯು ಅಥವಾ ಅರ್ಹ ಕುಟುಂಬ ಕಡ್ಡಾಯವಾಗಿ ತಮ್ಮ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯ ಜಾಬ್‌ ಕಾರ್ಡ್‌ ಹೊಂದಿರಬೇಕು. ಫಲಾನುಭವಿಗೆ ನೀಡಲಾದ ವೈಯಕ್ತಿಕ ಕಾಮಗಾರಿಯಲ್ಲಿ ಆತನ ಕುಟುಂಬದ ಕನಿಷ್ಠ ಒಬ್ಬ ಸದಸ್ಯರಾದರೂ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.

ವಿಜಯನಗರ: ಇನ್ಮುಂದೆ ಹರಪನಹಳ್ಳಿಯಲ್ಲೇ ಹಿಪ್ಪುನೇರಳೆ ಸಸಿ ಲಭ್ಯ..!

ನರೇಗಾ ಅಡಿಯ 89 ಕಾಮಗಾರಿಗಳು

ದನ, ಕುರಿ/ಮೇಕೆ, ಹಂದಿ ಕೊಟ್ಟಿಗೆ, ಕೋಳಿ ಶೆಡ್‌, ಇಂಗುಗುಂಡಿ, ಬಚ್ಚಲುಗುಂಡಿ, ಗೊಬ್ಬರದ ಗುಂಡಿ, ಕೊಳವೆ ಬಾವಿ ಮರುಪೂರಣ ಘಟಕ, ಎರೆಹುಳ ಘಟಕ, ತೆರೆದ ಬಾವಿ, ಅಜೋಲಾ ಘಟಕ, ಕೃಷಿ ಹೊಂಡ, ಕಂದಕ ಬದು ನಿರ್ಮಾಣ, ಜೈವಿಕ ಅನಿಲ ಘಟಕ, ಅಡಿಕೆ, ತೆಂಗು, ಗೇರು, ಮಾವು/ಸಪೋಟ, ದಾಳಿಂಬೆ, ಸೀಬೆ, ತಾಳೆ, ಚಕ್ಕೆ ದಾಲ್ಚಿನ್ನಿ, ಲವಂಗ, ಕಾಳು ಮೆಣಸು, ಸಿಟ್ರಿಸ್‌ (ನಿಂಬೆ, ಮೋಸಂಬಿ, ಕಿತ್ತಳೆ ಇತ್ಯಾದಿ), ಹುಣಸೆ, ನೇರಳೆ, ಸೀತಾಫಲ, ನುಗ್ಗೆ, ನೆಲ್ಲಿ, ಅಂಜೂರ, ಕೋಕೋ, ಹಲಸು, ದಾಕ್ಷಿ, ವೀಳೆದೆಲೆ, ಕರಿಬೇವು, ಕಾಫಿ, ಬಾಳೆ, ಬೆಣ್ಣೆ ಹಣ್ಣು, ಡ್ರಾಗನ್‌ ಫ್ರೂಟ್‌, ಜಾಯಿ ಕಾಯಿ ತೋಟ ನಿರ್ಮಾಣ, ವಿವಿಧ ನರ್ಸರಿ ಅಭಿವೃದ್ಧಿ ಸೇರಿದಂತೆ ಒಟ್ಟು 89 ಬಗೆಯ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಗುರುತಿಸಲಾಗಿದೆ. ಒಂದೊಂದು ಕಾಮಗಾರಿಗೆ ಒಂದೊಂದು ಮೊತ್ತ ನಿಗದಿಪಡಿಸಲಾಗಿದೆ. ಅತಿ ಕನಿಷ್ಠ ಎಂದರೆ ಗೊಬ್ಬರದ ಗುಂಡಿಗೆ 5 ಸಾವಿರ ರು. ಇದೆ. ಉಳಿದಂತೆ ದನದ ಕೊಟ್ಟಿಗೆಗೆ 57 ಸಾವಿರ ರು., ಅಡಿಕೆ ತೋಟಕ್ಕೆ 1.68 ಲಕ್ಷ (1 ಹೆಕ್ಟೇರ್‌), ಡ್ರಾಗನ್‌ ಫ್ರೂಟ್‌ಗೆ 1.54 ಲಕ್ಷ ರು. ಗರಿಷ್ಠ ಅಂದರೆ ದಾಕ್ಷಿ ತೋಟ ನಿರ್ಮಾಣಕ್ಕೆ 4.72 ಲಕ್ಷ ರು. (1 ಹೆಕ್ಟೇರ್‌ಗೆ) ನಿಗದಿಪಡಿಸಲಾಗಿದೆ.

ಏನಿದು ಯೋಜನೆ: ಈ ಯೋಜನೆಯಡಿ ನೋಂದಣಿಯಾದ ಅರ್ಹ ಫಲಾನುಭವಿಗಳಿಗೆ ಪ್ರತಿ ವರ್ಷ ಕನಿಷ್ಠ 100 ದಿನಗಳ ಉದ್ಯೋಗ ಖಾತರಿ ನೀಡಿ ಆ ಮೂಲಕ ಅವರ ಜೀವನಾಧಾರಕ್ಕೆ ವೈಯಕ್ತಿಕ ಆಸ್ತಿಗಳ ಸೃಜನೆಗೆ ನೆರವಾಗುವುದು, ಪಂಚಾಯತ್‌ ರಾಜ್‌ ಸಂಸ್ಥೆಯನ್ನು ಬಲಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

click me!