
ಬೆಂಗಳೂರು (ಮೇ.03) ಗಂಡ ಹೆಂಡತಿ ಜಗಳದಲ್ಲಿ ಇಬ್ಬರು ಪುಟ್ಟ ಮಕಳು ಬಲಿಯಾದ ದುರಂತ ಘಟನೆ ಬೆಂಗಳೂರಿನ ಯಶವಂತಪುರದ ಗೋಕುಲ ಮೊದಲ ಹಂತದ 10ನೇ ಕ್ರಾಸ್‌ನಲ್ಲಿ ನಡೆದಿದೆ. ಪತಿ ಜೊತೆ ತೀವ್ರ ವಾಗ್ವಾದ ನಡೆದಿದೆ. ಪತಿ ಮಾತುಗಳಿಂದ ಮಾನಸಿಕವಾಗಿ ನೊಂದ ಪತ್ನಿ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾನು ಸೇವಿಸಿದ್ದಾಳೆ. ಬೆಳಗ್ಗೆ ಮೂವರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಮಕ್ಕಳು ಬದುಕಿ ಉಳಿಯಲಿಲ್ಲ. ಇತ್ತ ಪತ್ನಿ ಸ್ಥಿತಿ ಗಂಭೀರವಾಗಿದೆ.
ಪತ್ನಿ ಪವಿತ್ರಾ ಮತ್ತು ಪತಿ ಪ್ರಶಾಂತ್ ನಡುವೆ ಕಳೆದ ಹಲವು ದಿನಗಳಿಂದ ಮನಸ್ತಾಪ, ಗಲಾಟೆ ನಡೆಯುತ್ತಲೇ ಇತ್ತು. ಹಲವು ಬಾರಿ ತಾರಕಕ್ಕೇರಿದೆ. ನಿನ್ನೆ(ಮೇ.03) ರಾತ್ರಿ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಜಗಳ ಜೋರಾಗಿದೆ. ಪತಿ ಮಾತುಗಳಿಂದ ಪವಿತ್ರ ತೀವ್ರವಾಗಿ ನೊಂದುಕೊಂಡಿದ್ದಾಳೆ. ನಾಲ್ಕು ವರ್ಷದ ನಿವೇದ್ ಚೌಧರಿ ಹಾಗೂ 2 ವರ್ಷದ ನಿರ್ಮಲ್ ಚೌಧರಿ ಎಂಬ ಇಬ್ಬರು ಮಕ್ಕಳಿಗೆ ತಡ ರಾತ್ರಿ ವಿಷವುಣಿಸಿದ ಪವಿತ್ರ ತಾನು ಸೇವಿಸಿದ್ದಾಳೆ. ಬೆಳಗ್ಗೆ ಎದ್ದಾಗ ಮೂವರು ತೀವ್ರವಾಗಿ ಅಸ್ವಸ್ಥಗೊಂಡು ಗಂಭೀರವಾಗಿದ್ದಾರೆ. ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಮೂವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿವೇದ್ ಹಾಗೂ ನಿರ್ಮಲ್ ಇಬ್ಬರು ಮೃತಪಟ್ಟಿದ್ದಾರೆ. ಇತ್ತ ಪವಿತ್ರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
2 ವರ್ಷ ಹಾಗೂ ನಾಲ್ಕು ವರ್ಷದ ಇಬ್ಬರು ಗಂಡು ಮಕ್ಕಳು ತಂದೆ ತಾಯಿ ಜಗಳ ನೋಡಿ ಭಯಪಟ್ಟಿದ್ದರು, ಗಾಬರಿಯಾಗಿದ್ದರು. ಇಬ್ಬರ ಮಾತಿನ ಚಕಮಕಿ ಮಕ್ಕಳಿಬ್ಬರಲ್ಲೂ ಆತಂಕ ತಂದಿತ್ತು. ಆದರೆ ಇದರ ಪರಿಣಾಮ ಬಗ್ಗೆ ಪುಟಾಣಿ ಮಕ್ಕಳಿಗೆ ಯಾವುದೇ ಅರಿವು ಇರಲಲ್ಲ. ತಾಯಿ ದುಡುಕಿನ ನಿರ್ಧಾರ ತೆಗದುಕೊಂಡಿದ್ದರೆ, ತಂದೆ ಜಗಳ ಕುಟುಂಬವನ್ನು ಈ ಪರಿಸ್ಥಿತಿಗೆ ತಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಯಶವಂತಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪತಿ ಪ್ರಶಾಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇತ್ತ ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು ಮಹಿಳೆಯ ಆರೋಗ್ಯ ಕುರಿತು ವೈದ್ಯರಲ್ಲಿ ವಿಚಾರಿಸಿದ್ದಾರೆ. ಪತಿ ಹಾಗೂ ಪತ್ನಿ ನಡುವಿನ ಗಲಾಟೆಗೆ ಕಾರಣವೇನು? ಕಿರುಕುಳ ಸೇರಿದಂತೆ ಇತರ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ