ಇಂದು ಸುಳ್ಳು ಸುದ್ದಿ, ತೇಜೋವಧೆ ಸುದ್ದಿ ಹೆಚ್ಚಿವೆ: ಸಿಎಂ ಸಿದ್ದರಾಮಯ್ಯ ಕಳವಳ

By Kannadaprabha NewsFirst Published Oct 3, 2024, 4:25 AM IST
Highlights

‘ಗಾಂಧೀಜಿ ಹೇಳಿದಂತೆ ನೈತಿಕ ಪತ್ರಿಕೋದ್ಯಮ ಬರಬೇಕು. ಆದರೆ ಸದ್ಯ ಸುಳ್ಳುಸುದ್ದಿ, ಇನ್ನೊಬ್ಬರ ತೇಜೋವಧೆ ಹಾಗೂ ಊಹಾ ಪತ್ರಿಕೋದ್ಯಮ ಹೆಚ್ಚಾಗಿದ್ದು, ಇದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. 

ಬೆಂಗಳೂರು (ಅ.03): ‘ಗಾಂಧೀಜಿ ಹೇಳಿದಂತೆ ನೈತಿಕ ಪತ್ರಿಕೋದ್ಯಮ ಬರಬೇಕು. ಆದರೆ ಸದ್ಯ ಸುಳ್ಳುಸುದ್ದಿ, ಇನ್ನೊಬ್ಬರ ತೇಜೋವಧೆ ಹಾಗೂ ಊಹಾ ಪತ್ರಿಕೋದ್ಯಮ ಹೆಚ್ಚಾಗಿದ್ದು, ಇದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಮಹಾತ್ಮಾ ಗಾಂಧೀಜಿ 155ನೇ ಜಯಂತಿ ಪ್ರಯುಕ್ತ ಗಾಂಧಿ ಸೇವಾ ಪುರಸ್ಕಾರ ಹಾಗೂ ಟೀಯೆಸ್ಸಾರ್, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮತ್ತು ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

‘ಪತ್ರಕರ್ತರು ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು. ವ್ಯವಸ್ಥೆಯಲ್ಲಿರುವ ದೋಷವನ್ನು ತೋರಿಸುವ, ಅದಕ್ಕೆ ಪರಿಹಾರ ಸೂಚಿಸುವ ಕೆಲಸವನ್ನು ಪತ್ರಿಕೋದ್ಯಮ ಮಾಡಬೇಕು. ಅದು ಬಿಟ್ಟು, ಫೇಕ್ ನ್ಯೂಸ್ ಮಾಡುತ್ತಿರುವುದು ಎಷ್ಟು ಸರಿ? ಇದರ ವಿರುದ್ಧ ಎಲ್ಲರೂ ಹೋರಾಡಬೇಕು’ ಎಂದರು. ‘ಊಹೆಯ ಪತ್ರಿಕೋದ್ಯಮವೂ ಬಹಳ ಕೆಟ್ಟದು. ಇನ್ನೊಬ್ಬರ ತೇಜೋವಧೆ ಮಾಡುವುದೂ ಸರಿಯಲ್ಲ. ಸ್ವಾತಂತ್ರ್ಯ ಪೂರ್ವ ಹಾಗೂ ಬಳಿಕದ ಕೆಲ ವರ್ಷಗಳ ಪತ್ರಿಕೋದ್ಯಮ ಮತ್ತು ಈಗಿನ ಪತ್ರಿಕೋದ್ಯಮಕ್ಕೂ ಬಹಳ ವ್ಯತ್ಯಾಸವಿದೆ. ಅವರು ಹೀಗೆಂದರು, ನೀವೇನಂತೀರಿ ಎನ್ನುತ್ತ ಪ್ರತಿಕ್ರಿಯೆ ಪಡೆಯುವುದೇ ಪತ್ರಿಕೋದ್ಯಮ ಆಗಿದೆ. ಮಾಧ್ಯಮಗಳು ಇಡಿದೀನ ಪತಿ ಪತ್ನಿ ಜಗಳವನ್ನೇ ತೋರಿಸುವುದು ನೈತಿಕ ಪತ್ರಿಕೋದ್ಯಮವೆ? ಎಂದು’ ಕೇಳಿದರು.

Latest Videos

ಕಾಂಗ್ರೆಸ್ ಸರ್ಕಾರವನ್ನು ಹೊಡೆದೋಡಿಸಲು ಮೈತ್ರಿ ಅಗತ್ಯ: ನಿಖಿಲ್ ಕುಮಾರಸ್ವಾಮಿ

ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ: 2019ನೇ ಸಾಲಿಗೆ ಶಿವಾಜಿ ಗಣೇಶನ್, 2020ನೇ ಸಾಲಿಗೆ ಶ್ರೀಕಾಂತಾಚಾರ್ಯ ಆರ್.ಮಣೂರ, 2021ನೇ ಸಾಲಿಗೆ ಡಾ.ಆರ್.ಪೂರ್ಣಿಮಾ, 2022ನೇ ಸಾಲಿಗೆ ಪದ್ಮರಾಜ ದಂಡಾವತಿ, 2023ನೇ ಸಾಲಿಗೆ ಡಾ. ಸರಜೂ ಕಾಟ್ಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ: 2019ನೇ ಸಾಲಿಗೆ ರಾಜೀವ್ ಕಿದಿಯೂರ, 2020ನೇ ಸಾಲಿಗೆ ಇಂದೂಧರ ಹೊನ್ನಾಪುರ, 2021ನೇ ಸಾಲಿಗೆ ಎನ್.ಮಂಜುನಾಥ, 2022ನೇ ಸಾಲಿಗೆ ಚಂದ್ರಶೇಖರ್ ಪಾಲೆತ್ತಾಡಿ, 2023ನೇ ಸಾಲಿಗೆ ಶಿವಲಿಂಗಪ್ಪ ದೊಡ್ಡಮನಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಎರಡೂ ಪ್ರಶಸ್ತಿಗಳು ತಲಾ ₹ 2 ಲಕ್ಷ ನಗದು, ಸ್ಮರಣಿಕೆ ಒಳಗೊಂಡಿವೆ.

ಗಾಂಧಿ ಸೇವಾ ಪುರಸ್ಕಾರ: ಮಹಾತ್ಮಾ ಗಾಂಧಿ ಸೇವಾ ಪುರಸ್ಕಾರವನ್ನು‌ ಹಾವೇರಿ ಜಿಲ್ಲೆಯ ‌ಹೊಸರಿತ್ತಿಯ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ ಮತ್ತು ತುಮಕೂರಿನ ಪ್ರೊ.ಜಿ.ಬಿ.ಶಿವರಾಜು ಅವರಿಗೆ ಪ್ರದಾನ ಮಾಡಲಾಯಿತು. ಒಟ್ಟಾರೆ ₹ 5 ಲಕ್ಷ ಮೊತ್ತದ ಈ ಪ್ರಶಸ್ತಿಯನ್ನು ₹ 2.5 ಲಕ್ಷದಂತೆ‌ ವಿಂಗಡಿಸಿ ನೀಡಲಾಗಿದೆ.

ಜೊತೆಗೆ ಬಾಪೂಜಿ ಕುರಿತು ಪ್ರೌಢ, ಪದವಿಪೂರ್ವ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಇನ್ನು, ‘ಗಾಂಧೀ ಭಾರತವನ್ನು ಕಟ್ಟಲು ಎಲ್ಲರೂ ಶ್ರಮಿಸಬೇಕು.‌ ಗೋಡ್ಸೆ ಭಾರತ ಕಟ್ಟಲು ಮುಂದಾಗುವವರನ್ನು ಸೋಲಿಸುವುದೇ ಗಾಂಧೀಜಿಯವರಿಗೆ ಸಲ್ಲಿಸುವ ನಿಜವಾದ ಗೌರವ. ಕೆಲವರು ಗಾಂಧಿಜಿಯವರನ್ನು ಖಳನಾಯಕರನ್ನಾಗಿ ಮಾಡಲು ಹೊರಟಿದ್ದಾರೆ. ಗೋಡ್ಸೆಯನ್ನು ನಾಯಕರಾಗಿ ಮಾಡುತ್ತಾರೆ. ಇದನ್ನು ನಾವು ಸಹಿಸಿಕೊಳ್ಳಬಾರದು. ಇಂತಹ ಶಕ್ತಿಯನ್ನು ‌ಸೋಲಿಸಬೇಕು’ ಎಂದು ಕರೆಕೊಟ್ಟರು.

ರಾಮನಗರವನ್ನು ಬರಪೀಡಿತ ತಾಲೂಕಾಗಿ ಘೋಷಿಸಲು ಒತ್ತಾಯಿಸುವೆ: ಶಾಸಕ ಇಕ್ಬಾಲ್ ಹುಸೇನ್

‘ಶಿಕ್ಷಣ ಪಡೆದವರೆಲ್ಲರೂ ಬುದ್ಧಿವಂತರಲ್ಲ. ಮನುಷ್ಯತ್ವ ರೂಪಿಸುವ, ವೈಜ್ಞಾನಿಕ ಮನೋಭಾವ ಬೆಳೆಸುವುದರ ಜೊತೆಗೆ ಜನಪರ ಕಾಳಜಿ ಹೊಂದುವಂತ ಶಿಕ್ಷಣ ಬೇಕು. ಸಮಾಜದಲ್ಲಿ ಮೌಢ್ಯ ಬಿತ್ತುವುದನ್ನು ಶಿಕ್ಷಣ ಪಡೆದವರು ತಡೆಯಬೇಕು’ ಎಂದರು. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ‌ ವಹಿಸಿ ಮಾತನಾಡಿದರು. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಇದ್ದರು.

click me!