ಬುರುಡೆ ಕಥೆ ಮುಂದೇನು ? ಎಸ್‌ಐಟಿಗೆ ಈಗ ಜಿಜ್ಞಾಸೆ

Kannadaprabha News   | Kannada Prabha
Published : Aug 14, 2025, 05:14 AM IST
Dharmasthala Case 13th Point Water

ಸಾರಾಂಶ

ಅಸಹಜವಾಗಿ ಸಾವನ್ನಪ್ಪಿದ ನೂರಾರು ಶವಗಳನ್ನು ನಾನೇ ಹೂತು ಹಾಕಿದ್ದೇನೆ ಎಂಬ ಅನಾಮಿಕ ಸಾಕ್ಷಿದಾರನ ದೂರಿನ ಮೇಲೆ ಧರ್ಮಸ್ಥಳ ಗ್ರಾಮದಲ್ಲಿ ಕಳೆದ 14 ದಿನಗಳ ಕಾಲ ನಡೆದ ಉತ್ಖನನ ಕಾರ್ಯ ವಿಫಲವಾಗಿದೆ.

ಬೆಳ್ತಂಗಡಿ : ಅಸಹಜವಾಗಿ ಸಾವನ್ನಪ್ಪಿದ ನೂರಾರು ಶವಗಳನ್ನು ನಾನೇ ಹೂತು ಹಾಕಿದ್ದೇನೆ ಎಂಬ ಅನಾಮಿಕ ಸಾಕ್ಷಿದಾರನ ದೂರಿನ ಮೇಲೆ ಧರ್ಮಸ್ಥಳ ಗ್ರಾಮದಲ್ಲಿ ಕಳೆದ 14 ದಿನಗಳ ಕಾಲ ನಡೆದ ಉತ್ಖನನ ಕಾರ್ಯ ವಿಫಲವಾಗಿದೆ. ಅತಿ ಕಷ್ಟಕರವಾದ, ಬಹುನಿರೀಕ್ಷಿತ 13ನೇ ಪಾಯಿಂಟ್‌ನಲ್ಲಿ ಸತತ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ, 30 ಅಡಿ ಉದ್ದ, 15 ಅಡಿ ಅಗಲ, 20 ಅಡಿ ಆಳದಷ್ಟು ಗುಂಡಿ ಅಗೆದರೂ ಯಾವುದೇ ಕುರುಹು ಪತ್ತೆಯಾಗಲಿಲ್ಲ.

ಇದುವರೆಗೆ ದೂರುದಾರ ಗುರುತಿಸಿದ 16 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದರೂ, ಕಳೇಬರದ ಅವಶೇಷಗಳು ಪತ್ತೆಯಾಗಿಲ್ಲ. ಹೀಗಾಗಿ, ಮುಂದೇನು ಎಂಬ ಜಿಜ್ಞಾಸೆ ಎಸ್‌ಐಟಿಗೆ ಎದುರಾಗಿದೆ.ಈವರೆಗೆ ಸಾಕ್ಷಿ ದೂರುದಾರ ತಿಳಿಸಿದಷ್ಟು ಜಾಗದಲ್ಲಿ ಹೊಂಡ ಅಗೆಯುವ ಕಾರ್ಯ ನಡೆದಿದೆ. ಆತ ನೀಡಿದ ಮಾಹಿತಿಯಂತೆ ಜು.28ರಂದು ಸ್ಥಳ ಮಹಜರು ನಡೆಸುವ ಮೂಲಕ ಪ್ರಾರಂಭವಾದ ಶೋಧ ಪ್ರಕ್ರಿಯೆ ಬುಧವಾರ 14ನೇ ದಿನವನ್ನು ತಲುಪಿತು.

ಎರಡು ಭಾನುವಾರ ಹಾಗೂ ಆ.7ರಂದು ಶೋಧ ಪ್ರಕ್ರಿಯೆ ನಡೆದಿರಲಿಲ್ಲ. ಮೊದಲಿಗೆ ಆತ 13 ಸ್ಥಳ ಗುರುತಿಸಿದ್ದ. ಬಳಿಕ, ವಿಸ್ತರಣೆಯಾಗಿ 16 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ಪೈಕಿ, ಸ್ಥಳ ಸಂಖ್ಯೆ 6ರಲ್ಲಿ ಹಾಗೂ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದ ಶೋಧ ಕಾರ್ಯಾಚರಣೆಗೆ ತೆರಳುವ ವೇಳೆ ಭೂಮಿಯ ಮೇಲ್ಭಾಗದಲ್ಲಿ ಕಳೇಬರದ ಅವಶೇಷಗಳು ಪತ್ತೆಯಾಗಿದ್ದು ಬಿಟ್ಟರೆ ಉಳಿದ ಕಡೆಯಲ್ಲಿ ಯಾವುದೇ ಕುರುಹುಗಳು ಕಂಡು ಬಂದಿಲ್ಲ.

ಈ ಪೈಕಿ, 13ನೇ ಪಾಯಿಂಟ್‌ ಹೆಚ್ಚು ಸವಾಲಿನದ್ದಾಗಿದ್ದು, ಕಾರ್ಯಾಚರಣೆ ನಡೆಸಲು ಹಲವು ಅಡಚಣೆಗಳಿದ್ದವು. ಹೀಗಾಗಿ, ಕಾರ್ಯಾಚರಣೆ ವೇಳೆ ಇದೇ ಮೊದಲ ಬಾರಿಗೆ ಡ್ರೋನ್-ಮೌಂಟೆಡ್‌ ಜಿಪಿಆರ್ ತಂತ್ರಜ್ಞಾನ ಬಳಸಲಾಗಿತ್ತು. ಆದರೆ, ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ. ಆದರೂ, ಇತರೆಡೆಯಂತೆ ಇಲ್ಲಿಯೂ ದೂರುದಾರನ ಸಮ್ಮುಖ ಮಂಗಳವಾರ ಅಗೆತ ನಡೆಸಲಾಯಿತು.

ಬುಧವಾರ ಮತ್ತೆ ಇದೇ ಸ್ಥಳದ ಮುಂದುವರಿದ ಭಾಗವಾಗಿ ಹಿಟಾಚಿ ಬಳಸಿ 30 ಅಡಿ ಉದ್ದ, 15 ಅಡಿ ಅಗಲ, 20 ಅಡಿ ಆಳದಷ್ಟು ಗುಂಡಿ ತೋಡಲಾಯಿತು. ಮಧ್ಯಾಹ್ನ 12.30 ರಿಂದ ಸಂಜೆ 6 ಗಂಟೆ ತನಕ ನಡೆದ ಕಾರ್ಯಾಚರಣೆಯಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ. ಹೊಂಡ ಅಗೆಯುತ್ತಿದ್ದಂತೆ ನೀರು ತುಂಬುತ್ತಿದ್ದ ಕಾರಣ ಪಂಪ್ ಬಳಸಿ ನೀರು ಮೇಲೆತ್ತಿ ಅಗೆತ ಕಾರ್ಯ ಮುಂದುವರಿಸಲಾಯಿತು. ಬುಧವಾರ ಪರಿಸರದಲ್ಲಿ ಹೆಚ್ಚಿನ ಮಳೆಯೂ ಇತ್ತು. ಎಸ್‌ಐಟಿ ತಂಡದೊಂದಿಗೆ ಪೌರ ಕಾರ್ಮಿಕರು, ಮೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಶೋಧ ಕಾರ್ಯ ಮುಗಿದ ಬಳಿಕ ಹಿಟಾಚಿ ಮೂಲಕ ಹೊಂಡ ಮುಚ್ಚಿ ಸೀಲ್ ಮಾಡಲಾಯಿತು.

ಎಸ್‌ಐಟಿ ಅಧಿಕಾರಿಗಳು ಶೋಧ ಪ್ರಕ್ರಿಯೆ ಬಳಿಕ ಪ್ರತಿದಿನ ವರದಿಗಳನ್ನು ತಯಾರಿಸುತ್ತಿದ್ದು, ಸಂಬಂಧಪಟ್ಟವರಿಗೆ ಸಲ್ಲಿಸುತ್ತಿದ್ದಾರೆ. ಹೀಗಾಗಿ, ಎಸ್‌ಐಟಿಯ ಮುಂದಿನ ನಡೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!